ಕೋಲ್ಕತ್ತಾ, (ಜು.13): ಸಿಪಿಎಂನಿಂದ ಶಾಸಕನಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಶಾಸಕ  ದೇಬೇಂದ್ರನಾಥ್ ರೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ದೀನಜ್‍ಪುರ್‌ನಲ್ಲಿ ನಡೆದಿದೆ.

ಹೆಮ್ತಾಬಾದ್‍ನಲ್ಲಿರುವ ತಮ್ಮ ನಿವಾಸದಲ್ಲಿ  ದೇಬೇಂದ್ರನಾಥ್ ರೇ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ರಾಜ್ಯಕ್ಕೆ ಮತ್ತೆ ಲಾಕ್‌ಡೌನ್ ಸಂಕಷ್ಟ, ವಿದಾಯ ಹೇಳ್ತಾರಾ ಅನುಷ್ಕಾ? ಜು.13ರ ಟಾಪ್ 10 ಸುದ್ದಿ! 

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದೇಬೇಂದ್ರನಾಥ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ನೀಡಬೇಕು. ತನಿಖೆಯಲ್ಲಿ ಕೊಲೆ ಎಂದು ಸಾಬೀತಾದಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಟ್ವಿಟ್ಟರ್‌ನಲ್ಲಿ ಆಗ್ರಹಿಸಿದ್ದಾರೆ.

ಹೆಮ್ತಾಬಾದ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ(ಎಂ) ಪಕ್ಷದಿಂದ ಸ್ಪರ್ಧಿಸಿ ವಿಜೇತರಾಗಿದ್ದ ರೇ ಅವರು ಕಳೆದ ಲೋಕಸಭಾ ಚುನಾವಣೆ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ರೇ ಅವರ ಶವ ಇಂದು (ಸೋಮವಾರ) ಮುಂಜಾನೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಆರಂಭಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ರೇ ಅವರ ಸಾವು ಅನುಮಾನಾಸ್ಪದವಾಗಿರುವುದರಿಂದ ಯಾರೋ ಕೊಲೆ ಮಾಡಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ವಹಿಸಬೇಕೆಂದು ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ.