ಪಂಚರತ್ನ ಯೋಜನೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿ: ನಿಖಿಲ್‌ ಕುಮಾರಸ್ವಾಮಿ

ನಾಡಿನ ರೈತರು, ಬಡವರು, ಶ್ರಮಿಕರು ಹಾಗೂ ನಿರುದ್ಯೋಗಿಗಳಿಗೆ ಪೂರಕವಾಗಿರುವ ಪಂಚರತ್ನ ಯೋಜನೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

Nikhil Kumaraswamy Talks Over JDS Pancharatna Yatra At Mandya gvd

ನಾಗಮಂಗಲ (ನ.03): ನಾಡಿನ ರೈತರು, ಬಡವರು, ಶ್ರಮಿಕರು ಹಾಗೂ ನಿರುದ್ಯೋಗಿಗಳಿಗೆ ಪೂರಕವಾಗಿರುವ ಪಂಚರತ್ನ ಯೋಜನೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿ ಕೆಲಗೆರೆ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಆದಿಶಕ್ತಿ ಹುಲಿಕೆರಮ್ಮ ದೇವಿಯ ಉತ್ಸವ ದೇವತೆಯ ನೂತನ ದೇವಾಲಯದ ಉದ್ಘಾಟನೆ ಹಾಗೂ ನೂತನ ಗೋಪುರದ ಕಳಶ ಸ್ಥಾಪನಾ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜಲಧಾರೆ ಯಾತ್ರೆ ಆರಂಭವಾದಾಗಿನಿಂದ ಈವರೆಗೂ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಅದೆಷ್ಟೋ ವರ್ಷಗಳಿಂದ ಬತ್ತಿ ಹೋಗಿದ್ದ ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ನಾಗಮಂಗಲದಲ್ಲಿ ಜೆಡಿಎಸ್‌ ಕಾರ್ಯಕ್ರಮವೆಂದರೆ ಸಾಕು ಮಳೆ ಸಿಂಚನದ ಶುಭ ಸೂಚನೆ ಇದ್ದೇ ಇರುತ್ತದೆ ಎಂದರು. ಗ್ರಾಮಸ್ಥರ ಪರಿಶ್ರಮದಿಂದ ಇಂತಹ ಒಂದು ಉತ್ತಮವಾದ ದೇವಸ್ಥಾನ ನಿರ್ಮಾಣವಾಗಿದೆ. ಶಕ್ತಿ ದೇವತೆಯ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಭಾಗಿಯಾಗಿರುವುದು ನನ್ನ ಸೌಭಾಗ್ಯ. ಈ ಕಾರ್ಯಕ್ರಮಕ್ಕೆ ಮೊದಲು ದೇವೇಗೌಡರು, ನಂತರ ಕುಮಾರಸ್ವಾಮಿ ಅವರು ನಿಗಧಿಯಾಗಿದ್ದರು. ಆದರೆ, ಅನಿವಾರ್ಯವಾಗಿ ನನಗೆ ಇಂತಹ ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಆ ದೇವಿಯೇ ನನ್ನನ್ನು ಕರೆಸಿಕೊಂಡಿರುವ ನಂಬಿಕೆ ನನಗಾಗಿದೆ ಎಂದರು.

ಜನರ ಆಶೀರ್ವಾದ ಪಡೆದೇ ಗುದ್ದಲಿ ಪೂಜೆ: ನಿಖಿಲ್‌ ಕುಮಾರಸ್ವಾಮಿ

2023ಕ್ಕೆ ಕುಮಾರಸ್ವಾಮಿ ಸರ್ಕಾರ ಬರುತ್ತದೆ: 2023ಕ್ಕೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದೇ ಬರುತ್ತದೆ. ಈ ಸಂದರ್ಭದಲ್ಲಿ ಪಂಚರತ್ನ ಯೋಜನೆ ಅನುಷ್ಠಾನವಾಗುವುದು ಖಚಿತ. ಇದರಿಂದ ರೈತರು, ಬಡವರು, ಶ್ರಮಿಕರು ಹಾಗೂ ನಿರುದ್ಯೋಗಿ ಯುವಶಕ್ತಿಗೆ ಮಹತ್ತರವಾದ ಅನುಕೂಲವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ದೇವೇಗೌಡರ ಕುಟುಂಬಕ್ಕೂ ತಾಲೂಕಿಗೆ ಅವಿನಾಭಾವ ಸಂಬಂಧ: ಅಧ್ಯಕ್ಷತೆ ವಹಿಸಿದ್ದ ಶಾಸಕ ಸುರೇಶ್‌ಗೌಡ ಮಾತನಾಡಿ, ನಾಗಮಂಗಲ ತಾಲೂಕಿಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಈ ಹಿಂದೆ 2018ರ ಚುನಾವಣೆ ವೇಳೆ ದೇವೇಗೌಡರು ಮತ್ತು ಕುಮಾರಣ್ಣರವರ ಮೇಲೆ ನೀವು ತೋರಿದ ಪ್ರೀತಿಗೆ ನಾನು ಪುಳಕಿತನಾಗಿದ್ದೆ. ಅದೇ ರೀತಿ ಈ ದಿನ ದೇವೇಗೌಡರ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಆಗಮಿಸುವಾಗಲೂ ದಾರಿಯುದ್ದಕ್ಕೂ ನೀವು ತೋರಿದ ಅಭಿಮಾನ ಆ ಕುಟುಂಬದ ಮೇಲೆ ನೀವಿಟ್ಟಿರುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದರು.

ನಾನು ಈ ದಿನ ಆದಿಶಕ್ತಿ ಹುಲಿಕೆರಮ್ಮ ದೇವಿಯ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ. ಕುಮಾರಣ್ಣ ಅವರಿಗೆ ದೈವಶಕ್ತಿ ಇದೆ. 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು. ಯಾವುದೇ ಕಾರಣಕ್ಕೂ ನೀವು ಕೊಡುವ ಅಧಿಕಾರವನ್ನು ಕಳೆದುಕೊಳ್ಳುವಂತಹ ಸಂಕಷ್ಟಕ್ಕೆ ಪುನಃ ಸಿಲುಕುವುದಿಲ್ಲ. ಮಾಡುವುದಾದರೆ ಯೋಗ್ಯರ ಸಹವಾಸ ಮಾಡುತ್ತೇವೆ ಎಂದು ಪರೋಕ್ಷವಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದರು.

ಕಳೆದ ಮೂರುವರೆ ವರ್ಷಗಳಿಂದಲೂ ವಿಪಕ್ಷದ ಶಾಸಕನಾಗಿದ್ದರೂ ಕ್ಷೇತ್ರದಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ನಾಗಮಂಗಲದ ಸರ್ವತೋಮುಖ ಅಭಿವೃದ್ದಿಯ ನನ್ನ ಉದ್ದೇಶ ಈಡೇರಲು ನಿಮ್ಮಗಳ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಇರಲಿ ಎಂದು ಕೋರಿದರು. ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಜಿ.ನಗರದಿಂದ ಗೋವಿಂದಘಟ್ಟ ಮಾರ್ಗವಾಗಿ ತೆರೆದ ವಾಹನದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. 

Tumakuru ಅವಳಿ ಶಿಶು ಧಾರುಣ ಸಾವು ಪ್ರಕರಣ: ಸಚಿವರ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಗೋವಿಂದಘಟ್ಟ ಗ್ರಾಮದ ಸರ್ಕಾರಿ ಶಾಲೆಯಲ್ಲಿನ ಮಕ್ಕಳನ್ನು ಮಾತನಾಡಿಸಿದ ನಿಖಿಲ್‌, ಮೂಡಲಮೆಳ್ಳಹಳ್ಳಿ ಗ್ರಾಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. ಈ ವೇಳೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ತಾಲೂಕು ಅಧ್ಯಕ್ಷ ಡಿ.ಟಿ.ಶ್ರೀನಿವಾಸ್‌, ಕೆ.ಆರ್‌.ಪೇಟೆ ಜೆಡಿಎಸ್‌ ಮುಖಂಡ ಎಚ್‌.ಟಿ.ಮಂಜು, ಜೆಡಿಎಸ್‌ ಮುಖಂಡ ಜವರನಹಳ್ಳಿ ಗೌರೀಶ್‌, ನೆಲ್ಲಿಗೆರೆ ಬಾಲು ಹಾಗೂ ಪುರಸಭೆ ಸದಸ್ಯ ಶಂಕರಲಿಂಗೇಗೌಡ, ಸೇರಿದಂತೆ ಹಲವರಿದ್ದರು.

Latest Videos
Follow Us:
Download App:
  • android
  • ios