ರಾಜಕೀಯದಲ್ಲಿ ಅದೆಲ್ಲಾ ಸಾಮಾನ್ಯ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಂದಾಗುವ ಮೂಲಕ ರಾಜಕೀಯ ಗೊಂದಲಗಳಿಗೆ ತೆರೆ ಬಿದ್ದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ (ನ.30): ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಂದಾಗುವ ಮೂಲಕ ರಾಜಕೀಯ ಗೊಂದಲಗಳಿಗೆ ತೆರೆ ಬಿದ್ದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ನಡುವೆ ಮೊದಲೇ ಚರ್ಚೆ ನಡೆಯಬೇಕಿತ್ತು. ನಾವು ಅದನ್ನೇ ಹೇಳಿದ್ದೆವು. ಇನ್ನೂ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ. ರಾಜಕೀಯದಲ್ಲಿ ಅದೆಲ್ಲಾ ಸಾಮಾನ್ಯ, ಏನೂ ಮಾಡಲಾಗದು. ಇಬ್ಬರು ನಮ್ಮ ನಾಯಕರೇ. ಅವರಿಬ್ಬರು ಒಂದಾಗಿರುವುದು ಸಮಾಧಾನ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ನು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿ, ಅದು ಸುಲಭವಲ್ಲ. ಅದಕ್ಕೆಂದೇ ಕೆಲವು ಮಾನದಂಡಗಳಿವೆ. ಈ ಪ್ರಕಣದಲ್ಲಿ ಅದು ಸಾಧ್ಯವಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೂ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದಕ್ಕೇನೂ ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಇದು ಸಾಮಾನ್ಯ ಎಂದರು. ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಅಹಿಂದ ನಾಯಕರು ತಮ್ಮಲ್ಲಿ ಒಬ್ಬರು ರಾಜ್ಯದ ಸಿಎಂ ಆಗಲಿ ಎಂದು ಬಯಸುತ್ತಾರೆ ಎಂದರು.
ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ
ಶಾಸಕರ, ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು. ಸುವರ್ಣವಿಧಾನ ಸೌಧದಲ್ಲಿ ಶನಿವಾರ ಜರುಗಿದ ತ್ರೈಮಾಸಿಕ ಕೆ.ಡಿ.ಪಿ.ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿಯ ಸಭೆಯಲ್ಲಿ ನಿರ್ಣಯಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಕೆಲ ಮುಖ್ಯ ಇಲಾಖೆಗಳನ್ನು ಹಂಚಿಕೆ ಮಾಡಿ ಆ ಇಲಾಖೆಗಳ ಕುರಿತು ವಿಸ್ತೃತವಾಗಿ ಪ್ರಗತಿ ಪರೀಶಿಲಿಸಲಾಗುತ್ತಿದೆ. ಇದರಿಂದಾಗಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲವಾಗಲಿದೆ.
ಜಿಲ್ಲಾಧಿಕಾರಿಗಳು ಹಾಗೂ ಸಿಇಒ ತಮ್ಮ ಹಂತದ ಸಭೆಯ ಹಾಗೂ ಸಭೆಯ ಅನುಪಾಲನಾ ವರದಿಯನ್ನು ಜನಪ್ರತಿನಿಧಿಗಳಿಗೆ ಒದಗಿಸಲು ಮುಂಚಿತವಾಗಿ ಸಭೆಯ ಮಾಹಿತಿ ನೀಡಲು ಸೂಚಿಸಿದರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಮಾತನಾಡಿ, ಸವಳು- ಜವಳು ಭೂಮಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಅನುದಾನದೊಂದಿಗೆ ಹೆಚ್ಚುವರಿ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಹನಿ ನೀರಾವರಿ ಯೋಜನೆಗಳಿಗೆ ಒದಗಿಸಲಾಗುವ ಸಬ್ಸಿಡಿ ಮೊತ್ತವನ್ನು ಅರ್ಹ ಎಲ್ಲ ರೈತರಿಗೆ ಒದಗಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಬೇಕು.
ತಾಲೂಕುಗಳಿಗೆ ಹೊಸ ಬಸ್ ಒದಗಿಸುವಂತೆ ಮನವಿ ಮಾಡಿದ ಶಾಸಕರಿಗೆ ಸ್ಪಂಧಿಸಿದ ನಿಗಮದ ಅಧ್ಯಕ್ಷರು, ಈಗಾಗಲೇ 300 ಹೊಸ ಬಸ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಖರೀದಿಸಿ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭರ್ತಿ ಮಾಡುವ ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. ಹನಿ ನೀರಾವರಿ ಯೋಜನೆಯಡಿ ನಿಗದಿಪಡಿಸುವ ಗುರಿಯನ್ನು ಪೂರ್ಣಗೊಳಿಸಬೇಕು. ಹೆಸರು ಹಾಗೂ ಉದ್ದು ಖರೀದಿ ಕೇಂದ್ರಗಳು ಸಮರ್ಪಕ ಕಾರ್ಯ ನಿರ್ವಹಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ತಿಳಿಸಿದರು. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಹು ದಿನಗಳಿಂದ ಕಾಮಗಾರಿಗಳನ್ನು ಕೈಗೊಳ್ಳದೆ ಇರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿದರು.


