ಸರ್ಕಾರ ಬದಲಾಗಲಿದೆ ಎಂದು ಬಿಜೆಪಿಯವರು ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಬಿಜೆಪಿಯವರನ್ನು ಕೇಳಿ ಆಡಳಿತ ಮಾಡಲ್ಲ. ಸರ್ಕಾರ ಹೇಗೆ ನಡೆಸಬೇಕು ಎಂಬುದು ನಮಗೆ ಗೊತ್ತು ಎಂದು ಸಚಿವ ಶಿವರಾಜ ತಂಗಡಗಿ ವಿಪಕ್ಷದವರಿಗೆ ತಿರುಗೇಟು ನೀಡಿದ್ದಾರೆ.

ಬಳ್ಳಾರಿ (ಜು.05): ಸರ್ಕಾರ ಬದಲಾಗಲಿದೆ ಎಂದು ಬಿಜೆಪಿಯವರು ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಬಿಜೆಪಿಯವರನ್ನು ಕೇಳಿ ಆಡಳಿತ ಮಾಡಲ್ಲ. ಸರ್ಕಾರ ಹೇಗೆ ನಡೆಸಬೇಕು ಎಂಬುದು ನಮಗೆ ಗೊತ್ತು ಎಂದು ಸಚಿವ ಶಿವರಾಜ ತಂಗಡಗಿ ವಿಪಕ್ಷದವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕುಟುಂಬವೆಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಾಮಾನ್ಯ. ಕಾಂಗ್ರೆಸ್‌ ಹೈಕಮಾಂಡ್ ಎಲ್ಲವನ್ನೂ ಸರಿಪಡಿಸುತ್ತದೆ.

ಜು.7ರಂದು ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಶಾಸಕರ ಜತೆಗೆ ಕಾಂಗ್ರೆಸ್ ಹಿರಿಯ ನಾಯಕ ಸುರ್ಜೇವಾಲಾ ಮಾತನಾಡಲಿದ್ದಾರೆ. ರಾಜ್ಯದ ಕಾಂಗ್ರೆಸ್ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು. ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಸಿಎಂ 5 ವರ್ಷ ಇರುವ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು, ಸಚಿವರು ಕೈಗೆ ಸಿಗಲ್ಲ ಎನ್ನುವ ಕೆಲವರ ಆರೋಪವಿದ್ದು, ಹೈಕಮಾಂಡ್ ಸೂಚನೆ ನೀಡಿದಂತೆ ಕೆಲಸ ಮಾಡುತ್ತೇವೆ. ತಪ್ಪು ಮಾಡಿದರೆ ತಿದ್ದಲು ನಮ್ಮಲ್ಲಿ ಹಿರಿಯರಿದ್ದಾರೆ ಎಂದರು.

ಕೆಲಸ ಮಾಡದಿದ್ದರೆ ಮನೆಗೆ ನಡೆಯಿರಿ: ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಲು ಆಗದಿದ್ದರೆ ಗಂಟು ಮೂಟೆ ಕಟ್ಟಿಕೊಂಡು ಮನೆಗೆ ನಡೆಯಿರಿ. ನಿಮ್ಮ ನಿರ್ಲಕ್ಷ್ಯತನದಿಂದ ಜನರಿಗೆ ತೊಂದರೆಯಾಗುತ್ತಿದೆ. ಇದು ಸಚಿವ ಶಿವರಾಜ ತಂಗಡಗಿ ಗ್ರಾಪಂ ಪಿಡಿಒಗಳಿಗೆ ನೀಡಿದ ಎಚ್ಚರಿಕೆ. ತಾಲೂಕು ಪಂಚಾಯಿತಿಯಲ್ಲಿ ನಡೆದ ತಾಲೂಕು ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರಟಗಿ ತಾಲೂಕಿನ ಗುಂಡೂರು, ಬೇವಿನಾಳ, ಮುಷ್ಟೂರ, ಗಂಗಾವತಿ ತಾಲೂಕಿನ ಚಿಕ್ಕಜಂತಕಲ್, ಹಣವಾಳ ಮತ್ತು ಕನಕಗಿರಿ ತಾಲೂಕಿನ ಕರಡೋಣಾ, ಮೂಸ್ಟೂರು ಪಂಚಾಯಿತಿಯ ಪಿಡಿಒಗಳು ಜನರಿಗೆ ಸ್ಪಂದಿಸುತ್ತಿಲ್ಲ.

ಕಾರ್ಯ ನಿರ್ವಹಿಸುತ್ತಿಲ್ಲವೆಂದು ದೂರುಗಳು ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುಂಡೂರ ಗ್ರಾಪಂ ಪಿಡಿಒ ಕನಕಪ್ಪ ಅವರನ್ನು ಕೂಡಲೇ ಅಮಾನತು ಮಾಡುವಂತೆ ತಾಪಂ ಇಒಗೆ ಸೂಚಿಸಿದರು. ಉಳಿದವರಿಗೆ ಒಂದು ವಾರ ಗಡುವು ನೀಡಿದ್ದೇನೆ. ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿ ಇಲ್ಲದೆ ಅಮಾನತು ಮಾಡಿ ಮನೆಗೆ ಕಳಿಸಿ ಎಂದ ಅವರು, ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ತರದೆ ಕಾಲಹರಣ ಮಾಡುತ್ತೀದ್ದಿರಿ ಎಂದು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹೀಗಾಗಿ ಜನರು ಸಿಗುವ ನೀರನ್ನೇ ಬಳಸುತ್ತಿದ್ದಾರೆ. ನೀವು ನಿಮ್ಮ ಮನೆಯಲ್ಲಿ ಇಂತಹ ನೀರನ್ನೇ ಕುಡಿಯುತ್ತೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಗರ ಸೇರಿದಂತೆ ತಾಲೂಕುಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದರು ನಿಯಂತ್ರಿಸುವಲ್ಲಿ ವಿಫಲರಾಗಿದ್ದೀರಿ. ಅಂಗನವಾಡಿ ಕಟ್ಟಡಗಳಿಗೆ ಸ್ಥಳ ನೀಡಲು ಕೋರಿದ್ದರು ಸಹ ಏಕೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.