ಕಾಂಗ್ರೆಸ್ ಲೆಜಿಸ್‌ಲೇಟೀವ್ ಪಾರ್ಟಿ ಲೀಡರ್ ಬಾಳಾಸಾಹೇಬ್ ಥೋರಟ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಪಕ್ಷದ ಬಾಗಿಲು ತೆರೆದಿದೆ ಅನ್ನೋ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಪ್ರಮುಖ ನಾಯಕ ಥೋರಟ್ ದಿಢೀರ್ ರಾಜೀನಾಮೆಗೆ ಕಾರಣವೇನು?
ಮುಂಬೈ(ಫೆ.07): ಒಡೆದು ಹೋಗಿರುವ ಭಾರತವನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸಿದೆ. ಈ ಯಾತ್ರೆ ಕನ್ಯಾಕುಮಾರಿಯಿಂದ ಆರಂಭಗೊಂಡು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಂಡಿತ್ತು. ಈ ಯಾತ್ರೆ ಕುರಿತು ಬಿಜೆಪಿ, ಇದು ಭಾರತ್ ಜೋಡೋ ಅಲ್ಲ, ಫ್ಯಾಮಿಲಿ ಜೋಡೋ, ಕಾಂಗ್ರೆಸ್ ಜೋಡೋ ಯಾತ್ರೆ ಎಂದು ವ್ಯಂಗ್ಯವಾಡಿತ್ತು. ಭಾರತ ಒಗ್ಗೂಡಿಸಲು ಹೊರಟ ಕಾಂಗ್ರೆಸ್ ಪಕ್ಷದಲ್ಲೇ ಒಗ್ಗಟ್ಟಿಲ್ಲ ಅನ್ನೋ ಆರೋಪ ಬಲವಾಗಿ ಕೇಳಿಬಂದಿತ್ತು. ಈ ಯಾತ್ರೆ ನಡುವೆ ಹಲವು ನಾಯಕರು ಕಾಂಗ್ರೆಸ್ ತೊರೆದಿದ್ದರು. ಇದೀಗ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಲೆಜಿಸ್‌ಲೇಟೀವ್ ನಾಯಕ ಬಾಳಾಸಾಹೇಬ್ ಥೋರಟ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಬಣ ಹಾಗೂ ಬಂಡಾಯ ಜೋರಾಗಿದೆ ಅನ್ನೋದು ಜಗಜ್ಜಾಹೀರಾಗಿದೆ.
ಥೋರಟ್ ತಮ್ಮ ರಾಜೀನಾಮೆ ಪತ್ರದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ನಾನಾ ಪಟೋಳೆ ಹಾಗೂ ಅವರ ಬಣದಿಂದ ಆಗುತ್ತಿರುವ ಅನ್ಯಾಯದ ಕುರಿತು ಮಾಹಿತಿ ನೀಡಿದ್ದಾರೆ. ಪಟೋಲೆ ಅವರಿಂದ ಅವಮಾನವಾಗುತ್ತಿದೆ. ನನ್ನನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದಾರೆ. ಇಷ್ಟೇ ಅಲ್ಲ ವಿನಾಕಾರಣ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ ಎಂದು ನನ್ನ ವಿರುದ್ಧ ಸತತ ಷಡ್ಯಂತ್ರ ನಡೆಸಲಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಈ ಅವಮಾನ ಸಹಿಸಿಕೊಂಡು ಮುಂದುವರಿಯಲು ಸಾಧ್ಯವಿಲ್ಲ ಎಂದು ಥೋರಟ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅದಾನಿ ಶ್ರೀಮಂತಿಕೆ 609ರಿಂದ 2ನೇ ಸ್ಥಾನಕ್ಕೇರಿದ್ದು ಹೇಗೆ? ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಶ್ನೆ!
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ವೇಳೆ ಬಾಳಾಸಾಹೇಬ್ ಥೋರಟ್ ಹಾಗೂ ನಾನಾ ಪಟೋಲೆ ನಡುವಿನ ಗುದ್ದಾಟ ಬಹಿರಂಗವಾಗಿತ್ತು. ಬಾಳಾಸಾಹೇಬ್ ಥೋರಟ್ ಸಂಬಂಧಿಗೆ ನಾನಾ ಪಟೋಲೆ ಟಿಕೆಟ್ ನಿರಾಕರಿಸಿದ್ದರು. ಹೈಕಮಾಂಡ್ ಒಕೆ ಎಂದಿದ್ದರೂ ನಾನಾ ಪಟೋಲೆ ಟಿಕೆಟ್ ಕೈತಪ್ಪಿಸಿದ್ದರು. ಇದರಿಂದ ಥೋರಟ್ ಸಂಬಂಧಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದರು. ಇಲ್ಲಿಂದ ನಾನಾ ಪಟೋಲೆ ಹಾಗೂ ಬಾಳಾಸಾಹೇಬ್ ಥೋರಟ್ ನಡುವಿನ ಬಡಿದಾಟ ಆರಂಭಗೊಂಡಿತ್ತು
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿದ್ದೇನೆ. ಆದರೆ ಈ ರೀತಿಯ ಪರಿಸ್ಥಿತಿ ಎದುರಾಗಿಲ್ಲ. ಹೀಗಾಗಿ ಕಾಂಗ್ರೆಸ್ ಜೊತೆ ಮುಂದುವರಿಯುತ್ತಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ. ಬಾಳಾಸಾಹೇಬ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಪಕ್ಷದದ ಬಾಗಿಲು ತೆರೆದಿದೆ ಎಂದಿದೆ. ಇದು ಮತ್ತೊಂದು ಸುತ್ತಿನ ಸಂಚಲನಕ್ಕೆ ಕಾರಣವಾಗಿದೆ. ಈಗಾಗಲೇ ಬಾಳಾಸಾಹೇಬ್ ಥೋರಟ್ ಮೇಲೆ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಅನ್ನೋ ಆರೋಪವಿದೆ. ಇದೀಗ ಬಿಜೆಪಿಗೆ ಸೇರಿಕೊಳ್ಳುತ್ತಾರ ಅನ್ನೋ ಅನುಮಾನಗಳು ವ್ಯಕ್ತವಾಗಿದೆ.
HAL ಹೆಸರಿನಲ್ಲಿ ಕುಟುಕಿದವರಿಗೆ ಗುಬ್ಬಿ ಹೆಲಿಕಾಪ್ಟರ್ ಘಟಕ ಉತ್ತರ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
ಮಹಾರಾಷ್ಟ್ರ ಕಾಂಗ್ರೆಸ್ ಬಂಡಾಯದಿಂದ ಒಂದು ವಿಕೆಟ್ ಪತನಗೊಂಡಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಪ್ರವೇಶಿಸುತ್ತಿದ್ದಂತೆ ಕಣಿವೆ ರಾಜ್ಯದ ಕಾಂಗ್ರೆಸ್ ವಕ್ತಾರೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಭಾರತ್ ಜೋಡೋ ಯಾತ್ರೆ ನಡುವೆ ಹಲವು ನಾಯಕರು ಪಕ್ಷ ತೊರೆದಿದ್ದಾರೆ. ಸಾಲು ಸಾಲು ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಕಾಂಗ್ರೆಸ್‌ಗೆ ಇದೀಗ ಸವಾಲು ಹೆಚ್ಚಾಗಿದೆ.
