Asianet Suvarna News Asianet Suvarna News

ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ತಾವು ಬೇರೆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಪರಿಪೂರ್ಣ ಪರಿಹಾರಕ್ಕಾಗಿ ಪಂಚರತ್ನ ಯೋಜನೆಗಳ ಅನುಷ್ಠಾನ ಮೂಲಕ ಸದೃಢ ರಾಜ್ಯ ನಿರ್ಮಾಣವೇ ಪಕ್ಷದ ಸಂಕಲ್ಪವಾಗಿದೆ. 

JDS Leader HD Kumaraswamy Talks Over Pancharatna Yatra At Kolar gvd
Author
First Published Nov 2, 2022, 8:36 PM IST

ಕೋಲಾರ (ನ.02): ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ತಾವು ಬೇರೆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಪರಿಪೂರ್ಣ ಪರಿಹಾರಕ್ಕಾಗಿ ಪಂಚರತ್ನ ಯೋಜನೆಗಳ ಅನುಷ್ಠಾನ ಮೂಲಕ ಸದೃಢ ರಾಜ್ಯ ನಿರ್ಮಾಣವೇ ಪಕ್ಷದ ಸಂಕಲ್ಪವಾಗಿದೆ. ಯಾತ್ರೆ ಮೂಲಕ ಜನರ ಸಮಸ್ಯೆಗಳನ್ನು ಸಮೀಪದಿಂದ ಆಲಿಸಿ ಅವರ ನಿರೀಕ್ಷೆಗಳೇನಿದೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ಮೂಲಕ ಕನ್ನಡಿಗರ ಸರ್ಕಾರ ಸ್ಥಾಪನೆ ಮಾಡುವ ಸದುದ್ದೇಶ ಹೊಂದಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಮುಳಬಾಗಿಲು ತಾಲೂಕಿನ ಕುರುಡುಮಲೆಯ ಶ್ರೀ ವಿನಾಯಕ ದೇವರಿಗೆ ವಿಶೇಷ ಹೋಮ, ಪೂಜೆಗಳನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಚೆನ್ನಪಟ್ಟಣದ ಶಾಸಕಿ ಅನಿತಾಕುಮಾರಸ್ವಾಮಿಯೊಂದಿಗೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಉತ್ತರ ಕರ್ನಾಟಕಕ್ಕೆ ಶುದ್ಧ ನೀರು: ಉತ್ತರ ಕರ್ನಾಟಕದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು ಇದರಿಂದ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಲವಾರು ಸಾವು ನೋವುಗಳು ಉಂಟಾಗಿವೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ನಾಡಿನ ನದಿ ನಾಲೆಗಳನ್ನು ಸ್ವಚ್ಛಗೊಳಿಸಿ ನೀರನ್ನು ಸಂಸ್ಕರಿಸಿ ಪ್ರತಿ ಕುಟುಂಬಕ್ಕೂ ಶುದ್ಧ ನೀರನ್ನು ಕೊಡುವ ಮೂಲಕ ಜನರ ಆರೋಗ್ಯ ಕಾಪಾಡಲಾಗುವುದು ಎಂದರು.

ಪಂಚರತ್ನ ಯೋಜನೆಗಳಾದ ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಘೋಷ ವಾಕ್ಯದೊಂದಿಗೆ ಪ್ರತಿ ಗ್ರಾ.ಪಂ.ಗೊಂದು ಹೈಟೆಕ್‌ ಮಾದರಿ ಸರ್ಕಾರಿ ಶಾಲೆ ಮೂಲಕ ಕೃಷಿಕರ ಮತ್ತು ಬಡವರ ಮಕ್ಕಳಿಗೆ ಹೈಟೆಕ್‌ ಶಿಕ್ಷಣ, ಪ್ರತಿ ಗ್ರಾಮಪಂಚಾಯಿತಿಗೊಂದು ಸರ್ಕಾರಿ ಆಸ್ಪತ್ರೆಯ ಮೂಲಕ ಉಚಿತ ಆರೋಗ್ಯ ಸೇವೆಗಳು, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡುವುದರ ಜೊತೆಗೆ ಕೃಷಿಯನ್ನು ಲಾಭದಾಯಕವಾಗಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

JDS Pancharatna Yatra: ಇಂದಿನಿಂದ ಜೆಡಿಎಸ್‌ ರಥಯಾತ್ರೆ: ಕೋಲಾರದ ಕುರುಡುಮಲೆಯಿಂದ ಆರಂಭ

ಜೆಡಿಎಸ್‌ 170 ಸ್ಥಾನ ಗೆಲ್ಲಬೇಕು: ಆಶ್ರಯ ರಹಿತರಿಗೆ ವಸತಿ ಸೌಲಭ್ಯ ಯುವಜನರಿಗೆ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಆಧಾರಿತ ತರಬೇತಿಗಳ ಮೂಲಕ ಉದ್ಯೋಗ ಸೃಷ್ಟಿಬಗ್ಗೆ ಜೆಡಿಎಸ್‌ ಪ್ರಣಾಳಿಕೆ ಅನಾವರಣಗೊಂಡು ಇವುಗಳನ್ನು ಅನುಷ್ಠಾನ ಮಾಡಲಾಗುವುದು. 2023ರ ಚುನಾವಣೆಯಲ್ಲಿ 170 ಸ್ಥಾನ ಗೆಲ್ಲುವುದೇ ನಮ್ಮ ಗುರಿ ಎಂದರು. ಕಂದಾಯ ಸಚಿವ ಆರ್‌.ಅಶೋಕ್‌ ರಥಯಾತ್ರೆ ಕುರಿತು ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ ಹಿಂದೆ ಬಿಜೆಪಿಯವರು ರಥಯಾತ್ರೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಆಗ ರಥ ಯಾತ್ರೆ ಮಾಡಿದವರನ್ನು ಮನೆಗೆ ಕಳುಹಿಸಿ ಮಜಾ ಮಾಡುತ್ತಿರುವವರು ಈ ರೀತಿ ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಎಲ್‌.ಕೆ.ಅದ್ವಾನಿ, ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿಗಾಗಿ ದುಡಿದ ಹಲವಾರು ಹಿರಿಯರನ್ನು ಮತ್ತು ಕಾರ್ಯಕರ್ತರನ್ನು ಕಡೆಗಣಿಸಿರುವ ಬಗ್ಗೆ ಪರೋಕ್ಷವಾಗಿ ಎಚ್ಡಿಕೆ ಟೀಕಿಸಿದರು.

ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ಜೆಡಿಎಸ್‌ನಲ್ಲಿ ಹಲವಾರು ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಜೊತೆಗೆ ಕುಮಾರಣ್ಣ ಕೋಲಾರದಲ್ಲಿ ನಿಲ್ಲಬೇಕೆಂಬ ಮನವಿ ಮಾಡಿದ್ದಾರೆ. ಅಂತಹ ಸಂದರ್ಭ ಬಂದಾಗ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು. ಇತ್ತೀಚೆಗೆ ಬಿಜೆಪಿ ಆಪರೇಷನ್‌ ಕಮಲ ಆರಂಭಿಸಿದೆ. ಜೆಡಿಎಸ್‌ ನಾಯಕು ಆಸೆ ಆಮಿಷಗಳಿಗೆ ಒಳಗಾಗದಂತೆ ಜಾಗೃತಿ ವಹಿಸಿ ಅವರಲ್ಲಿ ಪ್ರಮಾಣ ಮಾಡಿಸಬೇಕಾದ ಪರಿಸ್ಥಿತಿಯನ್ನು ಬಿ.ಜೆ.ಪಿ ತಂದೊಡ್ಡಿದೆ. ಇವೆಲ್ಲವನ್ನೂ ಸರಿದೂಗಿಸಿ ಶಿಸ್ತಿನ ಸಿಪಾಯಿಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿಸುವ ಮೂಲಕ ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು ಎಂದರು.

ಉತ್ತರ ಭಾರತದ ಅಧಿಕಾರಿಗಳ ದರ್ಪಕ್ಕೆ ನಂದೀಶ್‌ ಬಲಿ: ಎಚ್‌.ಡಿ.ಕುಮಾರಸ್ವಾಮಿ

ಅಭ್ಯರ್ಥಿಗಳ ಘೋಷಣೆ ಮುಂದೂಡಿಕೆ: ಇಂದು ಕುರುಡುಮಲೆಯ ವಿನಾಯಕ ದೇವಾಲಯದಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಿ ಅವರಿಂದ ದೇವರ ಮುಂದೆ ಪೂಜೆ ಸಲ್ಲಿಸಿ ಪಕ್ಷ ನಿಷ್ಠೆ ವಾಗ್ದಾನ ತೆಗೆದುಕೊಂಡು ಘೋಷಣೆ ಮಾಡುವ ಉದ್ದೇಶವಿತ್ತು ಅದು ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಮುಂದೆ ದೇವೇಗೌಡರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಪಟ್ಟಿಬಿಡುಗಡೆ ಮಾಡಿ ಪ್ರಮಾಣ ಮಾಡಿಸಲಾಗುವುದು ಎಂದರು. ಶಾಸಕಿ ಅನಿತಾಕುಮಾರಸ್ವಾಮಿ, ಎಂ.ಎಲ್‌.ಸಿ. ಶರವಣ, ಜೆ.ಕೆ.ಕೃಷ್ಣಾರೆಡ್ಡಿ, ಇಂಚರ ಗೋವಿಂದರಾಜ್‌, ಜಿ.ಟಿ.ದೇವೇಗೌಡ, ಮಾಜಿ ಶಾಸಕರಾದ ಜಿ.ಕೆ.ವೆಂಕಟಾಶಿವರೆಡ್ಡಿ, ಜೆ.ಡಿ.ಎಸ್‌ ಕೋರ್‌ ಕಮಿಟಿ ರಾಜ್ಯ ಸದಸ್ಯ ಸಮೃದ್ಧಿ ವಿ.ಮಂಜುನಾಥ್‌, ಬಂಡೆಪ್ಪ ಕಾಶಂಪುರ್‌ ಇದ್ದರು.

Follow Us:
Download App:
  • android
  • ios