‘ಸಚಿವ ಸಂಪುಟ ನಿರ್ಧರಿಸಿದಂತೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯವು ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಕಲಬುರಗಿಯಲ್ಲಿ ಇದರ ಕಚೇರಿ ಆರಂಭಿಸಲಾಗುವುದು’ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಕಲಬುರಗಿ (ಸೆ.18): ‘ಸಚಿವ ಸಂಪುಟ ನಿರ್ಧರಿಸಿದಂತೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯವು ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಕಲಬುರಗಿಯಲ್ಲಿ ಇದರ ಕಚೇರಿ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕಲಬುರಗಿಯ ಪರೇಡ್ ಮೈದಾನದಲ್ಲಿನ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
‘ಸಂವಿಧಾನದ ಕಲಂ 371(ಜೆ) ರಕ್ಷಣೆಯೊಂದಿಗೆ ಅಭಿವೃದ್ಧಿ ಪಥದಲ್ಲಿರುವ ಕಲ್ಯಾಣ ಕರ್ನಾಟಕದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂಬುದರ ಜೊತೆಗೆ ಅವುಗಳ ವೇಗ ಹೆಚ್ಚಿಸುವುದರ ಮೇಲೆ ನಿಗಾ ವಹಿಸಲು ಪ್ರತ್ಯೇಕ ಸಚಿವಾಲಯ ಆರಂಭಿಸಲು ಮಂಗಳವಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ಒಂದು ವಾರದೊಳಗೆ ಸಿಬ್ಬಂದಿ ಸಹಿತ ಸಚಿವಾಲಯ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದರು. ‘ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಅನುಮೋದನೆಯಿಂದ ಬಹು ನಿರೀಕ್ಷಿತ ಬೇಡಿಕೆ ಕೈಗೂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ವೇಳೆ ಅಂದು ಗೃಹ ಸಚಿವರಾಗಿದ್ದ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಅಗತ್ಯವಿಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಹೀಗಿದ್ದಾಗ ಡಾ। ಮನಮೋಹನಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರ ಈ ಭಾಗಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದೆ. ಆ ಮೂಲಕ ಅಭಿವೃದ್ಧಿಗೆ ಕಾಂಗ್ರೆಸ್ ಶ್ರೀಕಾರ ಹಾಡಿದೆ’ ಎಂದು ತಿಳಿಸಿದರು.
ಏಕೆ ಮತಾಂತರಗೊಳ್ಳುತ್ತಿದ್ದರು?
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು ಎಂದು ಪ್ರತಿಪಾದಿಸಿದ್ದಾರೆ. ಮತಾಂತರದ ಬಗ್ಗೆ ಪ್ರತಿಕ್ರಿಯಿಸಿ, ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು. ಅಸ್ಪೃಶ್ಯತೆ ಏಕೆ ಬಂತು? ಅದನ್ನು ನಾವು ಹುಟ್ಟು ಹಾಕಿದ್ದೇವೆಯೇ? ಎಂದು ಪ್ರಶ್ನಿಸಿದರು. ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲಾ ಧರ್ಮದಲ್ಲಿ ಇದ್ದರೂ, ಮತಾಂತರ ಆಗಿ ಎಂದು ಹೇಳಿಲ್ಲ. ಆದರೂ ಮತಾಂತರವಾಗಿದ್ದಾರೆ. ಅದು ಅವರ ಹಕ್ಕು ಎಂದು ಹೇಳಿದರು.
ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಜಾತಿಗಣತಿಯಲ್ಲಿ ಹೊಸ ಜಾತಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಬಗ್ಗೆ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಯಾರಾದರೂ ಮತಾಂತರಗೊಂಡಿದ್ದರೆ ಅವರ ಈಗಿನ ಜಾತಿಯನ್ನೇ ಮುಂಬರುವ ಜನಗಣತಿ ವೇಳೆ ಪರಿಗಣಿಸಲಾಗುವುದು. ಮತಾಂತರವಾಗುವುದು ಬೇಡ ಎಂದರೂ ವ್ಯವಸ್ಥೆಯ ಪರಿಣಾಮವಾಗಿ ಜನ ಮತಾಂತರಗೊಳ್ಳುತ್ತಾರೆ. ನಾನು ಮುಸ್ಲಿಂ ಆಗಿ ಮತಾಂತರ ಆದರೆ ನನ್ನ ಜಾತಿಯೂ ಆ ಧರ್ಮದ ಜೊತೆ ಸೇರುತ್ತೆ ಅಲ್ವಾ? ನಾನೇನು ಮುಸ್ಲಿಂ ಆಗಿ ಮತಾಂತರ ಆಗಲ್ಲ. ಸುಮ್ಮನೆ ಉದಾಹರಣೆ ಆಗಿ ಹೇಳಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
