ನನ್ನ ಭೂಮಿ ಅಭಿಯಾನದ ಅಡಿ ದರ್ಖಾಸ್ತು ಪೋಡಿ ಸಂಬಂಧ ಅಳತೆ ಮಾಡಲಾದ ಭೂಮಿ ಮಾಲೀಕರಿಗೆ ದಾಖಲೆ ನೀಡುವ ಸಮರ್ಪಣಾ ದಿನ ಕಾರ್ಯಕ್ರಮವನ್ನು ಡಿ.6ರಂದು ಹಾಸನದಲ್ಲಿ ಆಯೋಜಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬೆಂಗಳೂರು (ನ.30): ‘ನನ್ನ ಭೂಮಿ’ ಅಭಿಯಾನದ ಅಡಿ ದರ್ಖಾಸ್ತು ಪೋಡಿ ಸಂಬಂಧ ಅಳತೆ ಮಾಡಲಾದ ಭೂಮಿ ಮಾಲೀಕರಿಗೆ ದಾಖಲೆ ನೀಡುವ ‘ಸಮರ್ಪಣಾ ದಿನ’ ಕಾರ್ಯಕ್ರಮವನ್ನು ಡಿ.6ರಂದು ಹಾಸನದಲ್ಲಿ ಆಯೋಜಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಮಾಸಿಕ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಡಿ ದುರಸ್ತಿ ಮಾಡಿಸಲು ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿಯಿತ್ತು. 2018ರಿಂದ 2023ರ ನಡುವೆ ಕೇವಲ 8,500 ಪ್ರಕರಣಗಳಲ್ಲಿ ಮಾತ್ರ ಪೋಡಿ ಮಾಡಲಾಗಿತ್ತು.
ಇದರಿಂದ ಜನರಿಗಾಗುತ್ತಿರುವ ಸಮಸ್ಯೆ ಅರಿತು ಈ ವರ್ಷ ಜನವರಿಯಲ್ಲಿ ‘ನನ್ನ ಭೂಮಿ’ ಅಭಿಯಾನದಡಿ 1.49 ಲಕ್ಷ ಜಮೀನುಗಳನ್ನು ದರ್ಖಾಸ್ತು ಪೋಡಿ ಅಳತೆ ಮಾಡಲು ತೆಗೆದುಕೊಳ್ಳಲಾಗಿತ್ತು. ಅದರ ಅಡಿ ಹಾಸನ ಜಿಲ್ಲೆಯಲ್ಲಿ 17 ಸಾವಿರ ಪ್ರಕರಣಗಳನ್ನು ಅಳತೆಗೆ ತೆಗೆದುಕೊಂಡಿದ್ದು, ಸಾಂಕೇತಿಕವಾಗಿ ದರ್ಖಾಸ್ತುಗೊಂಡ ಪೋಡಿ ದಾಖಲೆಯನ್ನು ಜನರಿಗೆ ನೀಡಲು ಸಮರ್ಪಣಾ ದಿನ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ದಾಖಲೆ ಹಸ್ತಾಂತರಿಸಲಿದ್ದಾರೆ ಎಂದರು.
ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಕಂದಾಯ ಇಲಾಖೆಯಿಂದ ಹಲವು ಪ್ರಮುಖ ಸೇವೆಗಳನ್ನು ಜನರಿಗೆ ನೀಡಲಾಗಿದೆ. ರೈತರಿಗೆ ಕೃಷಿ ಜಮೀನು ಮಂಜೂರು, ಜನರಿಗೆ ಪೋಡಿ ಮಾಡಿಕೊಡುವುದು ಸೇರಿ ಹಲವು ಕೆಲಸಗಳನ್ನು ಮಾಡಲಾಗಿದೆ. ಅಧಿಕಾರಕ್ಕೆ ಬಂದಾಗ ತಹಸೀಲ್ದಾರ್ ನ್ಯಾಯಾಲಯದಲ್ಲಿ 10,774 ಪ್ರಕರಣಗಳು ಅವಧಿ ಮೀರಿದ ಪ್ರಕರಣಗಳಿದ್ದವು. ಅವುಗಳನ್ನು ಇತ್ಯರ್ಥಗೊಳಿಸಿ ಈಗ ಪ್ರಕರಣಗಳ ಸಂಖ್ಯೆ 526ಕ್ಕೆ ಇಳಿಸಲಾಗಿದೆ. ಇನ್ನು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 1 ವರ್ಷಕ್ಕಿಂತ ಹೆಚ್ಚಿನ ಅವಧಿ ಮೀರಿದ 59,339 ಪ್ರಕರಣಗಳು ಬಾಕಿ ಇದ್ದವು. ಈಗ 9,954ಕ್ಕೆ ಇಳಿಸಲಾಗಿದೆ ಎಂದು ವಿವರಿಸಿದರು.
ವಿಎಗಳಿಗೆ ಪ್ರೋತ್ಸಾಹ ಧನ
ರಾಜ್ಯದಲ್ಲಿ 40 ಲಕ್ಷ ಜಮೀನುಗಳಿಗೆ ಪೌತಿ ಖಾತೆಯಾಗದ ಕಾರಣ ಪೌತಿ ಖಾತೆ ಅಭಿಯಾನ ನಡೆಸಿ ಈವರೆಗೆ 3.20 ಲಕ್ಷ ಜಮೀನುಗಳಿಗೆ ಪೌತಿ ಖಾತೆ ಮಾಡಲಾಗಿದೆ. ಇನ್ನು, ಪ್ರತಿ ಗ್ರಾಮ ಆಡಳಿತ ಅಧಿಕಾರಿಗಳಿಗೆ (ವಿಎ) ತಿಂಗಳಿಗೆ ಕಡ್ಡಾಯವಾಗಿ 100 ಪೌತಿ ಖಾತೆ ಮಾಡುವ ಗುರಿ ನಿಗದಿ ಮಾಡಲಾಗಿದೆ. ಅದರಲ್ಲಿ ಪ್ರಗತಿ ಸಾಧಿಸಿದ ವಿಎಗಳಿಗೆ ಪ್ರೋತ್ಸಾಹ ಧನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಲ್, ಕಂದಾಯ ಇಲಾಖೆ ಆಯುಕ್ತ ಮುಲೈ ಮುಗಿಲನ್, ಭೂ ದಾಖಲೆಗಳು ಮತ್ತು ಸರ್ವೇ ಇಲಾಖೆ ಆಯುಕ್ತ ಮಂಜುನಾಥ್ ಇತರರಿದ್ದರು.


