ರಾಜ್ಯದಲ್ಲಿರುವ ಅನಧಿಕೃತ ಕೃಷಿ ಪಂಪ್‌ಸೆಟ್ (ಐಪಿ ಸೆಟ್)ಗಳನ್ನು ಕುಸುಮ್-ಬಿ ಅಡಿಯಲ್ಲಿ ಆದ್ಯತೆ ಮೇರೆಗೆ ಅಧಿಕೃತಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಬೆಂಗಳೂರು (ಜು.23): ರಾಜ್ಯದಲ್ಲಿರುವ ಅನಧಿಕೃತ ಕೃಷಿ ಪಂಪ್‌ಸೆಟ್ (ಐಪಿ ಸೆಟ್)ಗಳನ್ನು ಕುಸುಮ್-ಬಿ ಅಡಿಯಲ್ಲಿ ಆದ್ಯತೆ ಮೇರೆಗೆ ಅಧಿಕೃತಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. ಶಕ್ತಿ ಭವನದಲ್ಲಿ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಅವರು ಕುಸುಮ್-ಬಿ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳು, ರಾಜ್ಯದಲ್ಲಿ 4.5 ಲಕ್ಷ ಅನಧಿಕೃತ ಐಪಿ ಸೆಟ್‌ಗಳ ಪೈಕಿ 2 ಲಕ್ಷ ಐಪಿ ಸೆಟ್ ಸಂಪರ್ಕ ಅಧಿಕೃತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಉಳಿದ ಅನಧಿಕೃತ ಐಪಿ ಸೆಟ್‌ಗಳನ್ನು ಕುಸುಮ್ ಬಿ ಯೋಜನೆ ಅಡಿ ಆದ್ಯತೆ ಮೇರೆಗೆ ಅಧಿಕೃತಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕುಸುಮ್ ಬಿ ಯೋಜನೆ ಅಡಿ ಸೋಲಾರ್ ಐಪಿ ಸೆಟ್ ಅಳವಡಿಸಲು ಕೇಂದ್ರ ಸರ್ಕಾರ ಶೇ. 30, ರಾಜ್ಯ ಸರ್ಕಾರ ಶೇ. 50ರಷ್ಟು ಸಬ್ಸಿಡಿ ನೀಡುತ್ತದೆ. ಉಳಿದ ಮೊತ್ತ ಶೇ. 20ರಷ್ಟನ್ನು ರೈತರು ಭರಿಸಬೇಕು. ಈ ಯೋಜನೆ ಅಡಿಯಲ್ಲಿ 40 ಸಾವಿರ ಐಪಿ ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದ್ದು, ಅದನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಹಾಗೆಯೇ, ಈಗಾಗಲೇ ಯೋಜನೆ ಅಡಿ 25 ಸಾವಿರ ರೈತರು ಹೆಚ್ಚುವರಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ ಯೋಜನೆಗಾಗಿ ರಾಜ್ಯ ಸರ್ಕಾರ 752 ಕೋಟಿ ರು. ವ್ಯಯಿಸಲಿದೆ ಎಂದು ಹೇಳಿದರು. ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಇತರರಿದ್ದರು.
ಸಾಧಕರ ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಾಧನೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿ, ಸಾಹಿತ್ಯದ ಕೆಲಸದಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ 2024-25ನೇ ಸಾಲಿನ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಅನನ್ಯ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ. ಇದು ಒಂದೆಡೆ ಸಾಧಕರಿಗೆ ಸಂತೃಪ್ತಿಯ ಭಾವ ನೀಡಿದರೆ, ಇನ್ನೊಂದೆಡೆ ಇನ್ನಷ್ಟು ಸಾಧಕರು ಮೂಡಿಬರಲು ಪ್ರೇರಣೆಯಾಗುತ್ತದೆ ಎಂದರು.
ಪ್ರಶಸ್ತಿಗಳನ್ನು ನಿರೀಕ್ಷಿಸದೇ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ. ನಿಜವಾದ ಸಾಧಕರನ್ನು ಗುರುತಿಸಿ ಸನ್ಮಾನಿಸುವುದರಿಂದ ಸರ್ಕಾರದ ಗೌರವವೂ ಹೆಚ್ಚುತ್ತಿದೆ ಎಂದು ಹೇಳಿದರು. ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಹಳೆಯ ಭಾಷೆ ಕನ್ನಡ. ಕರ್ನಾಟಕದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆಯುವಷ್ಟು ಪ್ರತಿಭಾನ್ವಿತರು ಹೇರಳವಾಗಿದ್ದಾರೆ. ರಾಜ್ಯದಲ್ಲಿ ಇರುವಷ್ಟು ಪ್ರತಿಭಾವಂತರು ಬೇರೆ ರಾಜ್ಯಗಳಲ್ಲಿ ಕಾಣಲು ಸಾಧ್ಯವಿಲ್ಲ. ಸಾಹಿತ್ಯ, ಸಂಸ್ಕೃತಿ, ಕಲೆ ಇಲ್ಲಿ ಸಮೃದ್ಧವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ ವಿಚಾರದಲ್ಲಿ ಮುಖ್ಯಮಂತ್ರಿಗಳು ಎಂದೆಂದಿಗೂ ಉದಾರತೆಯಿಂದ ನಡೆದುಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಇನ್ನಷ್ಟು ಹಿರಿಮೆ, ಗರಿಮೆ ಬಂದಿದೆ ಎಂದರು.
