*  ಬಿಜೆಪಿಗೆ ಬಾಲಂಗೋಚಿ ಜೆಡಿಎಸ್‌*  ತುಮಕೂರಿನಿಂದ ಓಡಿಸಿ*  ಮಾಜಿ ಎಂಎಲ್‌ಸಿ ಕಾಂತರಾಜು ಕಾಂಗ್ರೆಸ್‌ ಸೇರ್ಪಡೆ 

ಬೆಂಗಳೂರು(ಜ.22): ಬಿಜೆಪಿ(BJP) ಹಾಗೂ ಜೆಡಿಎಸ್‌(JDS) ಎರಡೂ ಪಕ್ಷಗಳು ಅವಕಾಶವಾದಿ ರಾಜಕಾರಣ ಮಾಡುತ್ತಿವೆ. ಇತಿಹಾಸದಲ್ಲಿ ಕಾಣದಷ್ಟು ಭ್ರಷ್ಟಾಚಾರ(Corruption) ಮಾಡುತ್ತಿರುವ ಬಿಜೆಪಿಗೆ ಜೆಡಿಎಸ್‌ ಬಾಲಂಗೋಚಿಯಾಗಿ ನಿಂತಿದ್ದು, ಕೈ ಮುಗಿದು ಕೇಳುತ್ತೇನೆ ಮೊದಲು ತುಮಕೂರಿನಿಂದ ಜೆಡಿಎಸ್‌ ಅನ್ನು ಓಡಿಸಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಕರೆ ನೀಡಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ವಿಧಾನಪರಿಷತ್‌ ಸದಸ್ಯ ಕಾಂತರಾಜು ಅವರು ಕಾಂಗ್ರೆಸ್‌(Congress) ಪಕ್ಷ ಸೇರ್ಪಡೆ ಆದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯು ಆರ್‌ಎಸ್‌ಎಸ್‌ನ(RSS) ಮುಖವಾಡವಾಗಿ ಜನರನ್ನು ಮತಾಂಧರನ್ನಾಗಿ ಮಾಡುವ ತಮ್ಮ ಅಜೆಂಡಾ ಈಡೇರಿಕೆಗೆ ಕೆಲಸ ಮಾಡುತ್ತಿದೆ. ರೈತ ವಿರೋಧಿ, ಜನಸಾಮಾನ್ಯರ ವಿರೋಧಿ ಕಾನೂನುಗಳ ಮೂಲಕ ಶೋಷಣೆ ಮಾಡುತ್ತಿದೆ. ಹೀಗಿದ್ದರೂ ಜೆಡಿಎಸ್‌ ಅವರಿಗೆ ಬಾಲಂಗೋಚಿಯಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು.

Siddu vs BJP ನೆಲದ ಸಮಾಜ ಸುಧಾರಕರನ್ನು ಬಿಜೆಪಿ ಅಂತರಂಗದಲ್ಲಿ ದ್ವೇಷಿಸುತ್ತಿದೆ, ಸಿದ್ದು ಗುದ್ದು

ಪ್ರತಿಯೊಂದರಲ್ಲೂ ಈ ಕೆಟ್ಟ ಸರ್ಕಾರಕ್ಕೆ ಜೆಡಿಎಸ್‌ ಬೆಂಬಲ ನೀಡುತ್ತಿದೆ. ಕೇವಲ ಜಾತಿ ಹೆಸರು ಹೇಳಿಕೊಂಡು ರಾಜಕೀಯ(Politics) ಮಾಡುವ ಜೆಡಿಎಸ್‌ಗೆ ತುಮಕೂರಿನಲ್ಲಿ ಮತ ನೀಡಬಾರದು. ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ ಅವರನ್ನು ತುಮಕೂರಿನಿಂದ ಓಡಿಸಿ ಎಂದು ಮನವಿ ಮಾಡಿದರು.

ಯಾರಿಗೂ ಟಿಕೆಟ್‌ ಭರವಸೆ ನೀಡಿಲ್ಲ- ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಮಾತನಾಡಿ, ಹಲವರು ಪಕ್ಷ ಸೇರ್ಪಡೆಗೆ ಅರ್ಜಿ ಹಾಕಿಕೊಂಡಿದ್ದಾರೆ. ನಾವು ಯಾರಿಗೂ ಟಿಕೆಟ್‌ ನೀಡುವ ಭರವಸೆ ನೀಡಿಲ್ಲ. ಯಾರೇ ಪಕ್ಷಕ್ಕೆ ಬಂದರೂ ಬೇಷರತ್‌ ಬೆಂಬಲ ನೀಡಬೇಕು. ಇನ್ನು ಜಿಲ್ಲಾ ಪಂಚಾಯ್ತಿ, ತಾ.ಪಂ. ಸದಸ್ಯರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ಟಿಕೆಟ್‌ ನೀಡುವ ಬಗ್ಗೆ ಪಕ್ಷ ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದ ಬಳಿಕವೇ ಅಂತಿಮ ತೀರ್ಮಾನ ಮಾಡುತ್ತೇವೆ. ಅಲ್ಲಿಯವರೆಗೂ ನಾನು, ಸಿದ್ದರಾಮಯ್ಯ, ಪರಮೇಶ್ವರ್‌ ಅವರಿಂದ ಮಾತ್ರವೇ ಪಕ್ಷ ಕಟ್ಟಲಾಗಲ್ಲ. ಹೀಗಾಗಿ ಎಲ್ಲರೂ ಸೇರಿ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ತುಮಕೂರು ಮುಖಂಡರಿಗೆ ಕರೆ ನೀಡಿದರು.

ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಚಿವ ಟಿ.ಬಿ. ಜಯಚಂದ್ರ ಮತ್ತಿತರರು ಹಾಜರಿದ್ದರು.

ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ: ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳ(Kerala) ಕಳುಹಿಸಿದೆ ಎಂಬ ಕಾರಣಕ್ಕೆ ಕೇಂದ್ರ ವಿರೋಧಿಸಿಲ್ಲ. ಜತೆಗೆ ಶಂಕರಾಚಾರ್ಯರ ಸ್ತಬ್ಧಚಿತ್ರ ಕಳುಹಿಸಲು ಸೂಚಿಸಿದ್ದೇವೆ ಎನ್ನುವುದು ಶುದ್ಧ ಸುಳ್ಳು. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಕಿಡಿ ಕಾರಿದ್ದರು. 

Mekedatu Politics: ಕೊರೋನಾ ಹೆಚ್ಚಳಕ್ಕೆ ಪ್ರಧಾನಿ ಮೋದಿ ಕಾರಣ: ಸಿದ್ದರಾಮಯ್ಯ

ಜ.18 ರಂದು ಮಾಧ್ಯಮಗಳ ಜತೆ ಮಾತನಾಡಿದ್ದ ಅವರು, ಗಣರಾಜ್ಯೋತ್ಸವ ಪರೇಡ್‌ನಲ್ಲಿ(Republic Day Parade) ಭಾಗವಹಿಸುವ ಸ್ತಬ್ಧಚಿತ್ರ ಮೆರವಣಿಗೆಗೆ ಕೆಲವು ಅಲಿಖಿತ ನಿಯಮಗಳಿವೆ. ಪ್ರತಿ ಮೂರು ವರ್ಷಕೊಮ್ಮೆ ರಾಜ್ಯಗಳು ಸ್ತಬ್ಧಚಿತ್ರ ಕಳುಹಿಸುತ್ತವೆ. ಕೇರಳ ಈಗಾಗಲೇ ಒಮ್ಮೆ ಸ್ತಬ್ಧಚಿತ್ರ ನೀಡಿದೆ. ಇತರ ರಾಜ್ಯಗಳಿಗೆ ಅವಕಾಶ ನೀಡಬೇಕು. ಅಲ್ಲದೆ, ಸ್ತಬ್ಧಚಿತ್ರದ ಕೆಲವು ಮಾರ್ಗದರ್ಶಿಯನ್ನು ಪಾಲಿಸಿಲ್ಲ. ಈ ಕಾರಣಕ್ಕೆ ಕೇರಳದ ಸ್ತಬ್ಧಚಿತ್ರ ಬೇಡ ಎಂದಿದ್ದೇವೆ

ಹಿಂದೆ ಯಾವ ಕಮ್ಯೂನಿಸ್ಟ್‌ ಪಾರ್ಟಿ ನಾರಾಯಣ ಗುರುಗಳ ಮೂರ್ತಿಯನ್ನು ಭಗ್ನಗೊಳಿಸಿತ್ತೋ, ಈಗ ಅವರು ರಾಜಕೀಯಕ್ಕಾಗಿ ನಾರಾಯಣ ಗುರುಗಳು ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌(Congress) ನಾಯಕರು ಪೂರ್ಣ ವಿಷಯ ತಿಳಿದು ಹೇಳಿಕೆ ನೀಡಬೇಕು. ಅದನ್ನು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ನಾರಾಯಣ ಗುರುಗಳ ಭಕ್ತರ ಮತ್ತು ಅನುಯಾಯಿಗಳಿಗೆ ತಪ್ಪು ಸಂದೇಶ ನೀಡಲಾಗಿದೆ ಎಂದು ತಿಳಿಸಿದ್ದರು.