2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ತನ್ನ ಮೊದಲ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಯುವಕರಿಗೆ ಉದ್ಯೋಗ, ಉಚಿತ ಲ್ಯಾಪ್ಟಾಪ್ ಮತ್ತು ರೈತರ ಸಾಲ ಮನ್ನಾದಂತಹ ಭರವಸೆಗಳನ್ನು ನೀಡಲಾಗಿದೆ. ಮತ್ತೊಂದೆಡೆ ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಲಖನೌ (ನ.27): ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ(UP Assembly election 2027)ಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಸಮಾಜವಾದಿ ಪಕ್ಷ(SP) ಯುವಕರು, ಜೆನ್ಜೀಗಳನ್ನು ಗುರಿಯಾಗಿಸಿಕೊಂಡ ತನ್ನ ಮೊದಲ ಚುನಾವಣಾ ಪ್ರಣಾಳಿಕೆ(Election Manifesto)ಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ವೇಳೆ ಮಾತನಾಡಿದ ಅಖಿಲೇಶ್(Akhilesh Yadav), ‘ಒಳ್ಳೆ ದಿನಗಳು ಬಂದಿಲ್ಲ. ಆದರೆ ಕೆಟ್ಟ ದಿನಗಳು ತೊಲಗಲಿವೆ’ ಎಂದಿದ್ದಾರೆ.
ಎಸ್ಪಿ ಚುನಾವಣಾ ಪ್ರಣಾಳಿಕೆಗಳಲ್ಲೇನಿದೆ?
ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಹ್ಯಾಟ್ರಿಕ್ ತಪ್ಪಿಸುವ ನಿಟ್ಟಿನಲ್ಲಿ ಹಲವು ಭರ್ಜರಿ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ. 5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಸರ್ಕಾರಿ ನೌಕರಿ, 2-3 ಕೋಟಿ ಜನರಿಗೆ ಇತರೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ, 12ನೇ ತರಗತಿಯಿಂದ ತೇರ್ಗಡೆಯಾಗುವವರಿಗೆ 20 ಲಕ್ಷ ಜನರಿಗೆ ಉಚಿತ ಲ್ಯಾಪ್ಟಾಪ್, ವೃದ್ಧೆಯರಿಗೆ ವಾರ್ಷಿಕ 40 ಸಾವಿರ ರು. ಪಿಂಚಣಿ, ಕೃಷಿ ಸಾಲ ಮನ್ನಾದ ಭರವಸೆ ನೀಡಲಾಗಿದೆ. ಜೊತೆಗೆ ಬಡವರು ಮತ್ತು ಪಿಡಿಎ ಸಮುದಾಯದ ಮಹಿಳೆಯರಿಗಾಗಿ 5 ರು.ಗೆ ಊಟ ಒದಗಿಸುವ ಕ್ಯಾಂಟೀನ್ಗಳನ್ನು ಆರಂಭಿಸುವ ಘೋಷಣೆ ಮಾಡಲಾಗಿದೆ.
- 25 ಲಕ್ಷ ಯುವಕರಿಗೆ ಸರ್ಕಾರಿ ಕೆಲಸ, 3 ಕೋಟಿ ಯುವಕರಿಗೆ ಇತರೆ ಕ್ಷೇತ್ರದಲ್ಲಿ ಉದ್ಯೋಗ.
- ₹50 ಕೋಟಿವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ದಲಿತರು, ಪಿಡಿಎ ಸಮುದಾಯಕ್ಕೆ 50% ಮೀಸಲು.
- ನಿರುದ್ಯೋಗಿಗಳಿಗೆ ಮಾಸಿಕ ₹5,000 ಸಹಾಯಧನ, ನಗರ ಉದ್ಯೋಗ ಖಾತರಿ ಕಾಯ್ದೆ ಜಾರಿ.
- ರೈತರ ಕೃಷಿ ಸಾಲ ಮನ್ನಾ, ಜಾತಿ ಗಣತಿ, ಪಿಯು ಉತ್ತೀರ್ಣರಾದವರಿಗೆ ಉಚಿತ ಲ್ಯಾಪ್ಟಾಪ್.
- ವೃದ್ಧ ಮಹಿಳೆಯರಿಗೆ ವಾರ್ಷಿಕ ₹40,000 ಪಿಂಚಣಿ. ಹಣ ಬ್ಯಾಂಕ್ ಖಾತೆಗೆ ನೇರ ವರ್ಗ.
- ಕಾರ್ಮಿಕರು, ಮಹಿಳಾ ಕಾರ್ಮಿಕರು, ಕುಶಲಕರ್ಮಿಗಳಿಗೆ ವಾರ್ಷಿಕ ₹40,000 ಪಿಂಚಣಿ.
- ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ. ಲೋಪಕ್ಕೆ ಅಧಿಕಾರಿಗಳು, ಸಚಿವರು ಹೊಣೆ.
- ಹಿರಿಯ ನಾಗರಿಕರಿಗೆ ವೃದ್ಧಾಶ್ರಮ, ಕ್ಲಬ್ಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪ್ರಯಾಣ.
- ₹15,000 ಕೋಟಿ ನಿಧಿ ಸ್ಥಾಪಿಸಿ, ಕಬ್ಬು ಬೆಳೆಗಾರರಿಗೆ 24 ಗಂಟೆಯೊಳಗೆ ಹಣ ಪಾವತಿ ವ್ಯವಸ್ಥೆ.
- ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ, ರಾಜ್ಯ ಶಿಕ್ಷಣ ನೀತಿ ಜಾರಿ.
- ದಲಿತ ಅಭಿವೃದ್ಧಿ ಮಂಡಳಿ ರಚನೆ। 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು.
- ಬಿಜೆಪಿ ಮುಚ್ಚಿದೆ ಎನ್ನಲಾದ 26,000 ಸರ್ಕಾರಿ ಪ್ರಾಥಮಿಕ ಶಾಲೆ ಮತ್ತೆ ಓಪನ್.
ನಾವು ಮಿತ್ರರೋ, ಸೇವಕರೋ: ಎಸ್ಪಿ ವಿರುದ್ಧ ಕಾಂಗ್ರೆಸ್ ಕಿಡಿ
ಲಖನೌ: ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಏಕಪಕ್ಷೀಯವಾಗಿ 5 ಅಭ್ಯರ್ಥಿಗಳ ಹೆಸರು ಪ್ರಕಟ ಮಾಡಿದ ಎಸ್ಪಿ ವಿರುದ್ಧ ಕಾಂಗ್ರೆಸ್ ನಾಯಕ ಇಮ್ರಾನ್ ಮಸೂದ್ ಕಿಡಿಕಾರಿದ್ದಾರೆ.
‘ನಮ್ಮ ಪಕ್ಷ ಎಸ್ಪಿ ಹೇಳಿದಂತೆ ಕೇಳಲು ಇರುವುದಲ್ಲ. ಅವರು ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ನಂತರ ನಮಗೆ ಸೀಟುಗಳನ್ನು ಬಿಡುತ್ತಾರೆ. ನಾವು ಮಿತ್ರಪಕ್ಷದವರೋ ಅಥವಾ ಆಳುಗಳೋ? ನಾವು ಸೀಟು ಹಂಚಿಕೆ ವಿಷಯದ ಬಗ್ಗೆ ಚರ್ಚಿಸಿದ್ದೆವು. ಆದರೆ ಈಗ ಆ ಚರ್ಚೆಗಳ ಬಗ್ಗೆ ಮಾತನಾಡಬಾರದೆಂದು ಆದೇಶ ಹೊರಡಿಸಲಾಗಿದೆ’ ಎಂದು ಕಿಡಿ ಕಾರಿದರು. 403 ಸಂಖ್ಯಾಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 181 ಸೀಟುಗಳಿಗಾಗಿ ಬೇಡಿಕೆಯಿಟ್ಟಿದೆ. ಆದರೆ ಎಸ್ಪಿ ಕೇವಲ 26 ಸೀಟುಗಳನ್ನು ನೀಡಲು ಒಪ್ಪಿಕೊಂಡಿದೆ.
















