ಈಶ್ವರಪ್ಪರನ್ನ ಸಂಪುಟದಿಂದ ವಜಾಗೊಳಿಸಿ, ಒಳಗೆ ಹಾಕಿ: ಪ್ರಿಯಾಂಕ್ ಖರ್ಗೆ ಆಗ್ರಹ
* ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ
* ಸಚಿವ ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು
* ಈಶ್ವರಪ್ಪರನ್ನ ಸಂಪುಟದಿಂದ ವಜಾಗೊಳಿಸುವಂತೆ ಪ್ರಿಯಾಂಕ್ ಖರ್ಗೆ ಆಗ್ರಹ
ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ, (ಏ.12):- ಗುತ್ತಿಗೆದಾರ ಸಂತೋಷ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ. ಡೆತ್ ಮೆಸೆಜ್ ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಉಲ್ಲೇಖವಿರುವುದರಿಂದ ಅವರನ್ನ ಕೂಡಲೇ ವಜಾ ಮಾಡಿ ಒಳಗೆ ಹಾಕಿ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರೀಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣ: 40 ಪರ್ಸೆಂಟ್ ಕಮಿಷನ್ ಆರೋಪದ ಇನ್ಸೈಡ್ ಕಹಾನಿ..!
ಗುತ್ತಿಗೆದಾರರು ಈ ಮುಂಚೆ ಸರ್ಕಾರ 40 % ಕಮಿಷನ್ ಬೇಡಿಕೆ ಇಟ್ಟಿದೆ ಎಂದು ಆರೋಪಿಸಿದ್ದರು. ಈ ಕುರಿತು ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಆದರೂ ಕೂಡಾ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರತಿಯೊಂದಕ್ಕೂ ಸರ್ಕಾರ ದಾಖಲೆ ಕೇಳುತ್ತಿದೆ ಈಗ ಒಂದು ಜೀವ ಹೋಗಿದೆ ಇದಕ್ಕಿಂದ ಪ್ರೂಫ್ ಬೇಕಾ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
40 ಪರ್ಸೆಂಟ್ ಕಮಿಷನ್ ಬಗ್ಗೆ ಈ ಹಿಂದೆ ಅನೇಕ ಬಾರಿ ಸಂತೋಷ ಹೇಳಿದ್ದರು. ಆದರೆ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಾ ಖಾವುಂಗ.. ಖಾನೇಕೋಭಿ ನಹಿ ದೇವುಂಗ ಎಂದು ಪ್ರಧಾನಿ ಹೇಳಿದ್ದರು. ಆದರೆ ಸರ್ಕಾರದಲ್ಲಿ ಎಲ್ಲವು ನಡೆಯುತ್ತಿದೆ. ಈ ವಿಷಯವನ್ನ ಬೆಳಗಾವಿ-ಬೆಂಗಳೂರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇವು. ಆದರೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ದುರ್ದೈವವೆಂದರೆ ಚರ್ಚೆ ಮಾಡಲು ನಿಮ್ಮಹತ್ರ ಪ್ರೂಫ್ ಇದೆಯಾ ಅಂತಾ ಕೇಳಿದ್ದರು" ಎಂದು ನೆನಪಿಸಿಕೊಂಡರು.
ಸಿಎಂ ಬಸವರಾಜ್ ಬೊಮ್ಮಾಯಿ ಆರ್‌ಎಸ್‌ಎಸ್ ಕೈಗೊಂಬೆಯಾಗಿದ್ದು ಅಸಹಾಯಕರಾಗಿದ್ದಾರೆ. ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದವರ ಮೇಲೆ ಕ್ರಮ ತೆಗೆದುಕೊಳ್ಳದ ಸಿಎಂ, ಓರ್ವ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರಾ? ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಜನರ ಹಿತ ಬಲಿ ಕೊಡುತ್ತಿದ್ದಾರೆ ಎಂದು ದೂರಿದರು.
ಸಂತೋಷ ಪಾಟೀಲ್ ಡೆತ್ ಮೆಸೆಜ್ ನಲ್ಲಿ ತಮ್ಮ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಸ್ಪಷ್ಟ ವಾಗಿ ಉಲ್ಲೇಖಿಸಿರುವುದರಿಂದ ಆತ್ಮಹತ್ಯೆಗೆ ಪ್ರೇರಣೆ ಎಂದು ಕೇಸು ದಾಖಲಿಸಬೇಕು ಜೊತೆಗೆ ನ್ಯಾಯಾಧೀಶರಿಂದ ಸಮಗ್ರ ತನಿಖೆ ಆಗುವರೆಗೆ ಈಶ್ವರಪ್ಪನವರನ್ನ ಸಂಪುಟದಿಂದ ವಜಾ ಮಾಡಬೇಕು ಎಂದು ಪ್ರೀಯಾಂಕ್ ಖರ್ಗೆ ಆಗ್ರಹಿಸಿದರು.
ಖರ್ಗೆ ಅವರಿಗೆ ಇಡಿ ಶಾಕ್ ಅಲ್ಲ
ನ್ಯಾಷನಲ್ ಹೆರಾಲ್ಡ್ ಗೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಡಿ ವಿಚಾರಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರೀಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಡಿ, ಶಾಕ್ ಐಟಿ ಶಾಕ್ ಅನ್ನೋದೆಲ್ಲಾ ಸುಳ್ಳು. ಅಹ್ಮದ್ ಪಟೇಲ್, ಗುಲಾಂನಭಿ ಅಜಾದ್ ಈ ಮೊದಲು ಟ್ರಸ್ಟಿ ಇದ್ರು. ಅವರ ನಿಧನದ ನಂತರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆ ಟ್ರಸ್ಟಗೆ ನೇಮಕ ಮಾಡಲಾಗಿದೆ. ಇದು ಈಗಿನ ಪ್ರಕರಣವಲ್ಲ ಹಳೆಯ ಪ್ರಕರಣ. ಒಬ್ಬ ಡೈರೆಕ್ಟರ್ ಆಗಿ ಏನು ದಾಖಲೆ ಪುರಾವೋ ಕೊಡಬೇಕೋ ಇಡಿಯವರಿಗೆ ಕೊಡ್ತಿದಾರೆ. ಮಾಧ್ಯಮಗಳಲ್ಲಿ ಬರುತ್ತಿರುವಂತೆ ಇದು ಖರ್ಗೆಯವರಿಗೆ ಇಡಿ ಶಾಕ್, ಐಟಿ ಶಾಕ್ ಅಲ್ಲ. ಎಂದರು.
ಸೋನಿಯಾಗಾಂಧಿ, ರಾಹುಲ್ ಗಾಂಧಿಯವರನ್ನು ಯಾವುದರಲ್ಲಾದರೂ ಸಿಲುಕಿಸಲು ಬಿಜೆಪಿಯವರು ಪ್ರಯತ್ನ ಮಾಡ್ತಾನೆ ಇದಾರೆ. ಹತ್ತಾರು ವರ್ಷಗಳಿಂದ ಇವರು ಮಾಡ್ತಾನೆ ಇದಾರೆ , ಇದುವರೆಗೂ ಪ್ರೂವ್ ಮಾಡಕ್ಕಾಗಿಲ್ಲ ಎಂದು ಪ್ರೀಯಾಂಕ್ ಖರ್ಗೆ ತಿರುಗೇಟು ನೀಡಿದರು.