ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್ ಈಗಾಗಲೇ ಸಿದ್ಧತೆ ಕೈಗೊಂಡಿದ್ದು, ಅಭ್ಯರ್ಥಿಗಳಿಗೆ ರಹಸ್ಯ ಸ್ಥಳದಲ್ಲಿ ಚುನಾವಣಾ ಕಾರ್ಯತಂತ್ರ, ಗೆಲುವಿನ ಸೂತ್ರಗಳ ಕುರಿತು ತರಬೇತಿ ನೀಡಲಾಗುತ್ತಿದೆ.
ಬೆಂಗಳೂರು (ನ.06): ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್ ಈಗಾಗಲೇ ಸಿದ್ಧತೆ ಕೈಗೊಂಡಿದ್ದು, ಅಭ್ಯರ್ಥಿಗಳಿಗೆ ರಹಸ್ಯ ಸ್ಥಳದಲ್ಲಿ ಚುನಾವಣಾ ಕಾರ್ಯತಂತ್ರ, ಗೆಲುವಿನ ಸೂತ್ರಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ತಂತ್ರಗಾರಿಕೆ ಹೂಡಿದೆ. ಸ್ವತಂತ್ರ ಬಲದಿಂದ ಅಧಿಕಾರ ಗದ್ದುಗೆ ಹಿಡಿಯಲು ಕಸರತ್ತು ಪ್ರಾರಂಭಿಸಿರುವ ಜೆಡಿಎಸ್ ಎಲ್ಲಾ ರೀತಿಯ ತಂತ್ರಗಳನ್ನು ರೂಪಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತಿದೆ. ರಹಸ್ಯ ಸ್ಥಳದಲ್ಲಿ ಜೆಡಿಎಸ್‌ನ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
ದೆಹಲಿ ಮತ್ತು ಬೆಂಗಳೂರಿನ ನುರಿತ ವ್ಯಕ್ತಿಗಳಿಂದ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಶುಕ್ರವಾರದಿಂದ ಆರಂಭಗೊಂಡ ತರಬೇತಿಯು ಭಾನುವಾರದವರೆಗೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಕಳೆದ ಕೆಲ ತಿಂಗಳ ಹಿಂದೆ ಹಾಲಿ ಶಾಸಕರಿಗೆ ಮತ್ತು ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಬೆಂಗಳೂರಲ್ಲಿ ಕಾರ್ಯಾಗಾರ ನಡೆಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ನಂತರ ಮೈಸೂರಿನಲ್ಲಿಯೂ ಕಾರ್ಯಾಗಾರ ಹಮ್ಮಿಕೊಂಡಿತ್ತು. ಅಲ್ಲಿ ಅಭ್ಯರ್ಥಿಗಳು ಎಷ್ಟರ ಮಟ್ಟಿಗೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂಬುದರ ಕುರಿತು ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ.
ಪಂಚರತ್ನ ಯೋಜನೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿ: ನಿಖಿಲ್ ಕುಮಾರಸ್ವಾಮಿ
ಇದರ ಮುಂದುವರಿದ ಭಾಗವಾಗಿ ಇದೀಗ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯಲ್ಲಿ ಅಭ್ಯರ್ಥಿಗಳ ಕೌಶಲ್ಯತೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ನಂತರ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಮೊದಲ ಹಂತದಲ್ಲಿ 126ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪಂಚರತ್ನ ರಥಯಾತ್ರೆ ಮುಂದೂಡಿಕೆಯಾಗಿದ್ದು, ಈ ವೇಲೆ ಯಾವ ರೀತಿಯಲ್ಲಿ ಜನತೆಗೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ವೈಫಲ್ಯಗಳ ಕುರಿತು ಮನದಟ್ಟು ಮಾಡಬೇಕು ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಹೇಳಬೇಕು ಎಂಬುದರ ಕುರಿತು ತಿಳಿಸಿಕೊಡಲಾಗುತ್ತಿದೆ.
ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್.ಡಿ.ಕುಮಾರಸ್ವಾಮಿ
ಇದಲ್ಲದೇ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೇಕಾಗಿರುವ ತಂತ್ರಗಾರಿಕೆ, ನೈಪುಣ್ಯತೆ ಕುರಿತು ಮನದಟ್ಟು ಮಾಡಿಕೊಡಲಾಗುತ್ತಿದೆ. ತರಬೇತಿಯಲ್ಲಿ ಅಭ್ಯರ್ಥಿಗಳ ಸಿದ್ಧತೆ ಬಗ್ಗೆ ಒನ್ ಟು ಒನ್ ಚರ್ಚೆ ನಡೆಸಲಾಗುತ್ತದೆ. ಪಕ್ಷ ನೀಡುವ ಜವಾಬ್ದಾರಿಗಳನ್ನು ನಿರ್ವಹಣೆ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸುವುದು ಮಾತ್ರವಲ್ಲ, ಜನತೆಗೆ ಹೇಗೆ ಹತ್ತಿರವಾಗಬೇಕು ಮತ್ತು ಅವರ ಮನ ಹೇಗೆ ಗೆಲ್ಲಬೇಕು ಎಂಬುದರ ಕುರಿತು ಸಹ ಹೇಳಿಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.
