ಉತ್ತರ ಪ್ರದೇಶ ಚುನಾವಣೆ ತಯಾರಿ ಜೋರಾಗಿದೆ. ಇದರ ನಡುವೆ ಸಮೀಕ್ಷೆಯೊಂದು ಬಯಲಾಗಿತ್ತು, ಭಾರಿ ಕುತೂಹಲ ಮೂಡಿಸಿದೆ. ಕಾರಣ ಬಿಜೆಪಿ ಹಾಗೂ ಸಮಾಜವಾದಿ ಪಾರ್ಟಿ ನಡುವೆ ಜಿದ್ದಾಜಿದ್ದಿ ಪೈಪೋಟಿ ಇದೆ. ಸಮೀಕ್ಷೆ ಫಲಿತಾಂಶ ಏನು?

ನವದೆಹಲಿ (ನ.26) ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಸಮೀಕ್ಷೆಯೊಂದು ಹೊರಬಿದ್ದಿದೆ. ಈ ಬಾರಿ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಾರ್ಟಿ ನಡುವೆ ನೇರ ಪೈಪೋಟಿ ಇದೆ. ಇದನ್ನು ಸಮೀಕ್ಷೆ ಸ್ಪಷ್ಟವಾಗಿ ಹೇಳಿದೆ. ಬಿಜೆಪಿ ಹಾಗೂ ಸಮಾಜವಾದಿ ಪಾರ್ಟಿ ನಡುವಿನ ಜಿದ್ದಾಜಿದ್ದಿ ಪೈಪೋಟಿ ಹಾಗೂ ಫಲಿತಾಂಶ ಕುರಿತು ಕೆಲ ಕುತೂಹಲಕಾರಿ ಅಂಕಿ ಅಂಶ ಸಮೀಕ್ಷೆ ಬಹಿರಂಗಪಡಿಸಿದೆ. 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 177 ರಿಂದ 213 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

ಅಕ್ಟೋಬರ್ 15ರಿಂದ ನವೆಂಬರ್ 23ರ ವರೆಗೆ 91,429 ಮಂದಿಯ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ವರದಿ ತಯಾರಿಸಲಾಗಿದೆ. 403 ವಿಧಾನಸಭಾ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆಗೆ 203 ಸ್ಥಾನ ಗೆಲ್ಲಬೇಕು. ವಿಶೇಷ ಅಂದರೆ ಬಿಜೆಪಿ 177ರಿಂದ 215 ಸ್ಥಾನ ಪಡೆದರೆ, ಸಮಾಜವಾದಿ ಪಾರ್ಟಿ 160 ರಿಂದ 202 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಬಿಜೆಪಿ ಹಾಗೂ ಸಮಾಜವಾದಿ ಪಾರ್ಟಿ ನಡುವಿನ ಹೋರಾಟದಲ್ಲಿ ಸಣ್ಣ ಪಕ್ಷಗಳಾದ ಅಪ್ನಾದಳ, ಆರ್‌ಎಲ್‌ಡಿ, ಸುಭಾಎಸ್‌ಪಿ ಸೇರಿದಂತೆ ಕೆಲ ಪಾರ್ಟಿಗಳ ಮೂಲೆಗುಂಪಾಗಲಿದೆ ಎಂದುು ಸಮೀಕ್ಷೆ ಹೇಳಿದೆ.

ಸಮಾಜವಾದಿ ಪಾರ್ಟಿ ಕಾಂಗ್ರೆಸ್ ಮೈತ್ರಿಯಿಂದ ಲಾಭ

ಈ ಸಮೀಕ್ಷೆಯಲ್ಲಿ ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ಅಖಿಲೇಶ್ ಯಾದವ್‌ಗೆ ಭರ್ಜರಿ ಲಾಭವಾಗಲಿದೆ ಎಂದಿದೆ. ಈ ಮೈತ್ರಿ ಪಕ್ಷಗಳು ಜೊತೆಯಾಗಿ 174 ರಿಂದ 219 ಸ್ಥಾನ ಗೆಲ್ಲಲಿದೆ ಎಂದಿದೆ. ಇತ್ತ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ 181 ರಿಂದ 226 ಸ್ಥಾನ ಗೆಲ್ಲಲಿದೆ ಎಂದಿದೆ.

ಮುಖ್ಯಮಂತ್ರಿ ಯಾರಾಗಬೇಕು

ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಕುರಿತು ಜನರ ಅಭಿಪ್ರಾಯ ಏನು ಅನ್ನೋದು ಈ ಸಮೀಕ್ಷಾ ಫಲಿತಾಂಶ ಬಹಿರಂಗಪಡಿಸಿದೆ. ಶೇಕಡಾ 35.29ರಷ್ಟು ಮಂದಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಮತ ನೀಡಿದ್ದಾರೆ. ಇನ್ನು ಶೇಕಡಾ 26.50ರಷ್ಟು ಮಂದಿ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಲಿ ಎಂದು ಮತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡಾ 8.59ರಷ್ಟು ಮಂದಿ ಬಿಎಸ್‌ಪಿ ನಾಯಕ ಮಾಯಾವತಿ ಮುಖ್ಯಮಂತ್ರಿಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಬಹುಜನ ಸಮಾಜ ಪಕ್ಷ ಕೇವಲ ಒಂದು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಇದೇ ಸಮೀಕ್ಷೆ ಹೇಳಿದೆ.

ಬಿಜೆಪಿ ಹಾಗೂ ಸಮಾಜವಾದಿ ಪಾರ್ಟಿ ನಡುವೆ ಹೋರಾಟ ತೀವ್ರಗೊಂಡಿದೆ. ಸಮಾಜವಾದಿ ಪಾರ್ಟಿ ಇದೇ ಕಾರಣದಿಂದ ಕಾಂಗ್ರೆಸ್‌ಗೆ ಕಡಿಮೆ ಸೀಟು ಹಂಚಿಕೆ ಮಾಡಿ, ಗರಿಷ್ಠ ಸೀಟುಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ.