ಮೇಕೆದಾಟು ಯೋಜನೆಗೆ ನಾವು ರೆಡಿ, ಕೇಂದ್ರ ಅನುಮತಿ ನೀಡಲಿ: ಸಿಎಂ ಸಿದ್ದರಾಮಯ್ಯ
ಮೇಕೆದಾಟು ಯೋಜನೆ ಮಾಡಲು ನಮ್ಮ ಸರ್ಕಾರ ತಯಾರಿದೆ. ಕೇಂದ್ರ ಸರ್ಕಾರ ಅನುಮತಿ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು (ಜು.21): ಮೇಕೆದಾಟು ಯೋಜನೆ ಮಾಡಲು ನಮ್ಮ ಸರ್ಕಾರ ತಯಾರಿದೆ. ಕೇಂದ್ರ ಸರ್ಕಾರ ಅನುಮತಿ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಯವರು ತಮಿಳುನಾಡು ಸರ್ಕಾರವನ್ನು ನಾವು ಒಪ್ಪಿಸಲಿ ಎಂದು ರಾಜಕೀಯ ಮಾಡುತ್ತಿದ್ದಾರೆ. ಹಾಗಾದರೆ, ಗೋವಾ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರವಿದ್ದು, ಯಾಕೆ ಮಹಾದಾಯಿ ಯೋಜನೆ ಮಾಡಿಲ್ಲ ಎಂದು ಅವರು ತಿರುಗೇಟು ನೀಡಿದರು.
ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಜಮೀನು ಕೊಡಲ್ಲ ಎಂದು ಹೇಳಿಲ್ಲ. ಯಾವುದೇ ಕೈಗಾರಿಕೆಗಳು ರಾಜ್ಯದಿಂದ ಹೋಗುವುದಿಲ್ಲ. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ದು ಮತ್ತು ಅವರ ಪುತ್ರ ನಾರಾ ಲೋಕೇಶ್ ಏನೇ ರಾಜಕೀಯ ಮಾಡಿದರೂ ಸಫಲರಾಗಲ್ಲ ಎಂದರು.
ನಾನೆಲ್ಲಿ ಡಿಕೆಶಿಗೆ ಅವಮಾನ ಎಲ್ಲಿ ಮಾಡಿದ್ದೇನೆ?: ಡಿ.ಕೆ. ಶಿವಕುಮಾರ್ ಗೆ ಮೈಸೂರಿನ ಸಮಾರಂಭದಲ್ಲಿ ಯಾವ ಅವಮಾನವನ್ನೂ ಮಾಡಿಲ್ಲ. ನನಗೆ ಹೇಳಿಯೇ ಡಿ.ಕೆ.ಶಿವಕುಮಾರ್ ಸಭೆಯಿಂದ ಅರ್ಧಕ್ಕೆ ಎದ್ದು ಹೋದರು. ಹೀಗಾಗಿ, ಅವರ ಹೆಸರು ಹೇಳಲಿಲ್ಲ. ವೇದಿಕೆ ಮೇಲೆ ಇಲ್ಲದವರನ್ನು ಸ್ವಾಗತ ಮಾಡಲು ಆಗುತ್ತಾ?. ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ನನ್ನ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಒಡಕು ಮೂಡಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ನಮ್ಮಲ್ಲಿ ಒಡಕು ಮೂಡಿಸಿ ರಾಜಕೀಯ ಲಾಭ ಪಡೆಯುವ ಭ್ರಮೆಯಲ್ಲಿ ಬಿಜೆಪಿ ಇದೆ. ಅವರು ಭ್ರಮೆಯಲ್ಲೆ ಇರುತ್ತಾರೆ ಎಂದು ತಿರುಗೇಟು ನೀಡಿದರು.
ಸುಳ್ಳು ಹೇಳುವ ಬಿಜೆಪಿ ಬಹಿರಂಗ ಚರ್ಚೆಗೆ ಬರಲ್ಲ: ಸರ್ಕಾರದ ಸಾಧನೆಯ ಬಗ್ಗೆ ಸುಳ್ಳು ಹೇಳುವ ಬಿಜೆಪಿಯವರು ಎಂದಿಗೂ ಬಹಿರಂಗ ಚರ್ಚೆಗೆ ಬರುವುದಿಲ್ಲ. ಆದರೆ, ನಾವು ಚರ್ಚೆಗೆ ಸದಾ ಸಿದ್ದ. ಅನೇಕ ಬಾರಿ ಬಿಜೆಪಿಯವರನ್ನು ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಕರೆದಿದ್ದೇನೆ. ಅವರು ಬಂದಿಲ್ಲ. ಸುಳ್ಳು ಹೇಳುವವರು ಯಾವತ್ತೂ ಚರ್ಚೆ ಬರಲ್ಲ. ಅವರು ಬಂದರೆ ನಾನು ಚರ್ಚೆಗೆ ರೆಡಿ ಎಂದು ಸವಾಲು ಹಾಕಿದರು.
ಜಿಎಸ್ಟಿ ಹಾಕುವುದು ನಾವಲ್ಲ: ಸಣ್ಣ ವ್ಯಾಪಾರಸ್ಥರಿಗೆ ಜಿಎಸ್ಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಜಿಎಸ್ಟಿ ಮಾಡಿರೋದು ಕೇಂದ್ರ ಸರ್ಕಾರ. ಜಿಎಸ್ಟಿ ಕೌನ್ಸಿಲ್ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಜಿಎಸ್ಟಿ ಹಾಕುವುದು ನಾವಲ್ಲ, ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಜೊತೆ ಈ ಬಗ್ಗೆ ಮಾತನಾಡುತ್ತೇನೆ. ನಮ್ಮದ್ದು ಏನಾದರೂ ಇದರಲ್ಲಿ ಇದ್ರೆ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳ ಜೊತೆಯೂ ಮಾತಾಡುತ್ತೇನೆ ಎಂದರು.