ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನ ಪರಿಷತ್ (ಆ.19): ಒಳ ಮೀಸಲಾತಿ ನಿಗದಿ ನಂತರ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಬಿಜೆಪಿಯ ಕೆ.ವಿವೇಕಾನಂದ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಳಮೀಸಲಾತಿ ನಿಗದಿಯಾಗದ ಕಾರಣ ಯಾವುದೇ ಇಲಾಖೆಗಳಲ್ಲೂ ನೇಮಕಾತಿ ಮಾಡುತ್ತಿಲ್ಲ, ಉಳಿದೆಲ್ಲ ಇಲಾಖೆಗಳಿಗೆ ಹೋಲಿಸಿದರೆ ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಸರ್ಕಾರ ಅನುಮತಿ ನೀಡಿದ ನಂತರ ವಿವಿಧ ಕಾರಣಗಳಿಂದ ಖಾಲಿ ಇರುವ ಹುದ್ದೆ ಭರ್ತಿ ಮಾಡಲಾಗುವುದು. ಇದರಿಂದ ಕಲಿಕಾ ಮಟ್ಟ ಇನ್ನಷ್ಟು ಸುಧಾರಣೆಯಾಗುವ ವಿಶ್ವಾಸವಿದೆ ಎಂದರು.
ಶಾಲಾ ದಾಖಲಾತಿ ಹೆಚ್ಚಿಸಲು ಕ್ರಮ: ಮಕ್ಕಳ ಶಾಲಾ ದಾಖಲಾತಿ ಹೆಚ್ಚಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ತಾಲೂಕುಗಳಲ್ಲಿ 6-10ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಆದರ್ಶ ಶಾಲೆ ಆರಂಭಿಸಲಾಗಿದೆ. ಒಂದನೇ ತರಗತಿಯಿಂದ ಪ್ರಸ್ತುತ ಇರುವ ಕನ್ನಡ/ಇತರೆ ಮಾಧ್ಯಮದ ಜೊತೆ 8,538 ಆಂಗ್ಲ ಮಾಧ್ಯಮದ ತರಗತಿ ಆರಂಭಿಸಲು ಅನುಮತಿ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 7 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಹಾಗೂ147 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲಾಗಿದೆ. ಇದಲ್ಲದೆ ಸುಮಾರು 500 ಪಬ್ಲಿಕ್ ಶಾಲೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಕಾಂಗ್ರೆಸ್ಸಿನ ಎಂ.ಎಲ್. ಅನಿಲ್‌ಕುಮಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಮಕ್ಕಳ ಹಾಜರಾತಿ ಅಧಿಕಗೊಳಿಸಿ: ಶಿಕ್ಷಣ ಇಲಾಖೆಯಲ್ಲಿ ಕಳೆದ ಬಾರಿಗಿಂತ ಹಾಜರಾತಿ ಕಡಿಮೆ ಇದ್ದ ಶಾಲೆಗಳ ಬಗ್ಗೆ ಗಮನ ವಹಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಸರ್ಕಾರಿ ಶಾಲೆಯಲ್ಲಿ ಶೇ. 97 ಪ್ರತಿಶತ ಮಕ್ಕಳ ಹಾಜರಾತಿ ಕಡ್ಡಾಯ ಇರುವಂತೆ ಶಿಕ್ಷಕರು ಮುತುವರ್ಜಿ ವಹಿಸಬೇಕು ಎಂದರು. ವಸತಿ ಶಾಲೆ, ವಸತಿ ಮತ್ತು ಶೈಕ್ಷಣಿಕ ಕೊಠಡಿ ಒಂದೇ ಆಗಿದ್ದು, ಮೂಲ ಭೂತ ಸೌಕರ್ಯ ಇಲ್ಲದಿರುವ ಶಾಲೆಗಳ ಬಗ್ಗೆ ನನ್ನ ಗಮನಕ್ಕೆ ತರಬೇಕು ಎಂದರು.
ಗೊಜನೂರು ಕಸ್ತೂರಿ ಬಾ ವಸತಿ ಶಾಲೆ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ಜರುಗಿತು. ಈ ಬಗ್ಗೆ ಬೆಂಗಳೂರಿನಲ್ಲಿ ಗುರುವಾರ ಸಭೆ ನಡೆಸಿ ಅಗತ್ಯ ಸೌಲಭ್ಯ ಒದಗಿಸಿ ಕೊಡಲಾಗುವುದು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬನ್ನಿ ಎಂದು ಡಿಡಿಪಿಐ ಅವರಿಗೆ ಶಿಕ್ಷಣ ಸಚಿವ ಬಂಗಾರಪ್ಪ ಸೂಚಿಸಿದರು.ರಾಜ್ಯದಲ್ಲಿ ಸರ್ಕಾರದಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಕಳೆದ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಆರಂಭಿಸಲಾಗಿತ್ತು. ಈ ಬಾರಿ ರಾಜ್ಯದ ಉಳಿದ ಭಾಗಗಳಲ್ಲಿ 4000 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 65 ಎಲ್.ಕೆ.ಜಿ, ಯುಕೆಜಿ ಅನುಮೋದನೆ ನೀಡಲಾಗಿತ್ತು. ಇನ್ನೂ ಹೆಚ್ಚಿನ ಎಲ್.ಕೆ.ಜಿ, ಯುಕೆಜಿಗೆ ಅನುಮೋದನೆ ನೀಡಲಾಗುವುದು ಎಂದರು.
