ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಇವತ್ತಿನ ಬ್ರೇಕ್ ಫಾಸ್ಟ್ ಮೀಟಿಂಗ್ ಕುರಿತು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ಶನಿವಾರ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಗದಗ (ನ.30): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಇವತ್ತಿನ ಬ್ರೇಕ್ ಫಾಸ್ಟ್ ಮೀಟಿಂಗ್ ಕುರಿತು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ಶನಿವಾರ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಸಿಎಂ-ಡಿಸಿಎಂ ಸಂಧಾನ ಸಭೆಯನ್ನು ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಹೋಲಿಸಿದ್ದಾರೆ. ಈ ತಾತ್ಕಾಲಿಕ ಶಾಂತಿಯ ನಂತರ ಮತ್ತೆ ಬಾಂಬ್ ಹಾಕುತ್ತಾರೆ (ಜಗಳ ಶುರು ಮಾಡುತ್ತಾರೆ) ಎಂದು ವ್ಯಂಗ್ಯವಾಡಿದ್ದಾರೆ. ಇಬ್ಬರು ನಾಯಕರ ಅಧಿಕಾರದ ಜಗಳದಿಂದಾಗಿ ರಾಜ್ಯದ ಆಡಳಿತ ಅಸ್ತವ್ಯಸ್ತಗೊಂಡಿದೆ.
ಮೂರು ತಿಂಗಳು ಸುಮ್ಮನಿದ್ದು ಮತ್ತೆ ಬಾಂಬ್ ಹಾಕುತ್ತಾರೆ. ಹೀಗಾದರೆ ಕದನ ವಿರಾಮ ಹೇಗೆ? ಇಬ್ಬರ ಜಗಳದಲ್ಲಿ ರಾಜ್ಯದ ಪರಿಸ್ಥಿತಿ ಏನಾಗಿದೆ ಎಂದು ಶ್ರೀರಾಮುಲು ಪ್ರಶ್ನಿಸಿದರು. ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿ, ಏನು ಕದನ ವಿರಾಮ ಮಾಡುತ್ತೀರಿ? ಜನರಿಗೆ ಮೊದಲು ಆಡಳಿತದ ಬಗ್ಗೆ ಕ್ಲಾರಿಟಿ ಕೊಡಿ ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಇರುವ ಅನಿಶ್ಚಿತತೆಯನ್ನು ಪ್ರಸ್ತಾಪಿಸಿದ ಶ್ರೀರಾಮುಲು, ಸಿಎಂ ಇವರೇ ಇರುತ್ತಾರೋ, ಡಿ.ಕೆ. ಶಿವಕುಮಾರ್ ಆಗ್ತಾರಾ, ಅಥವಾ ಸತೀಶ್ ಜಾರಕಿಹೊಳಿ ಆಗ್ತಾರಾ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟು ಮಾತು ತಪ್ಪದ ಮಗಾ ಆಗ್ತಾರಾ? ಅಥವಾ ಸ್ಥಾನ ಬಿಡದೇ ಮಾತು ತಪ್ಪಿದ ಮಗಾ ಆಗ್ತಾರಾ ಅಂತಾ ಜನ ನೋಡುತ್ತಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಜನ ಕಾಯುತ್ತಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಾಕಷ್ಟು ಡಾರ್ಕ್ ಹಾರ್ಸ್ ನಾಯಕರಿದ್ದು, ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್‌ಗೆ ಸ್ಪಷ್ಟತೆ ಇದ್ದಲ್ಲಿ, ಸಿಎಂ ಯಾರು ಎಂದು ಮೊದಲು ಘೋಷಣೆ ಮಾಡಲಿ. ಹೈಕಮಾಂಡ್ ವೀಕ್ ಆದಲ್ಲಿ ಸ್ಪಷ್ಟನೆ ಸಿಗುವುದು ಕಷ್ಟ ಎಂದರು.
ಅವಕಾಶ ಮಾಡಿಕೊಟ್ಟರೆ ಒಳ್ಳೆಯದು
ವಾಲ್ಮೀಕಿ ಸಮುದಾಯದ ನಾಯಕ ಸತೀಶ್ ಜಾರಕಿಹೊಳಿ ಸಿಎಂ ರೇಸ್‌ನಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರಿಗೆ ಅವಕಾಶ ಮಾಡಿಕೊಟ್ಟರೆ ಒಳ್ಳೆಯದು ಎಂದರು. ಈ ಹಿಂದೆ ಬಿಜೆಪಿಯಲ್ಲಿ ತನಗೆ ಡಿಸಿಎಂ ಸ್ಥಾನ ಕೊಡಲಿಲ್ಲ ಎಂದು ಹೇಳಿ, ಸತೀಶ್ ಅವರನ್ನು ಸಿಎಂ ಮಾಡ್ತೀವಿ ಅಂತಾ ಹೇಳಿ ಮಾಡದಿದ್ದಲ್ಲಿ ವಾಲ್ಮೀಕಿ ಸಮುದಾಯವು ಕಾಂಗ್ರೆಸ್‌ನ ಮೇಲೆ ಸಿಟ್ಟಾಗುತ್ತದೆ ಎಂದರು.


