ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಮುನ್ನಲೆಗೆ ಬಂದಿದ್ದು, ಇದು ಸ್ವಾರ್ಥಕ್ಕಾಗಿ ಎಂದು ಸಚಿವ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ. ಇದರೊಂದಿಗೆ ವಾಲ್ಮೀಕಿ ನಿಗಮ ಹಗರಣದ ಎಸ್ಐಟಿ ತನಿಖೆ ನಿಷ್ಪಕ್ಷಪಾತವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಬೀದರ್ (ನ.26): ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಕೆಗೆ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.
ಸ್ವಾರ್ಥಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು:
ಬಾಲಚಂದ್ರ ಜಾರಕಿಹೊಳಿ ಅವರ ಪ್ರತ್ಯೇಕ ರಾಜ್ಯದ ಕುರಿತು ಹೇಳಿಕೆಗೆ ಬೀದರ್ನಲ್ಲಿ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು, ಅವರವರ ಸ್ವಾರ್ಥಕ್ಕಾಗಿ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಕೌಂಟರ್ ಕೊಟ್ಟರು.
ಉತ್ತರ ಕರ್ನಾಟಕ ವಿಚಾರವಾಗಿ ಪ್ರಾದೇಶಿಕ ಅಸಮತೋಲನ ಇದೆ ಅದನ್ನ ನಾನು ಒಪ್ಪುತ್ತೇನೆ. ಆದರೆ ನಾವೆಲ್ಲರೂ ಒಗ್ಗಟ್ಟಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುವ ಅಗತ್ಯವಿದೆ. ರಾಜಕೀಯ ಇಚ್ಛಾಶಕ್ತಿಯಿಂದ ರಾಜ್ಯದ ಎಲ್ಲ ಪ್ರದೇಶಗಳನ್ನು ಸರಿಸಮನವಾಗಿ ಕಾಣಬೇಕು, ಅಭಿವೃದ್ಧಿಪಡಿಸಬೇಕು. ನಮ್ಮ ಸರ್ಕಾರ ಎಲ್ಲ ದಕ್ಷಿಣ-ಉತ್ತರ ಎನ್ನದೆ ಎಲ್ಲವನ್ನು ಸಮಾನವಾಗಿ ಪರಿಗಣಿಸಿ ಅಭಿವೃದ್ಧಿಗೊಳಿಸಲು ಬದ್ಧವಾಗಿದೆ, ಆ ಬಗ್ಗೆ ಪ್ರಯತ್ನ ನಡೆದಿದೆ ಎಂದರು.
ಬಿ.ನಾಗೇಂದ್ರ ಪರ ಸಚಿವರ ಬ್ಯಾಟಿಂಗ್
ಇನ್ನು ವಾಲ್ಮೀಕಿ ನಿಗಮ ಹಗರಣದಲ್ಲಿ ಬಿ.ನಾಗೇಂದ್ರನಿಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಸರ್ಕಾರದ ವ್ಯಾಪ್ತಿಯ ತನಿಖಾ ತಂಡಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿವೆ. ಅನೇಕ ಪ್ರಕರಣಗಳಲ್ಲಿ ಇದು ಸಾಬೀತಾಗಿದೆ. ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಕೆಲವು ಹೇಳಿಕೆಗಳನ್ನ ನೀಡುತ್ತಿದ್ದಾರೆ. ಈಗ ಸತ್ಯ ಹೊರಬಂದಿದೆ ಎನ್ನುವ ಮೂಲಕ ಸಚಿವರು ಬಿ.ನಾಗೇಂದ್ರಗೆ ಕ್ಲೀನ್ಚೀಟ್ ಬಗ್ಗೆ ಸಮರ್ಥಿಸಿಕೊಂಡರು.
















