ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಮನಸ್ಸಿಲ್ಲ ಜೊತೆಗೆ, ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಅರಿವಾಗಿದೆ. ಹೀಗಾಗಿ, ಸಮಾಜಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. 

ಗದಗ/ಕೊಪ್ಪಳ (ಏ.23): ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಮನಸ್ಸಿಲ್ಲ ಜೊತೆಗೆ, ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಅರಿವಾಗಿದೆ. ಹೀಗಾಗಿ, ಸಮಾಜಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಾತ್ಯತೀತ ಹೆಸರಿನಲ್ಲಿ ಜಾತಿ-ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸಿ, ಬ್ರಿಟಿಷರ ಕಾಲದ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ನಾಯಕರು ಮಂಗಳವಾರ ಗದಗ ಹಾಗೂ ಕೊಪ್ಪಳದಲ್ಲಿ ಜನಾಕ್ರೋಶ ಯಾತ್ರೆ ನಡೆಸಿದರು. 

Add Asianetnews Kannada as a Preferred SourcegooglePreferred

ಗದಗಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ನಡೆದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ವಾತಾವರಣವಿದ್ದಾಗ ಕಳೆದ ಬಾರಿ ವೀರಶೈವ-ಲಿಂಗಾಯತ ಧರ್ಮ ಒಡೆದರು. ಈಗ ಸಿಎಂ ಹುದ್ದೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಬಂದಿದ್ದರಿಂದ ಜಾತಿ ಜನಗಣತಿಯನ್ನು ತಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಕೇವಲ 20 ತಿಂಗಳ ಅವಧಿಯಲ್ಲಿ ಒಟ್ಟಾರೆ ಹಾಲಿನ ಬೆಲೆಯಲ್ಲಿ 9 ರೂ. ಹೆಚ್ಚಳ ಮಾಡಿದೆ. ಹೀಗಾದರೆ ಬಡವರು, ರೈತರ ಪರಿಸ್ಥಿತಿ ಏನಾಗಬೇಕು?. 

ಬೆಲೆ ಏರಿಕೆ ಎನ್ನುವುದು ಕಾಂಗ್ರೆಸ್ ಸರಕಾರದ 6ನೇ ಗ್ಯಾರಂಟಿ. ಪ.ಜಾತಿ, ಪ.ಪಂಗಡದ 38.5 ಸಾವಿರ ಕೋಟಿ ರು.ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು, ಕೇವಲ ಮುಸ್ಲಿಂ ಸಮಾಜದ ಓಲೈಕೆಯಲ್ಲಿನಿರತವಾಗಿದೆ ಎಂದು ಅವರು ಟೀಕಿಸಿದರು. ನಂತರ, ಕೊಪ್ಪಳದ ಅಶೋಕ ವೃತ್ತದಲ್ಲಿ ನಡೆದ ಬೃಹತ್ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ದೇಶದಲ್ಲಿಯೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಇದೆ. ಇದನ್ನು ನಾನು ಹೇಳುತ್ತಿಲ್ಲ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಹೇಳಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಕರ್ನಾಟಕ ಅಭಿವೃದ್ಧಿಯಲ್ಲಿ ನಂ.2 ಸ್ಥಾನ ಪಡೆದಿದ್ದರೆ ಇಂದು ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಪಡೆದಿದೆ ಎಂದು ವಾಗ್ದಾಳಿ ನಡೆಸಿದರು. 

ದೇವರನ್ನು ಪೂಜಿಸುವವರಿಗೆ ಆಷಾಢಭೂತಿತನ ಇರಬಾರದು: ಸಿಎಂ ಸಿದ್ದರಾಮಯ್ಯ

ತೆರೆದ ವಾಹನದಲ್ಲಿ ಮೆರವಣಿಗೆ: ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಳ್ಳಲು ಗದಗಿಗೆ ಆಗಮಿಸಿದ ಬಿಜೆಪಿ ನಾಯಕರಿಗೆ ಭವ್ಯ ಸ್ವಾಗತ ನೀಡಲಾಯಿತು. ಬಳಿಕ, ನಗರದ ಹತ್ತಿಕಾಳು ಕೂಟದಿಂದ ಗಾಂಧಿ ವೃತ್ತದವರೆಗೆ ವಿಜಯೇಂದ್ರ ಹಾಗೂ ಇತರ ಮುಖಂಡರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನಂತರ, ಗಾಂಧಿ ವೃತ್ತದಲ್ಲಿ ಬೃಹತ್ ಸಮಾವೇಶ ನಡೆಯಿತು. ಸಮಾವೇಶದ ವೇದಿಕೆ ಕಾರ್ಯಕ್ರಮದಲ್ಲಿ ವಿಜಯೇಂದ್ರ ಅವರನ್ನು ಲಂಬಾಣಿ ಸಮಾಜದ ಮಹಿಳೆಯರು ಸನ್ಮಾನಿಸಿ, ಗೌರವಿಸಿದರು. ಅಲ್ಲಿಂದ ಯಾತ್ರೆ ಕೊಪ್ಪಳಕ್ಕೆ ಆಗಮಿಸಿತು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಗಂಗಾ ವತಿ ಶಾಸಕ ಜನಾರ್ದನ ರೆಡ್ಡಿ, ಎನ್. ರವಿಕುಮಾರ ಮತ್ತಿತರ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.