Assembly election: ಕಾಂಗ್ರೆಸ್ಗೆ ಠಕ್ಕರ್ ಕೊಡಲು ಬಿಜೆಪಿ ಪ್ಲಾನ್ : ಜ.21ರಿಂದ ವಿಜಯ ಸಂಕಲ್ಪ ಅಭಿಯಾನ
ಜ.21ರಿಂದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಆರಂಭ
ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಠಕ್ಕರ್ ಕೊಡಲು ಸಿದ್ಧತೆ
ಬಿಜೆಪಿ ಬೆಂಬಲಿಸಿ 10 ದಿನ ಮಿಸ್ಡ್ ಕಾಲ್ ಅಭಿಯಾನ
ಒಂದು ಕೋಟಿ ಜನರನ್ನು ಸಂಪರ್ಕಿಸುವ ಗುರಿ
ಬೆಂಗಳೂರು (ಜ.17): ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಿಡಿತ ಸಾಧಿಸಬೇಕು ಎಂಬ ಸಂಕಲ್ಪವನ್ನು ಮಾಡಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಭಾರಿ ಪ್ರಮಾಣದ ಚುನಾವಣಾ ಪ್ರಚಾರ ಕಾರ್ಯಗಳು ಆರಂಭವಾಗಿವೆ. ಕಾಂಗ್ರೆಸ್‌ನ ಪ್ರಜಾ ಪ್ರತಿಧ್ವನಿ ಬಸ್ ಯಾತ್ರೆ ಮತ್ತು ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ಠಕ್ಕರ್ ನೀಡಲು ಈಗ ಆಡಳಿತಾರೂಢ ಬಿಜೆಪಿಯಿಂದ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಮೂಲಕ ಕೇವಲ 10 ದಿನಗಳಲ್ಲಿ 1 ಕೋಟಿಗೂ ಅಧಿಕ ಜನರನ್ನು ಸಂಪರ್ಕ ಮಾಡುವ ಗುರಿಯನ್ನು ಇಟ್ಟುಕೊಂಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಮತಬೇಟೆಗೆ ಸಿದ್ಧವಾಗಿರುವ ಪಕ್ಷಗಳು ಈಗಾಗಲೇ ಜನರ ಬಳಿಗೆ ಹೋಗಲು ಯಾತ್ರೆಗಳು, ಅಭಿಯಾನ, ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿವೆ. ಈಗ ಕಾಂಗ್ರೆಸ್‌ನ ಪ್ರಜಾ ಪ್ರತಿಧ್ವನಿ ಬಸ್ ಯಾತ್ರೆ ಮತ್ತು ಜೆಡಿಎಸ್‌ನ ಪಂಚರತ್ನ ರಥಯಾತ್ರೆ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಈವರೆಗೆ ಬಿಜೆಪಿಯಿಂದ ವಿವಿಧೆಡೆ ಜನಸಂಕಲ್ಪ ಯಾತ್ರೆಗಳನ್ನು ಮಾಡಲಾಗಿದ್ದು, ಶಕ್ತಿ ಪ್ರದರ್ಶನವನ್ನೂ ಮಾಡಿದೆ. ಈಗ ದೆಹಲಿಯಲ್ಲಿ ಆಯೋಜನೆ ಮಾಡಿರುವ 9 ರಾಜ್ಯಗಳ ಚುನಾವಣೆ ಕುರಿತ ಚರ್ಚೆಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರಲ್ಲಿ ವಿಜಯ ಸಂಕಲ್ಪ ಅಭಿಯಾನವೂ ಒಂದಾಗಿದೆ. ಈ ಮೂಲಕ ಬಿಜೆಪಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಠಕ್ಕರ್ ಕೊಡಲು ಜ.21ರಿಂದ ಜ.29ರವರೆಗೆ ಬಿಜೆಪಿ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಬಜೆಟ್ ನಂತರ ನಾಲ್ಕೂ ದಿಕ್ಕುಗಳಿಂದ ರಥಯಾತ್ರೆ: ಕಾಂಗ್ರೆಸ್‌ನ ಬಸ್ ಯಾತ್ರೆಗೆ ಬಿಜೆಪಿ ಸಡ್ಡು
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ: ರಾಜ್ಯದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ವಿಜಯ ಸಂಕಲ್ಪ ಯಾತ್ರೆಯನ್ನು ಜ.21ರಂದು ವಿಜಯಪುರದ ಸಿಂಧಗಿಯಿಂದ ಆರಂಭಿಸಲಾಗುತ್ತದೆ. ಸಿಂಧಗಿ ತಾಲೂಕಿನಿಂದ ಆರಂಭಿಸಲಾಗುವ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಲಿದ್ದಾರೆ. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯ ಕರಪತ್ರ ಹಂಚಿಕೆ ಮಾಡಲಾಗುತ್ತದೆ. ಜನರಿಗೆ ಯೋಜನೆಗಳ ವಿವರವನ್ನು ಕೊಟ್ಟು ಮತಬೇಟೆ ಆಡಲು ಸಿದ್ಧವಾಗಿದೆ. ಜೊತೆಗೆ, ರಾಜ್ಯದಲ್ಲಿರುವ 58 ಸಾವಿರ ಬೂತ್‌ಗಳಲ್ಲಿ ಪ್ರತಿ ಮನೆ ಮನೆಗೂ ಹೋಗಿ ಸರ್ಕಾರದ ಯೋಜನೆಗಳು ಮತ್ತು ಜನರಿಗೆ ಆಗಿರುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತದೆ.
ಬಿಜೆಪಿ ಬೆಂಬಲಿಸಿ 10 ದಿನ ಮಿಸ್ಡ್ ಕಾಲ್ ಅಭಿಯಾನ: ಇನ್ನು ವಿಜಯ ಸಂಕಲ್ಪ ಅಭಿಯಾನದ ದಿನದಂದು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ತಮ್ಮ ಕಾರು, ಬೈಕ್‌ಗಳ ಮೇಲೆ ಜನಪರ ಯೋಜನೆಗಳ ಸ್ಟಿಕ್ಕರ್ ಪ್ರದರ್ಶನ ಮಾಡಬೇಕು. ವಾಹನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯ ಕರಪತ್ರ ಇಟ್ಟುಕೊಂಡು ಮತದಾರರಿಗೆ ಹಂಚಿಕೆ ಮಾಡಬೇಕು. ಒಟ್ಟು 58 ಸಾವಿರ ಬೂತ್‌ಗಳಲ್ಲಿ ಮನೆ ಮನೆ ಸಂಪರ್ಕ ಮಾಡಬೇಕು. 5 ಲಕ್ಷ ಗೋಡೆಗಳ ಮೇಲೆ ಸರ್ಕಾರದ ಸಾಧನೆಗಳ ಬರಹವನ್ನು ಬರೆಸಬೇಕು. ಮುಖ್ಯವಾಘಿ ಬಿಜೆಪಿ ಬೆಂಬಲಿಸಿ ಮಿಸ್ಡ್ ಕಾಲ್ ಅಭಿಯಾನವನ್ನೂ ನಡೆಸಬೇಕು. ಒಟ್ಟಾರೆ 1 ಕೋಟಿಗೂ ಅಧಿಕ ಜನರನ್ನು ಸಂಪರ್ಕಿಸುವ ಗುರಿಯನ್ನು ಇಟ್ಟುಕೊಂಡಿದೆ.
ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಇಂದು ಪುನಾರಂಭ: ಹೊಸಪೇಟೆ, ಕೊಪ್ಪಳದಲ್ಲಿ ಬೃಹತ್ ಸಮಾವೇಶ
ಪರಸ್ಪರ ಹಗರಣಗಳ ಬಯಲು: ಹೌದು, ಈಗಾಗಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿ ಮೂರು ಪಕ್ಷಗಳಿಂದ ಪರ- ವಿರೋಧಗಳು, ಆಡಳಿತ ಪಕ್ಷದ ಕಾರ್ಯಗಳು, ಕೊಡುಗೆಗಳು, ಯೋಜನೆಗಳು, ದುರಾಡಳಿತ, ಭ್ರಷ್ಟಾಚಾರ, ಕಮಿಷನ್, ವಿಪಕ್ಷಗಳ ದುರಾಡಳಿತ, ಯೋಜನೆಗಳ ವಿಫಲತೆ ಎಲ್ಲವನ್ನು ಬಯಲಿಗೆಳೆದುಕೊಂಡು ಮತಬೇಟೆ ಮಾಡುತ್ತಿದ್ದಾರೆ. ಇನ್ನು ಆಡಳಿತ ಮತ್ತು ವಿಪಕ್ಷಗಳ ನಾಯಕರ ಹಗರಣಗಳನ್ನು ಬಯಲಿಗೆಳೆಯುವ ಕಾರ್ಯವನ್ನು ಮಾಡಲಾಗುತ್ತಿದೆ. ಇನ್ನು ಐಟಿ, ಸಿಐಡಿ, ಇಡಿ ದಾಳಿಯನ್ನೂ ಕೂಡ ಸರ್ಕಾರದ ಹುನ್ನಾರ ಎಂದು ಹೇಳಲಾಗುತ್ತಿದೆ.