ರೈತ ಚೆನ್ನಬಸಪ್ಪ ಮತ್ತು ಸೂರ್ಯಕಾಂತ ಅವರ ಜಂಟಿ ಹೆಸರಿನಲ್ಲಿರುವ ಸರ್ವೆ ನಂ.50ರ 27 ಎಕರೆ 23 ಗುಂಟೆಯಲ್ಲಿ ಬೆಳೆಯಲಾದ ತೊಗರಿ ಮಳೆಯಿಂದ ಸಂಪೂರ್ಣ ಬೆಳೆ ಕೊಚ್ಚಿ ಹೋಗಿದ್ದನ್ನು ಸಿಎಂ ಸಿದ್ದರಾಮಯ್ಯ ವೀಕ್ಷಿಸಿದರು.
ಕಲಬುರಗಿ (ಸೆ.18): ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಆತಂಕದಲ್ಲಿರುವ ತೊಗರಿ ಕಣಜದ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳೆ ಪರಿಹಾರದ ಭರವಸೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾಗಲು ಕಲಬುರಗಿಗೆ ಆಗಮಿಸಿರುವ ಮುಖ್ಯಮಂತ್ರಿಗಳು ಕಲಬುರಗಿ ತಾಲೂಕಿನ ಫರಹತಾಬಾದ ಗ್ರಾಮದ ರೈತರ ಹೊಲಗದ್ದೆಗಳಿಗೆ ಖುದ್ದು ಭೇಟಿ ನೀಡಿ ಇತ್ತೀಚಿನ ಮಳೆಯಿಂದಾದ ಬೆಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದರು.
ರೈತ ಚೆನ್ನಬಸಪ್ಪ ಮತ್ತು ಸೂರ್ಯಕಾಂತ ಅವರ ಜಂಟಿ ಹೆಸರಿನಲ್ಲಿರುವ ಸರ್ವೆ ನಂ.50ರ 27 ಎಕರೆ 23 ಗುಂಟೆಯಲ್ಲಿ ಬೆಳೆಯಲಾದ ತೊಗರಿ ಮಳೆಯಿಂದ ಸಂಪೂರ್ಣ ಬೆಳೆ ಕೊಚ್ಚಿ ಹೋಗಿದ್ದನ್ನು ವೀಕ್ಷಿಸಿದರು. ಮಳೆಯಿಂದ ಮೂರನೇ ಬಾರಿಗೆ ಬಿತ್ತಿದ ತೊಗರಿ ಸಂಪೂರ್ಣ ಹಾಳಾಗಿದೆ. ಬೆಳೆ ಚೆನ್ನಾಗಿದ್ದರೆ ಎಕರೆಗೆ 5-6 ಚೀಲ ತೊಗರಿ ಬೆಳೆತಿತ್ತು ಎಂದು ರೈತರು ಸಿದ್ದರಾಮಯ್ಯನವರ ಮುಂದೆ ಗೋಳಾಡಿದರು. ಡಿಸಿ ಫೌಜಿಯಾ ತರನ್ನುಮ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ಬೆಳೆ ಹಾನಿ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ. ಅವರು, ಜಂಟಿ ಸಮೀಕ್ಷೆಯ ವರದಿ ಬಳಿಕ ಬೆಳೆ ಪರಿಹಾರ ನೀಡಲಾಗುವುದು. ವರದಿಗೆ ಕಾಯುತ್ತಿರುವೆ ಎಂದರು. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಯಲ್ಲಿ ಶೇ.50 ರಷ್ಟು ಹೆಚ್ಚುವರಿ ಮಳೆಯಿಂದ ಬೆಳೆ ಹಾನಿಯಾಗಿದ್ದು, ಈಗಾಗಲೆ ಜಂಟಿ ಸಮೀಕ್ಷೆಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಅನ್ನಭಾಗ್ಯ ಅಕ್ರಮಕ್ಕೆ ಬ್ರೇಕ್
ಕರ್ನಾಟಕದ ಬಡವರ ಪಾಲಿನ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆ ಜಾಲವು ವಿದೇಶಗಳಿಗೆ ರಫ್ತು ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಮತ್ತೆ ಇಂಥ ಜಾಲ ತಲೆ ಎತ್ತದಂತೆ ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ತಡೆಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತಿರುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್‌ಗಳನ್ನು ಅಳವಡಿಸಬೇಕು. ರಾಜ್ಯದಲ್ಲಿರುವ ಎಲ್ಲಾ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ ಸೇರಿ ಅಗತ್ಯ ಇನ್ನಿತರೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ಕನ್ನಡಪ್ರಭ’ದಲ್ಲಿ ಸೋಮವಾರ ಪ್ರಕಟವಾಗಿದ್ದ ‘ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ’ ಶೀರ್ಷಿಕೆಯ ವಿಶೇಷ ವರದಿ ಪ್ರತಿಯನ್ನು ಮುಖ್ಯಮಂತ್ರಿ ಅವರು ತಮ್ಮ ಟೇಬಲ್ ಮುಂದೆಯೇ ಇಟ್ಟುಕೊಂಡು ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿದರು. ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಕಾಳಸಂತೆ ಜಾಲ ರಾಜ್ಯ, ಹೊರ ರಾಜ್ಯದಲ್ಲಿ ಮಾರಾಟ ಮಾಡುತ್ತಿರುವುದು ಆಗಾಗ ಸುದ್ದಿಯಾಗುತ್ತಿದ್ದು, ನಮ್ಮ ಅಧಿಕಾರಿಗಳು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿದ್ದುದನ್ನು ನೋಡಿದ್ದೇವೆ.
ಆದರೆ, ಈ ಜಾಲ ಇನ್ನಷ್ಟು ದೊಡ್ಡದಾಗಿ ಬೆಳೆದು ಅನ್ನಭಾಗ್ಯ ಅಕ್ಕಿಯನ್ನು ಫಾಲಿಶ್ ಮಾಡಿಸಿ ಸಿಂಗಾಪುರ, ದುಬೈ, ಫ್ರಾನ್ಸ್ ಸೇರಿ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇಂಥ ಜಾಲದ ಮೇಲೆ ದಾಳಿ ಮಾಡಿ ಅಧಿಕಾರಿಗಳು ಸಾವಿರಾರು ಟನ್ ಅಕ್ಕಿ ವಶಪಡಿಸಿಕೊಂಡಿರುವುದು ಉತ್ತಮ ಕೆಲಸ. ಇಂತಹ ಜಾಲ ಮತ್ತೆ ತಲೆ ಎತ್ತದಂತೆ ಸಂಪೂರ್ಣ ಮಟ್ಟ ಹಾಕಬೇಕು. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಪತ್ತೆ ಹಚ್ಚಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
