ಜಾತೀಯತೆ ಬಿಟ್ಟರೆ ಬಿಜೆಪಿಯವರಿಗೆ ಏನು ಮಾಡಲಿಕ್ಕೆ ಆಗಲ್ಲ. ಅವರಿಗೆ ಮಾಡುವ ಸಾಮರ್ಥ್ಯವೂ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಬಿಜೆಪಿ ವಿರುದ್ಧ ಹರಿಹಾಯ್ದರು.
ಬಾಗಲಕೋಟೆ (ಮೇ.02): ಜಾತೀಯತೆ ಬಿಟ್ಟರೆ ಬಿಜೆಪಿಯವರಿಗೆ ಏನು ಮಾಡಲಿಕ್ಕೆ ಆಗಲ್ಲ. ಅವರಿಗೆ ಮಾಡುವ ಸಾಮರ್ಥ್ಯವೂ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ವಿರುದ್ಧ ಹರಿಹಾಯ್ದರು. ಕೂಡಲಸಂಗಮದಲ್ಲಿ ಸಂಜೆ ಮಾಧ್ಯಮದವರೊಂದಿಗೆ ಕೇಂದ್ರ ಸರ್ಕಾರದ ಜಾತಿ ಗಣತಿ ಕುರಿತು ಪ್ರತಿಕ್ರಿಯಿಸಿದರು. ಟೀಕೆ ಮಾಡುವ ಸಾಮರ್ಥ್ಯ ಮಾತ್ರ ಬಿಜೆಪಿಗರಿಗೆ ಇದೆ. ಕಾಂಗ್ರೆಸ್ ಪಕ್ಷ ಇವತ್ತಿನವರೆಗೂ ಜಾತಿ ಗಣತಿ ವಿಚಾರ ಚರ್ಚೆ ಮಾಡುತ್ತಿದೆ. ಬಿಜೆಪಿ ಸುಮ್ಮನೆ ಟೀಕೆ ಟಿಪ್ಪಣಿ ಮಾಡುತ್ತಿದೆ. ಈಗ ಮಂಡನೆ ಮಾಡಿದ ಜಾತಿಗಣತಿ ಮೊದಲು ಓದಲಿ.
ಬಿಜೆಪಿಯವರು ಗಣತಿ ಓದಿದ್ದಾರಾ? ಆರ್. ಅಶೋಕ್ ಓದಿದ್ದಾರಾ? ಬಿವೈವಿ ತಿಳಿದುಕೊಂಡಿದ್ದಾರಾ? ವರದಿ ತಯಾರಿಸಲು 1.60 ಲಕ್ಷ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಅವರೆಲ್ಲಾ ಕುರುಬರಾ,? ಎಸ್ಸಿಗಳಾ,? ಆರ್.ಅಶೋಕ್ ಸಿದ್ದರಾಮಯ್ಯ ಮನೆಯಲ್ಲಿ ಜಾತಿ ಗಣತಿ ಮಾಡಿಸಿದ್ದಾರೆ ಅಂತಾರೆ. 1.22 ಲಕ್ಷ ಶಿಕ್ಷಕರು ಕೆಲಸ ಮಾಡಿದ್ದಾರೆ. ಅವರೆಲ್ಲ ಒಂದೇ ಜಾತಿಯವರಾ? ಎಂದು ಸಚಿವರು ಪ್ರಶ್ನಿಸಿದರು.2015ರ ಜನಗಣತಿ ಪ್ರಕಾರ 37 ಲಕ್ಷ ಜನರು ಜಾತಿಗಣತಿಯಲ್ಲಿ ಭಾಗಿಯಾಗಿಲ್ಲ. 2011ರ ಪ್ರಕಾರ ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆ ಇತ್ತು. ಕಾನೂನಿನಲ್ಲಿ ವರ್ಷಕ್ಕೆ ಇಷ್ಟಿಷ್ಟು ಜನಸಂಖ್ಯೆ ಹೆಚ್ಚಾಗುತ್ತೆ ಎಂದು ಜಾತಿ ಗಣತಿ ಮಾಡಿರಲಿಲ್ಲ.
ಅದನ್ನು ಮಾಡಲು ನಮಗೆ ಅವಕಾಶ ಸಿಕ್ಕಿದ್ದರಿಂದ 2015ರಲ್ಲಿ 6.35 ಕೋಟಿ ಜನರನ್ನ ಸರ್ವೆ ಮಾಡಿದ್ದೇವೆ ಎಂದರು. ಶೈಕ್ಷಣಿಕ, ಸಾಮಾಜಿಕ ಗಣತಿಯಲ್ಲಿ 5.98 ಕೋಟಿ ಜನರು ಭಾಗಿ ಆಗಿದ್ದಾರೆ. ಅಂದರೆ ಜನಸಂಖ್ಯೆಯ ಶೇ.94.17 ಆಯ್ತು. 2011ರ ಗಣತಿಯಲ್ಲಿ ಶೇ.95 ಜನರು ಪಾಲ್ಗೊಂಡಿದ್ದರು. ಶೇ.95 ಆಗಿದ್ದ ಗಣತಿ ಸರಿ ಅಂತಾರೆ. ಶೇ.94.17 ಆಗಿದ್ದನ್ನ ಸರಿ ಇಲ್ಲ ಅಂತಾರೆ ಅಂದ್ರೆ ಏನರ್ಥ. ಬಿಜೆಪಿಯವರಿಗೆ ತೃಪ್ತಿ ಇಲ್ಲ, ಬಡವರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಬಾಯಿ ತಗದ್ರೆ ಹಿಂದೂ, ಮುಸ್ಲಿಂ, ಕೊನೆಗೆ ಪಾಕಿಸ್ತಾನ ಅಂತಾರೆ. ಜಾತೀಯತೆ ಬಿಟ್ಟರೆ ಬಿಜೆಪಿಗರಿಗೆ ಏನು ಮಾಡಲಿಕ್ಕಾಗಲ್ಲ ಎಂದು ವಾಗ್ದಾಳಿ ನಡೆಸಿದರು.
ಇದು ಜಾತಿ ಗಣತಿ ಅಲ್ಲವೇ ಅಲ್ಲ, ಸಮೀಕ್ಷೆ ಅಷ್ಟೇ: ಸಚಿವ ಶಿವರಾಜ ತಂಗಡಗಿ
ಸಿದ್ದು ಅವ್ರ ಕೆಲಸ ಕೆಲವರಿಗೆ ಸಹಿಸಲಾಗ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಳ್ಳೆಯ ಕಾರ್ಯವನ್ನು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ದೇಶಭಕ್ತಿ ಬಗ್ಗೆ ಮುಖ್ಯಮಂತ್ರಿ ಅವರು ಮತ್ತೊಬ್ಬರಿಂದ ತಿಳಿದುಕೊಂಡು ಮಾತಾಡುವಂತದ್ದು ಏನು ಇಲ್ಲ ಎಂದು ಹೇಳಿದರು. ಬಸವಣ್ಣ ಅವರ ಬಗ್ಗೆ ಬಹಳ ಜನ ಭಾಷಣ ಮಾಡ್ತಾರೆ. ಆದರೆ ಅವರ ತತ್ವ ಕಾರ್ಯರೂಪಕ್ಕೆ ತಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ. ಬಸವ ಜಯಂತಿ ದಿವಸ ಧರ್ಮ ಪ್ರಚಾರಕ್ಕೆ ಮುಂದಾದವರು ಸಿದ್ದರಾಮಯ್ಯ. ಹೀಗಾಗಿ ಸಿದ್ದರಾಮಯ್ಯ ಅವರೇ ನೀವು ಮುಂದುವರೆಯಿರಿ. ನಿಮ್ಮ ಜೊತೆಗೆ ನಾವು ಸದಾ ಇರುತ್ತೇವೆ ಎಂದು ತಂಗಡಗಿ ತಿಳಿಸಿದರು.


