ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಶೋಭಾ, ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿ
ಅಂತಿಮವಾಗಿ ಯಾರು ರಾಜ್ಯಾಧ್ಯಕ್ಷರಾಗುತ್ತಾರೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಮುಂದುವರೆದಿದೆ. ಹಿಂದೆ ಮಾಜಿ ಸಚಿವರಾದ ಸಿ.ಟಿ.ರವಿ, ಬಸನಗೌಡ ಪಾಟೀಲ ಯತ್ನಾಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ವಿ.ಸುನೀಲ್‌ಕುಮಾರ್ ಅವರ ಹೆಸರುಗಳೂ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಪ್ರಮುಖವಾಗಿ ಕೇಳಿಬಂದಿದ್ದವು. ಇದೀಗ ಶೋಭಾ ಕರಂದ್ಲಾಜೆ ಮತ್ತು ವಿಜಯೇಂದ್ರ ಅವರ ಹೆಸರುಗಳು ಚಾಲ್ತಿಗೆ ಬಂದಿವೆ.

ಬೆಂಗಳೂರು(ಅ.25): ಬಿಜೆಪಿಯಲ್ಲಿನ ಬಣ ರಾಜಕೀಯದ ಪರಿಣಾಮ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮತ್ತು ಪ್ರತಿಪಕ್ಷದ ನಾಯಕ ನೇಮಕ ವಿಳಂಬವಾಗುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಇದಕ್ಕೆ ಮುಕ್ತಿ ಸಿಗುವುದೋ ಅಥವಾ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಕಾಯಬೇಕಾಗಬಹುದೋ ಎಂಬುದು ಕುತೂಹಲಕರವಾಗಿದೆ. ಈ ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಕೃಷಿ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರುಗಳು ಚರ್ಚೆಯ ಮುಂಚೂಣಿಗೆ ಬಂದಿವೆ.
ಆದರೆ, ಅಂತಿಮವಾಗಿ ಯಾರು ರಾಜ್ಯಾಧ್ಯಕ್ಷರಾಗುತ್ತಾರೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಮುಂದುವರೆದಿದೆ. ಹಿಂದೆ ಮಾಜಿ ಸಚಿವರಾದ ಸಿ.ಟಿ.ರವಿ, ಬಸನಗೌಡ ಪಾಟೀಲ ಯತ್ನಾಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ವಿ.ಸುನೀಲ್‌ಕುಮಾರ್ ಅವರ ಹೆಸರುಗಳೂ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಪ್ರಮುಖವಾಗಿ ಕೇಳಿಬಂದಿದ್ದವು. ಇದೀಗ ಶೋಭಾ ಕರಂದ್ಲಾಜೆ ಮತ್ತು ವಿಜಯೇಂದ್ರ ಅವರ ಹೆಸರುಗಳು ಚಾಲ್ತಿಗೆ ಬಂದಿವೆ. ಈ ಎರಡು ಹೆಸರುಗಳಲ್ಲೇ ಒಂದು ಅಂತಿಮವಾಗಬಹುದೇ ಅಥವಾ ಹೊಸ ಹೆಸರು ತೇಲಿಬರಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ಸಿದ್ದರಾಮಯ್ಯ ಸರ್ಕಾರದಿಂದ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯ: ಕಟೀಲ್ ವಾಗ್ದಾಳಿ
ರಾಜ್ಯಾಧ್ಯಕ್ಷ ಹುದ್ದೆ ಮತ್ತು ಪ್ರತಿಪಕ್ಷದ ನಾಯಕನ ಹುದ್ದೆ ನೇಮಕ ಒಂದಕ್ಕೊಂದು ತಳಕು ಹಾಕಿಕೊಂಡಿದ್ದು, ಜಾತಿ ಸಮೀಕರಣದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲು ವರಿಷ್ಠರು ಉದ್ದೇಶಿಸಿದ್ದಾರೆ. ಈ ಸಂಬಂಧ ಪಕ್ಷದ ರಾಜ್ಯ ಘಟಕದ ಕೆಲವು ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದರೂ ಬಣ ರಾಜಕೀಯದ ತಿಕ್ಕಾಟದಿಂದ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ವಿಧಾನಸಭಾ ಚುನಾವಣೆ ಮುಗಿದು ಐದು ತಿಂಗಳು ಕಳೆದಿದ್ದು, ಆಗಿನಿಂದಲೂ ಈ ಎರಡೂ ಹುದ್ದೆಗಳ ನೇಮಕ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಬಿಜೆಪಿ ರಾಜ್ಯ ನಾಯಕರು ಶೀಘ್ರ ನೇಮಕವಾಗಲಿದೆ ಎಂಬುದನ್ನು ಹೇಳುತ್ತಲೇ ಬಂದಿದ್ದಾರೆ. ಕೆಲವರು ವರಿಷ್ಠರತ್ತ ಕೈತೋರಿ ಸುಮ್ಮನಾಗಿದ್ದಾರೆ. ಆದರೆ, ವರಿಷ್ಠರು ಮಾತ್ರ ಈ ಎರಡೂ ಹುದ್ದೆಗಳ ನೇಮಕದ ಬಗ್ಗೆ ಚಕಾರ ಎತ್ತಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ ಎಟಿಎಂ ಸರ್ಕಾರ: ನಳಿನ್ ಕುಮಾರ್ ಕಟೀಲ್
ಇದೀಗ ಪಂಚ ರಾಜ್ಯಗಳ ಚುನಾವಣೆ ಎದುರಾಗಿರುವುದರಿಂದ ಮತ್ತಷ್ಟು ವಿಳಂಬವಾಗುವುದೇನೋ ಎಂಬ ಅನುಮಾನವೂ ವ್ಯಕ್ತವಾಗಿದೆ. ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಸದ್ಯಕ್ಕೆ ಅವಧಿ ಮುಗಿದಿದ್ದರೂ ನಳಿನ್‌ಕುಮಾರ್ ಕಟೀಲ್ ಅವರೇ ಮುಂದುವರೆದಿದ್ದಾರೆ. ಅಷ್ಟರ ಮಟ್ಟಿಗೆ ಆ ಹುದ್ದೆ ಖಾಲಿ ಇಲ್ಲ ಎನ್ನಬಹುದಾಗಿದೆ. ಆದರೆ, ಪ್ರತಿಪಕ್ಷದ ನಾಯಕನ ಹುದ್ದೆ ಮಾತ್ರ ಐದು ತಿಂಗಳಿಂದ ಖಾಲಿಯೇ ಉಳಿದಿದೆ.
ಶಾಸಕರು ಪ್ರತಿ ಅಧಿವೇಶನ ಎದುರಾದಾಗಲೂ ಮುಜುಗರ ಅನುಭವಿಸಬೇಕಾದ ಸನ್ನಿವೇಶ ಇದೆ. ಬರುವ ಡಿಸೆಂಬರ್‌ನಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದ್ದು, ಆ ವೇಳೆಗಾದರೂ ವಿಧಾನಸಭೆ ಮತ್ತು ವಿಧಾನಪರಿತ್ತಿನ ಪ್ರತಿಪಕ್ಷದ ನಾಯಕನ ಆಯ್ಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.