ಕಲಬುರಗಿ ಜಿಲ್ಲೆಯ ಆಳಂದ ಮತಕ್ಷೇತ್ರದಲ್ಲಿ 6,018 ಮತಗಳನ್ನು ಮತದಾರರಿಗೆ ಗೊತ್ತಿಲ್ಲದಂತೆ ಕೈಬಿಡಲಾಗಿತ್ತು ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಹೇಳಿಕೆ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಸೆ.19): ಕಲಬುರಗಿ ಜಿಲ್ಲೆಯ ಆಳಂದ ಮತಕ್ಷೇತ್ರದಲ್ಲಿ 6,018 ಮತಗಳನ್ನು ಮತದಾರರಿಗೆ ಗೊತ್ತಿಲ್ಲದಂತೆ ಕೈಬಿಡಲಾಗಿತ್ತು ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಹೇಳಿಕೆ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎಂದಿರುವ ರಾಹುಲ್‌ಗಾಂಧಿ ಸತ್ಯವನ್ನೇ ಹೇಳಿದ್ದಾರೆ. ಬಿ.ಆರ್.ಪಾಟೀಲ್ ಅದೇ ಕ್ಷೇತ್ರದಲ್ಲಿದ್ದರು. ಮತಗಳ್ಳತನ ಅಗಿರುವುದು ನಿಜ ಎಂದರು. ದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಆಳಂದದಲ್ಲಿ ಅಕ್ರಮ ಮಾರ್ಗದಲ್ಲಿ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ಗಂಭೀರ ಆರೋಪಗಳನ್ನು ಮಾಡಿರುವ ರಾಹುಲ್ ಗಾಂಧಿ, ಒಟ್ಟು 6,018 ಮತದಾರರನ್ನು ಅವರಿಗೆ ಗೊತ್ತಿಲ್ಲದಂತೇ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ಬೆಳೆಹಾನಿಗೆ ಶೀಘ್ರ ಪರಿಹಾರ
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಾಜ್ಯದಲ್ಲಿ ಐದು ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆಯಾದ ಕೂಡಲೇ ಬೆಳೆಹಾನಿಗೆ ರಾಜ್ಯ ಸರ್ಕಾರ ಪರಿಹಾರ ನೀಡಲಿದೆ ಹೇಳಿದರು. ಈ ಮುಂಗಾರು ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದ 80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ವಾಡಿಕೆಗಿಂತ ಕೆಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾದ ಹಿನ್ನಲೆಯಲ್ಲಿ ಅಂದಾಜು 5 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಯಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಕೂಡಲೇ ಬೆಳೆ ಪರಿಹಾರ ಒದಗಿಸಲಾಗುವುದು ಎಂದರು.
ಪ್ರಸ್ತುತ ಹಾಲು ಉತ್ಪಾದನೆಯಲ್ಲಿ ಗುಜರಾತ ಮೊದಲ ಸ್ಥಾನ ಹಾಗೂ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬರುವ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬರಬೇಕಿದೆ. ರೈತರು ಕೃಷಿಯೊಂದಿಗೆ ಹೈನುಗಾರಿಕೆ, ತೋಟಗಾರಿಕೆ, ತರಕಾರಿ ಬೆಳೆಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕೆಂದ ಮುಖ್ಯಮಂತ್ರಿಗಳು, ಪ್ರಸ್ತುತ ದೈಹಿಕ ಶ್ರಮ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಸಕ್ಕರೆ ಕಾಯಿಲೆ ಬರುತ್ತಿದೆ. ಆದ್ದರಿಂದ ಸಕ್ಕರೆ ಪ್ರಮಾಣ ಕಡಿಮೆ ಇರುವ ಸಿರಿಧಾನ್ಯಗಳನ್ನು ರೈತರು ಬೆಳೆಯಲು ಸರ್ಕಾರ ಪ್ರೋತ್ಸಾಹಿಸುತ್ತಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಿ ಎಂದರು.
ಕರ್ನಾಟಕದಲ್ಲಿ ಶೇ. 40ಕ್ಕಿಂತ ಕಡಿಮೆ ಪ್ರದೇಶ ನೀರಾವರಿ ಹೊಂದಿದೆ. ಇನ್ನುಳಿದ ಶೇ. 60ರಷ್ಟು ಮಳೆಯಾಶ್ರಿತ ಕೃಷಿಭೂಮಿಯಾಗಿದ್ದು, ಕೃಷಿ ವಿವಿ ಅಂತಹ ಸಂಸ್ಥೆಗಳು ಮಳೆಯಾಶ್ರಿತ ಪ್ರದೇಶದಲ್ಲಿ ಯಾವ ಬೆಳೆಗಳನ್ನು ಉತ್ಕೃಷ್ಟವಾಗಿ ಬೆಳೆಯಬೇಕೆಂದು ಸಂಶೋಧನೆ ಮಾಡಿ ಅದನ್ನು ರೈತರಿಗೆ ಮುಟ್ಟಿಸುವ ಕೆಲಸ ಇನ್ನೂ ಹೆಚ್ಚು ಮಾಡಬೇಕಿದೆ. ಹೆಚ್ಚು ಸಂಶೋಧನೆ ಹಾಗೂ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ವಿವಿ ಕಾರ್ಯ ಮಾಡಲಿ ಎಂದರು.
