ಹಣಕಾಸು ಆಯೋಗದ 16ನೇ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಜೊತೆ ಉಪಾಹಾರ ಸೇವಿಸಿದರು.
ನವದೆಹಲಿ (ಜೂ.14): ಹಣಕಾಸು ಆಯೋಗದ 16ನೇ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಜೊತೆ ಉಪಾಹಾರ ಸೇವಿಸಿದರು. ವಾರದಲ್ಲಿ ಎರಡು ಬಾರಿ ಹರಿಪ್ರಸಾದ್‌ರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ವೇಳೆ, ರಾಜ್ಯದ ಸದ್ಯದ ರಾಜಕೀಯ ವಿದ್ಯಮಾನ ಸೇರಿ ಹಲವು ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೂಡ ಈ ವೇಳೆ ಹಾಜರಿದ್ದರು.
ವಾರದ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿ.ಕೆ.ಹರಿಪ್ರಸಾದ್ ಅವರ ಬೆಂಗಳೂರು ನಿವಾಸಕ್ಕೆ ಖುದ್ದು ತೆರಳಿ, ಅವರೊಂದಿಗೆ ಚರ್ಚೆ ನಡೆಸಿದ್ದರು. ಎಐಸಿಸಿ ಅಂಗಳದಲ್ಲಿ ಒಂದು ಕಾಲದಲ್ಲಿ ಪ್ರಭಾವಿಯಾಗಿದ್ದ ಬಿ.ಕೆ.ಹರಿಪ್ರಸಾದ್ ಅವರ ಜೊತೆಗಿನ ಸಿದ್ದರಾಮಯ್ಯ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಮೂಲಕ ಉಭಯ ನಾಯಕರ ನಡುವೆ ಸಂಬಂಧ ಸುಧಾರಣೆಯ ಅಧ್ಯಾಯ ಆರಂಭವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿದ್ದವು.
ಪಂಪ್‌ಸೆಟ್ ಸಬ್ಸಿಡಿಗೆ ವಾರ್ಷಿಕ ₹19000 ಕೋಟಿ: ರಾಜ್ಯ ಸರ್ಕಾರ ಪ್ರತಿ ವರ್ಷ 19,000 ಕೋಟಿ ರು.ಗಳನ್ನು ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸಬ್ಸಿಡಿಯಾಗಿ ನೀಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಆರಂಭಿಸಲೇ ಇಲ್ಲ. ನಾವೇ ಅಧಿಕಾರಕ್ಕೆ ಬಂದು ಈ ಯೋಜನೆಯನ್ನು ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಬುಧವಾರ ‘ಕುಸುಮ್-ಸಿ’ ಯೋಜನೆಗೆ ಚಾಲನೆಗೆ ನೀಡಿ ಅವರು ಮಾತನಾಡಿದರು. ಕೃಷಿ ಫೀಡರ್‌ಗಳ ಸೋಲಾರ್ ವಿದ್ಯುತ್ ಮೂಲಕ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವ ಯೋಜನೆಯಿದು.
ಇದೇ ವೇಳೆ, 70 ಮೆ.ವ್ಯಾ ಸಾಮರ್ಥ್ಯದ ಸೌರವಿದ್ಯುತ್ ಘಟಕಕ್ಕೆ ಸಿಎಂ ಚಾಲನೆ ನೀಡಿದರು. 70 ಮೆವ್ಯಾ ವಿದ್ಯುತ್ ಉತ್ಪಾದನೆಯ ಈ ಸೌರವಿದ್ಯುತ್ ಘಟಕದಿಂದ ರೈತರಿಗೆ ಹಗಲಿನಲ್ಲೇ 3 ಫೇಸ್ ವಿದ್ಯುತನ್ನು 5 ಗಂಟೆಗಳ ಕಾಲ ಒದಗಿಸಲಾಗುತ್ತದೆ. ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿ ಗ್ರಾಮದ ಸುಮಾರು 60 ಎಕರೆ ಪ್ರದೇಶದಲ್ಲಿ 20 ಮೆ.ವ್ಯಾ.ಸಾಮರ್ಥ್ಯದಲ್ಲಿ ಸೋಲಾರ್ ಘಟಕ ಸ್ಥಾಪಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕುಸುಮ್- ಸಿ ಯೋಜನೆಯಡಿ ಸ್ಥಾಪಿಸಲಾಗಿರುವ ಅತಿ ದೊಡ್ಡ ಘಟಕ ಇದಾಗಿದೆ ಎಂದರು.


