ವಿಮಾನ ನಿಲ್ದಾಣ ಉದ್ಘಾಟನೆಯಾದಾಗ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಅಗತ್ಯವಿದೆ ಎಂದು ಸಂಸದರಿಗೆ ಗೊತ್ತಿರಲಿಲ್ಲವೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಂಸದ ಬಿ.ವೈ.ರಾಘವೆಂದ್ರ ಹೇಳಿಕೆಗೆ ತಿರುಗೇಟು ನೀಡಿದರು.

ಶಿವಮೊಗ್ಗ (ಸೆ.14): ವಿಮಾನ ನಿಲ್ದಾಣ ಉದ್ಘಾಟನೆಯಾದಾಗ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಅಗತ್ಯವಿದೆ ಎಂದು ಸಂಸದರಿಗೆ ಗೊತ್ತಿರಲಿಲ್ಲವೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಂಸದ ಬಿ.ವೈ.ರಾಘವೆಂದ್ರ ಹೇಳಿಕೆಗೆ ತಿರುಗೇಟು ನೀಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ತೆರಿಗೆ ಹಣದಿಂದ ಈ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಹಾಗಿದ್ದ ಮೇಲೆ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಯಾಕೆ ನೀಡಬೇಕು. ಇದನ್ನು ಅದಾನಿಯಂತಹ ಖಾಸಗಿ ಸಂಸ್ಥೆಗೆ ನೀಡಬೇಕಿತ್ತೇ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

ವಿಮಾನ ನಿಲ್ದಾಣ ಉದ್ಘಾಟನೆಯಾದಾಗ ನೈಟ್ ಲ್ಯಾಂಡಿಂಗ್ ಯಾಕೆ ಇರಲಿಲ್ಲ? ಆಗ ಈ ವ್ಯವಸ್ಥೆ ಅಗತ್ಯವಿದೆ ಎಂದು ಸಂಸದರಿಗೆ ಗೊತ್ತಿರಲಿಲ್ಲವೇ? ಈಗ ನಮ್ಮ ಸರ್ಕಾರ ಬಂದ ಮೇಲೆ ನೈಟ್ ಲ್ಯಾಂಡಿಂಗ್‌ಗೆ ಅಗತ್ಯವಾದ ಉಪಕರಣಗಳು ಬಂದಿವೆ. ಅವುಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಉದ್ಘಾಟಿಸಿದಾಗ ಒಂದಾದರೂ ವಾಣಿಜ್ಯ ವಿಮಾನ ಬಂದಿತ್ತೇ. ನಮ್ಮ ಸರ್ಕಾರ ಬಂದ ನಂತರವೇ ಶಿವಮೊಗ್ಗದಲ್ಲಿ ವಾಣಿಜ್ಯ ವಿಮಾನಗಳು ಸಂಚರಿಸುತ್ತಿವೆ ಎಂದು ಹೇಳಿದರು.

ಸರ್ಕಾರ ಮಾಡದ ಕೆಲಸ ಮಠಗಳು ಮಾಡುತ್ತಿವೆ

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರಗಳು ಮಾಡದೇ ಇರುವಂತಹ ಕೆಲಸವನ್ನು ನಾಡಿನ ಮಠಗಳು ಮಾಡುತ್ತಿವೆ. ಇದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಸಮಾಜದ ಏಳ್ಗೆಯ ದೃಷ್ಟಿಯಿಂದ ಈ ಕಾರ್ಯಕ್ರಮವೊಂದು ಉತ್ತಮ ಉದಾಹರಣೆಗಾಗಿದೆ. ಸ್ವಾತಂತ್ರ್ಯ ಪೂರ್ವ ದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡಿದ್ದಕ್ಕೆ ಶ್ರೀ ಮಠಕ್ಕೆ ಶಿಕ್ಷಣ ಸಚಿವನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣಕ್ಕೆ ಯಾವುದೇ ಮಿತಿ ಇಲ್ಲ, ಬೌಂಡರಿ ಇಲ್ಲ, ಸರ್ವರನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.

ನಾನು ಶಿಕ್ಷಣ ಸಚಿವನಾದ ನಂತರ ಮಕ್ಕಳಲ್ಲಿರುವ, ಕಾಪಿ ಹೊಡೆಯುವ ಸಂಸ್ಕೃತಿ ಹೊಡೆದೊಡಿಸಲು ವೆಬ್ ಕಾಸ್ಟಿಂಗ್ ಪ್ರಾರಂಭಿಸಿ ಕಾಪಿ‌ ನಿಲ್ಲಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ ಎಂದರು. ಮಕ್ಕಳ ಸಾಧನೆಗೆ ಲಿಮಿಟ್ ಇಲ್ಲ, ದೇಶ ಉದ್ಧಾರವಾಗಬೇಕಾದರೆ ಶಾಲೆಯ ಗಂಟೆ ಬಾರಿಸಬೇಕು. ವಿದ್ಯಾಭ್ಯಾಸ ಇದ್ದರೆ ಮಾತ್ರ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ. ನಾಡಿನ ಹಲವಾರು ಮಠಗಳು ಅನ್ನದಾಸೋಹದ ಜತೆಗೆ ಶಿಕ್ಷಣ ದಾಸೋಹ ನೀಡುತ್ತಿವೆ. ನಾನು ಶಿಕ್ಷಣ ಸಚಿವನಾಗಿ ಇಲ್ಲಿಗೆ ಬಂದು ತಿಳಿದುಕೊಂಡು ಹೋಗಿ ಅದನ್ನು ಸರ್ಕಾರಿ ಶಾಲೆಯಲ್ಲಿ ಅಳವಡಿಸಲು ಪ್ರಯತ್ನಿಸುತ್ತೇನೆ ಎಂದರು.