ಸಂಚಲನ ಮೂಡಿಸಿದ ರಾಜಕೀಯ ಯಾತ್ರೆಗಳು ಮುಂದಿನ ರಾಜಕೀಯ ಭವಿಷ್ಯ ರೂಪಿಸುವಲ್ಲಿ ಯಾತ್ರೆಗಳು ನಿರ್ಣಾಯಕ  ಈ ಹಿಂದೆ ಅನೇಕರಿಗೆ ರಾಜಕೀಯ ಬದುಕು ನೀಡಿದ್ದ ಯಾತ್ರೆಗಳು  ಈಗ ರಾಹುಲ್‌ ಪಾದಯಾತ್ರೆ ಬೆನ್ನಲ್ಲೇ ಮತ್ತೆ ಶುರುವಾದ ‘ಯಾತ್ರೆಗಳ ಹವಾ’

ಬೆಂಗಳೂರು (ಅ.13): ಇತ್ತೀಚೆಗೆ ರಾಜಕೀಯ ಪಕ್ಷಗಳು ಸಾಮೂಹಿಕ ಸಂಪರ್ಕಕ್ಕಾಗಿ ಪಾದಯಾತ್ರೆಗಳನ್ನು ಆರಂಭಿಸಿವೆ. ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆ ಆರಂಭಿಸಿದ ಬೆನ್ನಲ್ಲೇ ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಿಕ್‌ ಹಾಗೂ ಬಿಹಾರದಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಕೂಡಾ ಪಾದಯಾತ್ರೆಗಳನ್ನು ಆರಂಭಿಸಿದ್ದಾರೆ. ಕರ್ನಾಟಕದಲ್ಲೂ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಬಸ್‌ ಯಾತ್ರೆ ಯೋಜನೆ ರೂಪಿಸಿದ್ದಾರೆ. ಆದರೆ ಭಾರತದಲ್ಲಿ ರಾಜಕೀಯ ಪಕ್ಷಗಳು ಯಾತ್ರೆಗಳನ್ನು ನಡೆಸಿದ್ದು ಇದೇ ಮೊದಲೇನಲ್ಲ. ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ ಕೆಲವು ಪ್ರಮುಖ ಪಾದಯಾತ್ರೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ರಾಜಕೀಯ ನಾಯಕರ ಬೀದಿ ಕಾಳಗ; ಪರಸ್ಪರ ವಾಗ್ದಾಳಿ

ಚಂದ್ರಶೇಖರ್‌ ಅವರ ಭಾರತ ಯಾತ್ರಾ

1983ರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್‌ ಅವರು ಭಾರತ ಯಾತ್ರೆ ಎಂಬ ಹೆಸರಿನಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದರು. ಈ ಪಾದಯಾತ್ರೆ ಹಿನ್ನೆಲೆಯಲ್ಲಿ ಜನತಾ ಪಕ್ಷದ ನಾಯಕ ಚಂದ್ರಶೇಖರ್‌ ‘ಮ್ಯಾರಥಾನ್‌ ಮ್ಯಾನ್‌’ ಎಂದು ಖ್ಯಾತಿ ಗಳಿಸಿದ್ದರು. ಜ.6, 1983ರಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗಿತ್ತು. 6 ತಿಂಗಳ ಬಳಿಕ ಪಾದಯಾತ್ರೆ ದೆಹಲಿ ತಲುಪಿತ್ತು. ಗ್ರಾಮಗಳ ಜನರನ್ನು ಸಂಪರ್ಕಿಸುವ ಉದ್ದೇಶದೊಂದಿಗೆ ಚಂದ್ರಶೇಖರ್‌ ಯಾತ್ರೆ ಆರಂಭಿಸಿದ್ದರು. ಈ ಯಾತ್ರೆ ಭಾರೀ ಯಶಸ್ಸು ಸಾಧಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದರೂ ಆಗಲಿಲ್ಲ. ಮುಂದೆ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಮೊದಲಾದ ನಾಟಕೀಯ ರಾಜಕೀಯ ಬೆಳವಣಿಗೆಯಿಂದಾಗಿ 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತು.

ರಾಜೀವ್‌ ಗಾಂಧಿ ಅವರ ಸಂದೇಶಯಾತ್ರೆ

1985ರಲ್ಲಿ ಮುಂಬೈಯಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಅಂದಿನ ಪ್ರಧಾನಿ ಹಾಗೂ ಕಾಂಗ್ರೆಸ್‌ ಮುಖ್ಯಸ್ಥರಾಗಿದ್ದ ರಾಜೀವ್‌ ಗಾಂಧಿಯವರು ಸಂದೇಶ ಯಾತ್ರೆಯನ್ನು ಆರಂಭಿಸುವುದಾಗಿ ಘೋಷಿಸಿದ್ದರು. ಬಳಿಕ ಅಖಿಲ ಭಾರತ ಕಾಂಗ್ರೆಸ್‌ ಸೇವಾದಳದ ಕಾರ್ಯಕರ್ತರು ದೇಶಾದ್ಯಂತ ಸಂದೇಶ ಯಾತ್ರೆಯನ್ನು ನಡೆಸಿದರು. ಪ್ರದೇಶ ಕಾಂಗ್ರೆಸ್‌ ಸಮಿತಿಗಳು ಹಾಗೂ ಸ್ಥಳೀಯ ಪಕ್ಷದ ನಾಯಕರು ಒಮ್ಮೆಲೆ ದೇಶದ 4 ಭಾಗಗಳಿಂದ ಪಾದಯಾತ್ರೆ ಆರಂಭಿಸಿದ್ದರು. ಮುಂಬೈ, ಕಾಶ್ಮೀರ, ಕನ್ಯಾಕುಮಾರಿ ಹಾಗೂ ಈಶಾನ್ಯ ಭಾರತ ಈ ನಾಲ್ಕು ಕಡೆ ಆರಂಭವಾದ ಪಾದಯಾತ್ರೆ ಸುಮಾರು 3 ತಿಂಗಳ ಕಾಲ ನಡೆಯಿತು. ಬಳಿಕ ದೆಹಲಿಯ ರಾಮಲೀಲಾ ಮೈದಾನದಲ್ಲಿ ಪಾದಯಾತ್ರೆ ಮುಕ್ತಾಯವಾಯಿತು. ಈ ಯಾತ್ರೆಯೂ ಬಹುಮಟ್ಟಿಗೆ ಯಶಸ್ಸನ್ನು ಸಾಧಿಸಿತು.

ಬಿಜೆಪಿಗೆ ಜೀವ ತಂದ ಅಡ್ವಾಣಿ ರಾಮ ರಥಯಾತ್ರೆ

1990ರಲ್ಲಿ ಬಿಜೆಪಿ ನಾಯಕ ಲಾಲ್‌ ಕೃಷ್ಣ ಅಡ್ವಾಣಿಯವರ ನೇತೃತ್ವದಲ್ಲಿ ರಾಮ ರಥಯಾತ್ರೆ ಆರಂಭವಾಯಿತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಭಿಯಾನಕ್ಕೆ ಈ ಯಾತ್ರೆ ವೇಗ ನೀಡಿತು. ಸೆಪ್ಟೆಂಬರ್‌ 1990ರಲ್ಲಿ ರಾಮ ರಥಯಾತ್ರೆ ಆರಂಭವಾಗಿದ್ದು, 10,000 ಕಿ.ಮೀ. ಸಂಚರಿಸಿದ ಬಳಿಕ ಅ.30ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ಉತ್ತರ ಬಿಹಾರದ ಸಮಸ್ಟಿಪುರದಲ್ಲಿ ಅಡ್ವಾಣಿಯವರನ್ನು ಪೊಲೀಸರು ಬಂಧಿಸಿದರು. ಈ ಹಿನ್ನೆಲೆಯಲ್ಲಿ ಯಾತ್ರೆ ಸ್ಥಗಿತವಾಯಿತು. ಯಾತ್ರೆ ಪೂರ್ಣಗೊಳ್ಳದಿದ್ದರೂ ಬಿಜೆಪಿಗೆ ಇದರಿಂದ ಭಾರೀ ರಾಜಕೀಯ ಲಾಭವಾಗಿದ್ದಂತೂ ನಿಜ.

1500 ಕಿ.ಮೀ. ನಡೆದ ವೈಎಸ್ಸಾರ್‌ಗೆ ಯಶ

ಏ.9, 2003ರಂದು ಆಂಧ್ರಪ್ರದೇಶದ ಕಾಂಗ್ರೆಸ್‌ ನಾಯಕರಾದ ಡಾ. ವೈ. ಎಸ್‌. ರಾಜಶೇಖರ್‌ ರೆಡ್ಡಿಯವರು ರಾಜ್ಯದಲ್ಲಿ ಜನರು ಎದುರಿಸುತ್ತಿರುವ ಬರಗಾಲದ ಸಮಸ್ಯೆ ಹಾಗೂ ರೈತರ ಬಗ್ಗೆ ಆಡಳಿತಾರೂಢ ತೆಲಗು ದೇಸಂ ಪಕ್ಷದ ನಿರಾಸಕ್ತಿಯನ್ನು ಎತ್ತಿಹಿಡಿಯಲು ಪ್ರಜಾ ಪ್ರಸ್ಥಾನಂ ಪಾದಯಾತ್ರೆ ಆರಂಭಿಸಿದರು. 60 ದಿನಗಳ ಕಾಲ 1500 ಕಿ.ಮೀ. ದೂರವನ್ನು ಸಂಚರಿಸಿತು. ಈ ವೇಳೆ ಜನರ ಸಮಸ್ಯೆಗಳನ್ನು ಆಲಿಸಿದ ವೈಎಸ್‌ಆರ್‌ ಆಡಳಿತ ಪಕ್ಷದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಿದರು. ಇದರಿಂದ 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರೀ ಯಶಸ್ಸು ಸಾಧಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.

ತಂದೆ ವೈಎಸ್ಸಾರ್‌ ರೀತಿಯೇ ಜಗನ್‌ ಪಾದಯಾತ್ರೆ

2019ರಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ವೈ. ಎಸ್‌. ಜಗನ್‌ಮೋಹನ್‌ ರೆಡ್ಡಿ 3,648 ಕಿ.ಮೀ. ಪಾದಯಾತ್ರೆ ಆರಂಭಿಸಿದರು. ಇವರು 14 ತಿಂಗಳುಗಳ ಕಾಲ ಆಂಧ್ರ ಪ್ರದೇಶದ ಉದ್ದಕ್ಕೂ ಸಂಚರಿಸಿದರು. ಈ ಯಾತ್ರೆ ಭಾರೀ ಯಶಸ್ಸು ಸಾಧಿಸಿತು. 2019ರ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಬಹುಮತ ಗಳಿಸಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯಿತು. ಇದಕ್ಕೂ ಮೊದಲು 2017ರಲ್ಲೂ ಜಗನ್‌ ಪ್ರಜಾ ಸಂಕಲ್ಪ ಯಾತ್ರೆಯನ್ನು ಆರಂಭಿಸಿದ್ದರು. 341 ದಿನಗಳ ಪಾದಯಾತ್ರೆಯಲ್ಲಿ 175 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 130 ವಿಧಾನ ಸಭಾ ಕ್ಷೇತ್ರಗಳಲ್ಲಿ ಜಗನ್‌ ಯಾತ್ರೆ ನಡೆಸಿದ್ದರು. ಈ ವೇಳೆ 124 ಸಾರ್ವಜನಿಕ ಸಭೆ ಹಾಗೂ 55 ಸಮುದಾಯ ಸಭೆ ನಡೆಸಿದ್ದರು.

ಚಂದ್ರಬಾಬುಗೆ ಅಧಿಕಾರ ತಂದ 2000 ಕಿ.ಮೀ. ಪಾದಯಾತ್ರೆ

2012ರಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ವೈಫಲ್ಯವನ್ನು ಬಹಿರಂಗ ಪಡಿಸಲು ಪಾದಯಾತ್ರೆ ಆರಂಭಿಸಿದರು. 117 ದಿನಗಳ ಕಾಲ ಈ ಪಾದಯಾತ್ರೆ ನಡೆಸಿದ ಅವರು 2000 ಕಿ.ಮೀ. ಸಂಚರಿಸಿದ್ದರು. ಈ ಯಾತ್ರೆಯ ಯಶಸ್ಸಿನೊಂದಿಗೆ 2014ರಲ್ಲಿ ಟಿಡಿಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದರು.

ಸಂಚಲನ ಮೂಡಿಸಿದ ಡಿಕೆಶಿ ಮೇಕೆದಾಟು ಪಾದಯಾತ್ರೆ

2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಜನರ ಬಹುಕಾಲದ ಬೇಡಿಕೆಯಾದ ಮೇಕೆದಾಟು ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ ಪಾದಯಾತ್ರೆ ನಡೆಸಿತ್ತು. ‘ನಮ್ಮ ನೀರು ನಮ್ಮ ಹಕ್ಕು’ ಪಾದಯಾತ್ರೆಯ ನೇತೃತ್ವವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಹಿಸಿಕೊಂಡಿದ್ದರು. ಮಾಚ್‌ರ್‍ 2022ರಲ್ಲಿ ಮೇಕೆದಾಟುವಿನಿಂದ ಆರಂಭವಾದ ಈ ಪಾದಯಾತ್ರೆಯು ಬೆಂಗಳೂರಲ್ಲಿ ಮುಕ್ತಾಯವಾಯಿತು. ಮೂಲಭೂತ ಅವಶ್ಯಕತೆಯಾದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದ ಯಾತ್ರೆ ನಡೆಸಲಾಗಿತ್ತು.

ಪಿಎಫ್‌ಐ ಬ್ಯಾನ್‌, ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಕೈ ಅಧ್ಯಕ್ಷ ಚುನಾವಣೆ ಬಗ್ಗೆ ರಾಹುಲ್‌ ಗಾಂಧಿ ಮಾತು

ಕಾಂಗ್ರೆಸ್‌ಗೆ ಬಲ ತಂದ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ

ಜುಲೈ 2010ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಸುಮಾರು 320 ಕಿ.ಮೀ. ಪಾದಯಾತ್ರೆ ನಡೆಸಿತ್ತು. ಆಗಿನ ಕ್ಯಾಬಿನೆಟ್‌ ಸಚಿವರಾಗಿದ್ದ ಜಿ. ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರರು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಈ ಯಾತ್ರೆ ನಡೆಸಿತ್ತು. ಈ ಯಾತ್ರೆ ಬಹುಮಟ್ಟಿಗೆ ಯಶಸ್ವಿಯಾಯಿತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂತು.

ರಾಹುಲ್‌ ಗಾಂಧಿ ಭಾರತ ಜೋಡೋ ಯಾತ್ರೆ

ಹಿರಿಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಸೆ.7ರಂದು 3,570 ಕಿ.ಮೀ. ಉದ್ದದ ಭಾರತ ಜೋಡೋ ಯಾತ್ರೆಗೆ ಚಾಲನೆ ನೀಡಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಈ ಪಾದಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಬೆಲೆಯೇರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮೊದಲಾದ ವಿಚಾರಗಳನ್ನು ವಿರೋಧಿಸಿ 2024ರ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಈ ಯಾತ್ರೆ ನಡೆಸಿದೆ.

ಅ.2ರಿಂದ ಪಟ್ನಾಯಕ್‌ ಬಿಜೆಡಿ ಜನಸಂಪರ್ಕ ಪಾದಯಾತ್ರೆ

ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಿಕ್‌ ಅವರ ನೇತೃತ್ವದಲ್ಲಿ ಬಿಜು ಜನತಾ ದಳ (ಬಿಜೆಡಿ) ಜನಸಂಪರ್ಕ ಪಾದಯಾತ್ರೆ ಆರಂಭಿಸಿದೆ. 2024ರಲ್ಲಿ ನಡೆಯಲಿರುವ ಒಡಿಶಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಯಾತ್ರೆ ಆರಂಭಿಸಲಾಗಿದೆ.

ಬಿಹಾರದಲ್ಲಿ ಪ್ರಶಾಂತ್‌ ಕಿಶೋರ್‌ ಪಾದಯಾತ್ರೆ ಶುರು

ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರು ರಾಜಕೀಯ ರಂಗಕ್ಕೆ ಪ್ರವೇಶ ಮಾಡುವ ಉದ್ದೇಶದೊಂದಿಗೆ ಬಿಹಾರದಲ್ಲಿ ಅ.2ರಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಬಿಹಾರದ ಗಾಂಧಿ ಆಶ್ರಮದಿಂದ ಪಶ್ಚಿಮ ಚಂಪಾರನ್‌ವರೆಗೆ ಸುಮಾರು 3500 ಕಿ.ಮೀ. ದೂರದವರೆಗೆ ಈ ಪಾದಯಾತ್ರೆ ಸಂಚರಿಸಲಿದೆ.