ಕರ್ನಾಟಕದ ತೋತಾಪುರಿ ಮಾವಿನ ಪೂರೈಕೆಗೆ ಚಂದ್ರಬಾಬು ನಾಯ್ಡು ಸರ್ಕಾರ ಇರುವ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ತೀವ್ರ ಕುಸಿತ ಕಂಡಿದೆ.

ಬೆಂಗಳೂರು (ಜೂ.13): ಕರ್ನಾಟಕದ ತೋತಾಪುರಿ ಮಾವಿನ ಪೂರೈಕೆಗೆ ಚಂದ್ರಬಾಬು ನಾಯ್ಡು ಸರ್ಕಾರ ಇರುವ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ತೀವ್ರ ಕುಸಿತ ಕಂಡಿದೆ. ವಿಶೇಷವಾಗಿ ಗಡಿನಾಡ ಮಾವು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದು, ರಾಜ್ಯದ ಮಾವಿಗೆ ನಿರ್ಬಂಧ ವಿಧಿಸಿರುವ ಚಿತ್ತೂರು ಜಿಲ್ಲಾಧಿಕಾರಿ ಆದೇಶ ಹಿಂಪಡೆಯುವಂತೆ ಸೂಚಿಸಲು ಕೋರಿದ್ದಾರೆ.

ಕರ್ನಾಟಕ ಸೇರಿ ಬೇರೆ ರಾಜ್ಯಗಳಿಂದ ಬರುವ ತೋತಾಪುರಿ ಮಾವು ಪ್ರವೇಶ ನಿರ್ಬಂಧಿಸಿ ಚಿತ್ತೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತಾವು ಈ ಬಗ್ಗೆ ಮಧ್ಯಪ್ರವೇಶಿಸಿ, ಚಿತ್ತೂರು ಜಿಲ್ಲಾಧಿಕಾರಿಗೆ ಅಗತ್ಯ ನಿರ್ದೇಶನಗಳನ್ನು ನೀಡಿ ಕೂಡಲೇ ನಿರ್ಬಂಧ ರದ್ದುಗೊಳಿಸಲು ಸೂಚಿಸುವಂತೆ ಕೋಡುತ್ತೇನೆ. ಈ ವಿಚಾರವನ್ನು ನೀವು ಅತ್ಯಂತ ಗಂಭೀರವಾಗಿ ಪರಿಗಣಿಸಿ, ರೈತರ ಹಿತದೃಷ್ಟಿಯಿಂದ ಕೃಷಿ ಉತ್ಪನ್ನಗಳ ಸರಾಗ ಸಾಗಾಟಕ್ಕೆ ಅನುವು ಮಾಡಲು ತುರ್ತು ಕ್ರಮ ಕೈಗೊಳ್ಳುತ್ತೀರಿ ಎಂಬ ನಂಬಿಕೆ ಇದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

ಕಳವಳ ಆಗಿದೆ: ಚಿತ್ತೂರು ಜಿಲ್ಲಾಧಿಕಾರಿಗಳ ಕ್ರಮದಿಂದ ತೀವ್ರ ಕಳವಳಂಗೊಂಡಿದ್ದೇನೆ. ಜತೆಗೆ ಈ ಆದೇಶದ ಪಾಲನೆಗಾಗಿ ಕರ್ನಾಟಕ ಹಾಗೂ ತ‌ಮಿಳುನಾಡು ಅಂತಾರಾಜ್ಯ ಗಡಿಯ ಚೆಕ್​​ಪೋಸ್ಟ್​​ಗಳಲ್ಲಿ ಆಂಧ್ರ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು, ಕೃಷಿ ಮಾರುಕಟ್ಟೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದು ಕರ್ನಾಟಕದ ಸಾವಿರಾರು ರೈತರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಗಡಿ ಭಾಗದ ರೈತರು ತಮ್ಮ ಮಾವು ಮಾರಾಟಕ್ಕೆ ಚಿತ್ತೂರನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ. ಈ ನಿಷೇಧದಿಂದ ಕರ್ನಾಟಕದ ಗಡಿ ಭಾಗದ ಮಾವು ಬೆಳೆಗಾರರಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಹಕಾರಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಯಾವುದೇ ಪೂರ್ವ ಸಮಾಲೋಚನೆ, ಸಮನ್ವಯತೆ ಮಾಡದೇ ಈ ರೀತಿಯ ಕಠಿಣ ಕ್ರಮ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿಲ್ಲ.‌ ಇದರಿಂದ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುವ ಹಾಗೂ ಪ್ರತಿಕಾರದ ಕ್ರಮಗಳಿಗೆ ಆಸ್ಪದ ನೀಡುವ ಸಾಧ್ಯತೆ ಇದೆ. ಈಗಾಗಲೇ ಹಲವರು ಈ ಕ್ರಮದಿಂದ ಅಂತರಾಜ್ಯ ತರಕಾರಿ ಮತ್ತು ಇತರ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅಡ್ಡಿ ಎದುರಾಗುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.