ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ: ಸಚಿವ ಪರಮೇಶ್ವರ್‌

ತುಮಕೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗೆ ಟಿಕೆಟ್‌ ವಿತರಿಸಿ ಶಕ್ತಿ ಯೋಜನೆಗೆ ಗೃಹ ಸಚಿವ ಪರಮೇಶ್ವರ್‌ ಚಾಲನೆ, ಯೋಜನೆ ಅನುಷ್ಠಾನಕ್ಕೆ ಒಂದು ವರ್ಷಕ್ಕೆ ಅಂದಾಜು 5000 ಕೋಟಿ ರು. ಬೇಕು, ಸ್ತ್ರೀ ಸಶಕ್ತರಾದಲ್ಲಿ ಸಮಾಜದ ಸ್ವಾಸ್ಥ್ಯ ಸುಧಾರಣೆ

Shakti Yojana for Women Empowerment in Karnataka Says Home Minister Dr G Parameshwar grg

ತುಮಕೂರು(ಜೂ.12):  ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಗೆ ಭಾನುವಾರ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಚಾಲನೆ ನೀಡುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು, ಈ ಮೂಲಕ ಕರ್ನಾಟಕದಲ್ಲಿ ‘ಐತಿಹಾಸಿಕ ಹೆಜ್ಜೆ’ಯನ್ನು ಇಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ‘ಶಕ್ತಿ ಯೋಜನೆ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಿದ್ದು, ‘ಶಕ್ತಿ’ ಈ 5 ಯೋಜನೆಗಳಲ್ಲಿ ಪ್ರಮುಖ ಮಹಿಳಾ ವಿಶೇಷ ಯೋಜನೆಯಾಗಿದೆ ಎಂದರು.

Shakti Scheme: ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಕಿರಿಕಿರಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ

ಇಡೀ ರಾಜ್ಯದಲ್ಲಿ ಲಕ್ಷಾಂತರ ಸ್ತ್ರೀ ಶಕ್ತಿ ಸಂಘಗಳಿದ್ದು, ಸಮಾಜದ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗವಹಿಸದೆ ಇದ್ದರೆ ವೇಗದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಸಬಲರಾಗಬೇಕು, ಅವರು ಎಲ್ಲೆಡೆ ಸುಲಲಿತವಾಗಿ ಪ್ರಯಾಣಿಸಬೇಕೆಂಬ ದಿಸೆಯಲ್ಲಿ ನಮ್ಮ ಪಕ್ಷ ಚುನಾವಣೆಗೂ ಮುನ್ನಾ ಪ್ರಣಾಳಿಕೆಯಲ್ಲಿ ’ಶಕ್ತಿ ಯೋಜನೆ’ಗೆ ತೀರ್ಮಾನ ಮಾಡಿತ್ತು. ಸಂಪುಟದ ಮೊದಲನೇ ಸಭೆಯಲ್ಲಿಯೇ ಗ್ಯಾರಂಟಿ ಯೋಜನೆಗಳ ಕುರಿತು ತೀರ್ಮಾನಿಸಿ ಸಂಜೆ ವೇಳೆಗೆ ಆದೇಶ ಹೊರಡಿಸಲಾಯಿತು. ಒಂದು ವರ್ಷಕ್ಕೆ ಸರಿ ಸುಮಾರು 5 ಸಾವಿರ ಕೋಟಿ ರು. ಗಳು ಶಕ್ತಿ ಯೋಜನೆಗೆ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಇದನ್ನು ಹೊಂದಿಸುವ ಯೋಜನೆ ಸಹ ರೂಪಿಸಲಾಗಿದೆ ಎಂದರು.

ಮಹಿಳೆ ಸಬಲೆ ಮತ್ತು ಸಶಕ್ತಳಾದಲ್ಲಿ ಸಮಾಜದ ಸ್ವಾಸ್ಥ್ಯ ಸುಧಾರಣೆಯಾಗುತ್ತದೆ. ಪೈಟರ್‌ ಜೆಟ್‌ ಮತ್ತು ವಿಮಾನಗಳನ್ನು ಓಡಿಸುವ ಸಾಮರ್ಥ್ಯವನ್ನು ಮಹಿಳೆ ಇಂದು ಪಡೆದುಕೊಂಡಿದ್ದಾಳೆ, ಐಟಿ-ಬಿಟಿ ಸೇರಿದಂತೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದಾರೆ, ಇದು ಸಮಾಜದ ಅಭಿವೃದ್ಧಿಗೆ ಪೂರಕ ಬೆಳವಣಿಗೆ. ಅಂದಾಜು ರು.82 ಕೋಟಿ ಮೊತ್ತದಲ್ಲಿ ಇಡೀ ರಾಜ್ಯಕ್ಕೆ ಮೊದಲನೆಯದು ಎನ್ನಬಹುದಾದ ಅತ್ಯಾಧುನಿಕ ಸ್ಮಾರ್ಚ್‌ ಸಿಟಿ ಬಸ್‌ ನಿಲ್ದಾಣದ ಕಾಮಗಾರಿಗೆ ಈ ಹಿಂದೆ ತಾವೇ ಅಡಿಗಲ್ಲು ಹಾಕಿದ್ದು, ಇನ್ನು ಎರಡು-ಮೂರು ತಿಂಗಳಲ್ಲಿ ಹೊಸ ಬಸ್‌ ನಿಲ್ದಾಣ ಉದ್ಘಾಟಣೆಗೆ ಸಿದ್ದವಾಗಲಿದೆ. 16 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ‘ತುಮಕೂರಿನ ಸ್ಮಾರ್ಚ್‌ ಸಿಟಿ ಬಸ್‌ ನಿಲ್ದಾಣ’ದಿಂದ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದರು.

ಬೆಂಗಳೂರಿನ ಒಂದು ಭಾಗವಾಗಿ ತುಮಕೂರು ಜಿಲ್ಲೆಯನ್ನು ಪರಿಗಣಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿದ್ದು, ಮೆಟ್ರೋ ರೈಲನ್ನು ತುಮಕೂರಿಗೆ ವಿಸ್ತರಿಸಲು ಪೂರಕ ಕ್ರಮ ಕೈಗೊಳ್ಳಲಾಗುವುದು. ‘ಶಕ್ತಿ ಯೋಜನೆ’ಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕ್ಯಾತ್ಸಂದ್ರ ಹಾಗೂ ಬೆಂಗಳೂರು ಮಾರ್ಗದ ಎರಡು ಬಸ್‌ಗಳನ್ನು ಸಂಪೂರ್ಣ ಮಹಿಳಾ ಪ್ರಯಾಣಿಕರಿಗಾಗಿ ಮೀಸಲಿಡಲಾಗಿದ್ದು, ಈ ಬಸ್‌ಗಳಿಗೆ ಚಾಲನೆ ನೀಡಿದ ಗೃಹ ಸಚಿವರು ಮಹಿಳಾ ಪ್ರಯಾಣಿಕರಿಗೆ ಸಾಂಕೇತಿಕವಾಗಿ ಬಸ್‌ ಟಿಕೆಟ್‌ ವಿತರಿಸಿ, ಮಹಿಳಾ ಪ್ರಯಾಣಿಕರಿಗೆ ಸಿಹಿ ವಿತರಿಸಿ ಶುಭ ಕೋರಿದರು.

ಶಕ್ತಿ ಯೋಜನೆ: ಕೊಡಗಲ್ಲಿ ದಿನಕ್ಕೆ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಲಾಭ..!

ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಾಪೂರ್‌ವಾಡ್‌, ಮೇಯರ್‌ ಪ್ರಭಾವತಿಸುಧೀಶ್ವರ್‌, ಉಪ ಮೇಯರ್‌ ನರಸಿಂಹಮೂರ್ತಿ, ಮಾಜಿ ಶಾಸಕ ರಫೀಕ್‌ ಅಹ್ಮದ್‌, ಉಪವಿಭಾಗಾಧಿಕಾರಿ ಹೋಟೆಲ್‌ ಶಿವಪ್ಪ, ತಹಸೀಲ್ದಾರ್‌ ಸಿದ್ದೇಶ್‌ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ನಗರ ಸಾರಿಗೆ, ಸಾಮಾನ್ಯ, ವೇಗಧೂತ ಸಾರಿಗೆಗಳಲ್ಲಿ ಮಾತ್ರ ಮಹಿಳೆಯರ ಪ್ರಯಾಣಕ್ಕೆ ಯಾವುದೇ ಇತಿಮಿತಿ ಇರುವುದಿಲ್ಲ, ಹೊರ ರಾಜ್ಯದವರು ಈ ಯೋಜನೆ ಉಪಯೋಗ ಪಡೆಯದಿರಲಿ ಎಂಬ ಉದ್ದೇಶದಿಂದ ರಾಜ್ಯದ ಮಹಿಳೆಯರಿಗೆ ಗುರುತಿನ ಚೀಟಿ ಕೇಳಲಾಗುತ್ತದೆ. ಪ್ರತಿ ದಿನ ಇಡೀ ರಾಜ್ಯದ ಸಾರಿಗೆ ನಿಗಮಗಳ ಆದಾಯ ಅಂದಾಜು 26 ಕೋಟಿ ರು.ಗಳಾಗಿರುತ್ತದೆ. ಶಕ್ತಿ ಯೋಜನೆಗೆ ಬೇಕಾಗಬಹುದಾದ ಅಂದಾಜು 5 ಸಾವಿರ ಕೋಟಿ ರು.ಗಳನ್ನು ಸರ್ಕಾರದ ಖಜಾನೆಯಿಂದ ಸಾರಿಗೆ ನಿಗಮ ಮತ್ತು ಸಂಸ್ಥೆಗಳಿಗೆ ಭರಿಸಲಾಗುವುದು ಅಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios