Asianet Suvarna News Asianet Suvarna News

ಕರ್ನಾಟಕದಲ್ಲಿ ಕಾಂಗ್ರೆಸ್‌ ಎಟಿಎಂ ಸರ್ಕಾರ: ನಳಿನ್‌ ಕುಮಾರ್‌ ಕಟೀಲ್‌

 ಕರ್ನಾಟಕದಲ್ಲಿ ಕಾಂಗ್ರೆಸ್‌ನ ಎಟಿಎಂ ಸರ್ಕಾರ ಆಡಳಿತ ನಡೆಸುತ್ತಿದೆ. ಕೆಲವು ದಿನಗಳ ಹಿಂದೆ 600 ಕೋಟಿ ರು. ಬಾಕಿ ಮೊತ್ತವನ್ನು ಸರ್ಕಾರ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿತ್ತು. ಈಗ ಸಿಕ್ಕ ಹಣ ಕಮಿಷನ್ ಹಣ ಎಂಬ ಮಾಹಿತಿ ಲಭಿಸಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ 

Congress ATM Government in Karnataka Says Nalin Kumar Kateel grg
Author
First Published Oct 14, 2023, 12:39 PM IST

ಮಂಗಳೂರು(ಅ.14):  ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ನಡೆದ ಐಟಿ ದಾಳಿಯಲ್ಲಿ 23 ಬಾಕ್ಸ್‌ಗಳಲ್ಲಿ ಪತ್ತೆಯಾದ 42 ಕೋಟಿ ರು. ಮೊತ್ತ ಕಮಿಷನ್‌ ಹಣ ಎಂಬುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ದ.ಕ. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ನ ಎಟಿಎಂ ಸರ್ಕಾರ ಆಡಳಿತ ನಡೆಸುತ್ತಿದೆ. ಕೆಲವು ದಿನಗಳ ಹಿಂದೆ 600 ಕೋಟಿ ರು. ಬಾಕಿ ಮೊತ್ತವನ್ನು ಸರ್ಕಾರ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿತ್ತು. ಈಗ ಸಿಕ್ಕ ಹಣ ಕಮಿಷನ್ ಹಣ ಎಂಬ ಮಾಹಿತಿ ಲಭಿಸಿದೆ. ತೆಲಂಗಾಣ ಚುನಾವಣೆಗೆ ಸಂಗ್ರಹಿಸಲಾದ ಹಣ ಇದು ಎನ್ನಲಾಗುತ್ತಿದೆ. ಕೆಲವು ಅಧಿಕಾರಿಗಳೇ ಈ ಹಿಂದೆ ರಾಜ್ಯಪಾಲರಿಗೆ ಸರ್ಕಾರದ ಕಮಿಷನ್ ಬಗ್ಗೆ ದೂರು ಕೊಟ್ಟಿದ್ದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇವೇಗೌಡ ದಂಪತಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ!

ನಾವು ಚುನಾವಣೆ ಹೊತ್ತಲ್ಲೇ ಇದು ಎಟಿಎಂ ಸರ್ಕಾರ ಎಂದಿದ್ದೆವು. ಅಧಿಕಾರಿಗಳ ವರ್ಗಾವಣೆಗೆ ದರ ಪಿಕ್ಸ್‌ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಇದು ಭ್ರಷ್ಟಾಚಾರಿಗಳ ಬೆಂಗಾವಲಾದ ಕಲೆಕ್ಷನ್ ಮತ್ತು ಎಟಿಎಂ ಸರ್ಕಾರ. ಕಾಂಗ್ರೆಸ್ ಸುಳ್ಳು ಹೇಳಿ, ಭರವಸೆ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.

ಕರ್ನಾಟಕ ಕತ್ತಲೆಯಲ್ಲಿದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ರೈತರಿಗೆ ವಿದ್ಯುತ್ ಇಲ್ಲ, ನಿದ್ದೆಗೆಟ್ಟರೂ ರೈತರಿಗೆ ಕರೆಂಟ್ ಇಲ್ಲ. ಇದೊಂದು ಭ್ರಷ್ಟಾಚಾರದ ಹಾಗೂ ಪರ್ಸಂಟೇಜ್ ಸರ್ಕಾರ. ಈಗ ಸಿಕ್ಕಿದ ಹಣ ಸಂಪೂರ್ಣ ಭ್ರಷ್ಟಾಚಾರದ ಹಣವಾಗಿದೆ ಎಂದರು.

ಮೀನುಗಾರರ ಯಾವ ಭರವಸೆ ರಾಹುಲ್‌ ಗಾಂಧಿ ಈಡೇರಿಸಿದ್ದಾರೆ? ವೇದವ್ಯಾಸ್ ಕಾಮತ್‌

ಕಾಂಗ್ರೆಸ್ ದೇಶದಲ್ಲಿ ಭೌದ್ಧಿಕವಾಗಿಯೂ ದಿವಾಳಿಯಾಗಿದೆ. ಇಸ್ರೇಲ್ ಯುದ್ಧದ ವಿಚಾರದಲ್ಲಿ ಭಯೋತ್ಪಾದಕರಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ. ಪ್ಯಾಲೆಸ್ತೀನ್‌ ಪರ ಕಾಂಗ್ರೆಸ್ ಮತ್ತು ಅದರ ಒಕ್ಕೂಟ ನಿಂತಿದೆ. ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದೆ ಎನ್ನುವುದಕ್ಕೆ ಇವತ್ತಿನ ಭ್ರಷ್ಟಾಚಾರ ಸಾಕ್ಷಿ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸಕ್ಕೆ ಹಿಂಜರಿಯುವುದಿಲ್ಲ. ಈಗಾಗಲೇ ಎರಡು ಗುತ್ತಿಗೆದಾರರು ಇವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಟಿ ಯಾರ ಒತ್ತಡದಿಂದಲೂ ದಾಳಿಗಳನ್ನು ಮಾಡುತ್ತಿಲ್ಲ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಬೆನ್ನಲ್ಲೇ ಈಗ ಹಣ ಸಿಕ್ಕಿರುವುದು ಅನುಮಾನ ಮೂಡಿಸಿದೆ ಎಂದರು.

ಸಂಸದ ಸದಾನಂದ ಗೌಡ ಅವರು ಬಿಜೆಪಿ– ಜೆಡಿಎಸ್‌ ಮೈತ್ರಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮಾತುಕತೆ ನಡೆಸುತ್ತೇವೆ’ ಎಂದು ಚುಟುಕಾಗಿ ಉತ್ತರಿಸಿದರು.

ಬಿಜೆಪಿಯ 42 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್‌ ಕಟೀಲ್‌, ‘ಕಾಂಗ್ರೆಸ್‌ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಯಾವಾಗ ಎಂಬ ಪ್ರಶ್ನೆಗೂ ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದಷ್ಟೆ ಉತ್ತರಿಸಿದರು. ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಇದ್ದರು.

Follow Us:
Download App:
  • android
  • ios