ಜ.21 ರಿಂದ 29ರವರೆಗೆ ಉಡುಪಿಯಲ್ಲಿ ಎರಡನೇ ಹಂತದ ಬಿಜೆಪಿ 'ವಿಜಯ ಸಂಕಲ್ಪ ಅಭಿಯಾನ
ಉಡುಪಿ ಜಿಲ್ಲೆಯಾದ್ಯಂತ ಜ.2ರಿಂದ ಜ.12ರ ವರೆಗೆ ನಡೆದ 'ಬೂತ್ ವಿಜಯ ಅಭಿಯಾನ'ವು 100% ಪ್ರಗತಿಯೊಂದಿಗೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ. ಇದೀಗ ಎರಡನೇ ಹಂತದಲ್ಲಿ ಜ.21ರಿಂದ ಜ.29ರ ವರೆಗೆ ನಡೆಯಲಿರುವ 'ವಿಜಯ ಸಂಕಲ್ಪ ಅಭಿಯಾನ' ನಡೆಯಲಿದೆ.
ಉಡುಪಿ (ಜ.19): ಉಡುಪಿ ಜಿಲ್ಲೆಯಾದ್ಯಂತ ಜ.2ರಿಂದ ಜ.12ರ ವರೆಗೆ ನಡೆದ 'ಬೂತ್ ವಿಜಯ ಅಭಿಯಾನ'ವು 100% ಪ್ರಗತಿಯೊಂದಿಗೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ. ಇದೀಗ ಎರಡನೇ ಹಂತದಲ್ಲಿ ಜ.21ರಿಂದ ಜ.29ರ ವರೆಗೆ ನಡೆಯಲಿರುವ 'ವಿಜಯ ಸಂಕಲ್ಪ ಅಭಿಯಾನ'ವನ್ನು ಕೂಡಾ ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 'ಡಬಲ್ ಇಂಜಿನ್ ಸರಕಾರ' ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಿದೆ. ಶೋಷಿತ, ಬಡವ, ದಲಿತ, ರೈತ, ಮಹಿಳೆ, ಯುವಕರ ಸಹಿತ ಎಲ್ಲ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯಾದ್ಯಂತ ಸದೃಢ ಪಕ್ಷ ಸಂಘಟನೆಯಲ್ಲಿ ಪಕ್ಷದ ಮುಖಂಡರು, ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ ಎಂದರು.
ಜಿಲ್ಲೆಯಾದ್ಯಂತ ಯುವ ಜನತೆ ಸ್ವಯಂ ಪ್ರೇರಿತರಾಗಿ ಬಿಜೆಪಿ ಕಾರ್ಯಕರ್ತರಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ.ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಜ.21ರಿಂದ ಜ.29ರ ವರೆಗೆ ಜಿಲ್ಲೆಯಾದ್ಯಂತ 'ವಿಜಯ ಸಂಕಲ್ಪ ಅಭಿಯಾನ'ವನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಮತ್ತು ಸಮಸ್ತ ಕಾರ್ಯಕರ್ತರು ಈ ಬೃಹತ್ ಅಭಿಯಾನದಲ್ಲಿ ಕೈಜೋಡಿಸಿ, ಪ್ರತಿ ಮನೆಯನ್ನು ಸಂಪರ್ಕಿಸುವ ಮೂಲಕ ಸರಕಾರದ ಸಾಧನೆಗಳನ್ನು ಮನೆ ಮನಗಳಿಗೆ ತಲುಪಿಸುವ ಜೊತೆಗೆ ಈ ಕೆಳಗಿನ ಪ್ರಮುಖ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಬೂತ್ ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳ ಸಂಪರ್ಕ, ಪ್ರತೀ ಮನೆಗೆ ಸರಕಾರದ ಸಾಧನೆಗಳ ಕರಪತ್ರ ಮತ್ತು ಸ್ಟಿಕ್ಕರ್ ವಿತರಣೆ,80000 90009 ಸಂಖ್ಯೆಗೆ ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸುವುದು, ಫಲಾನುಭವಿಗಳ ಸಂಪರ್ಕ, ಪ್ರತೀ ಬೂತ್ ವ್ಯಾಪ್ತಿಯಲ್ಲಿ 10 ನಿಗದಿತ ಗೋಡೆ ಬರಹಗಳು ಹಾಗೂ 1 ಡಿಜಿಟಲ್ ಗೋಡೆ ಬರಹವನ್ನು ಮಾಡುವುದು ಇತ್ಯಾದಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.
'ವಿಜಯ ಸಂಕಲ್ಪ ಅಭಿಯಾನ'ದ ರಾಜ್ಯ ತಂಡದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಉಡುಪಿ ಜಿಲ್ಲಾ ಸಂಚಾಲಕರಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಸಹ ಸಂಚಾಲಕರಾಗಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈಗಾಗಲೇ ಜಿಲ್ಲೆಯ ಪ್ರತಿ ಮಂಡಲಗಳಲ್ಲಿ ತಂಡಗಳನ್ನು ರಚಿಸಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಜ.16ರಂದು ಪ್ರಾರಂಭಗೊಂಡಿರುವ ಜಿಲ್ಲೆಯ ಪ್ರತೀ ಶಕ್ತಿಕೇಂದ್ರಗಳ ಸಭೆ ಜ.18ರ ವರೆಗೆ ನಡೆಯಲಿದೆ.ಜ.21ರಂದು ಸ್ಥಳೀಯ ಸಚಿವರು, ಶಾಸಕರು ಹಾಗೂ ಜಿಲ್ಲಾ ಮತ್ತು ಮಂಡಲ ತಂಡ 'ವಿಜಯ ಸಂಕಲ್ಪ ಅಭಿಯಾನ'ಕ್ಕೆ ಚಾಲನೆ ನೀಡಲಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಾವಧಿ ವಿಸ್ತಾರಕರನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಈ ನಿಟ್ಟಿನಲ್ಲಿ ಜ.21ರಂದು ಜಿಲ್ಲೆಯಾದ್ಯಂತ ಚಾಲನೆಗೊಳ್ಳಲಿರುವ 'ವಿಜಯ ಸಂಕಲ್ಪ ಅಭಿಯಾನ'ದಲ್ಲಿ ಎಲ್ಲ ಸ್ತರದ ಕಾರ್ಯಕರ್ತರು ಬದ್ಧತೆ ಮತ್ತು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು. ಜೊತೆಗೆ ಜ.29ರಂದು ಬೆಳಿಗ್ಗೆ 11.00 ಗಂಟೆಗೆ ಪ್ರತಿ ಬೂತ್ ನಲ್ಲಿ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕೀ ಬಾತ್' ಕಾರ್ಯಕ್ರಮವನ್ನು ವೀಕ್ಷಿಸಿ ನಿಗದಿತ ಲಿಂಕ್ ಮೂಲಕ ಕಾರ್ಯಕ್ರಮದ ಫೋಟೋ ಅಪ್ಲೋಡ್ ಮಾಡುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಸತತ 70 ವರ್ಷಗಳ ಕಾಲ ದೇಶ ಲೂಟಿಗೈದಿರುವ ಕಾಂಗ್ರೆಸ್ಸಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸುಳ್ಳಿನ ಫ್ಯಾಕ್ಟರಿಯಂತಿರುವ ಕಾಂಗ್ರೆಸ್ ನಿಂದ ಚುನಾವಣಾ ಸಂದರ್ಭದಲ್ಲಿ ಸುಳ್ಳು ಭರವಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಕತ್ತಲೆಯಲ್ಲಿ ಟಾರ್ಚ್ ಹಿಡಿದು ಬಜೆಟ್ ಮಂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿ ತಿಂಗಳು ಯುವ ಜನತೆಗೆ 6,000 ಮಾಶಾಸನ ನೀಡುವ ವಾಗ್ದಾನಗೈದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಇಂತವರ ಪೊಳ್ಳು ಭರವಸೆಯನ್ನು ರಾಜ್ಯದ ಜನತೆ ಸಾಕಷ್ಟು ಕಂಡಿದ್ದಾರೆ. ಇದೀಗ 'ನಾ ನಾಯಕಿ'; ಅಂದರೆ 'ನಾಯಕಿ ಇಲ್ಲ' ಎಂದು ಪ್ರದರ್ಶನ ನೀಡುತ್ತಿರುವ ಪ್ರಿಯಾಂಕಾ ಗಾಂಧಿ ತನ್ನ ಪೊಳ್ಳು ಭರವಸೆಗೆ ಹಣವನ್ನು ಎಲ್ಲಿಂದ ತರುತ್ತಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಬಿಜೆಪಿ ಸರಕಾರ ಕೊಟ್ಟು ಮಾತನಾಡುವ ಪರಿ ಪಾಠ ಹೊಂದಿದೆ; ಆದರೆ ಕಾಂಗ್ರೆಸ್ ಕೇವಲ ಪೊಳ್ಳು ಭರವಸೆಗೆ ಮಾತ್ರ ಸೀಮಿತವಾಗಿದೆ ಎಂದು ಅವರು ತಿಳಿಸಿದರು.
Assembly election: ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಬಿಜೆಪಿ ಪ್ಲಾನ್ : ಜ.21ರಿಂದ ವಿಜಯ ಸಂಕಲ್ಪ ಅಭಿಯಾನ
ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸದಾ ಜಾಗೃತರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಜೊತೆಗೆ ವಿರೋಧ ಪಕ್ಷಗಳ ಅಪಪ್ರಚಾರ, ಸುಳ್ಳು ಭರವಸೆಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಿ, ಅಭಿವೃದ್ಧಿ ಮತ್ತು ಸಂಘಟನಾ ಸಾಮರ್ಥ್ಯದ ಮೂಲಕ ಬಿಜೆಪಿ ಮಗದೊಮ್ಮೆ ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳಲ್ಲಿ ಹೆಚ್ಚಿನ ಅಂತರದಲ್ಲಿ ಜಯಭೇರಿ ಗಳಿಸಲು ಸಂಘಟಿತರಾಗಿ ಶ್ರಮಿಸಬೇಕು ಎಂದು ಕುಯಿಲಾಡಿ ತಿಳಿಸಿದರು.
ಹಾವೇರಿ: 21ರಿಂದ ಬಿಜೆಪಿಯಿಂದ ವಿಜಯ ಸಂಕಲ್ಪ ಅಭಿಯಾನ
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಪ್ರತಾಪ್ ಶೆಟ್ಟಿ ಚೇರ್ಕಾಡಿ ಉಪಸ್ಥಿತರಿದ್ದರು.