ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಗೊಂದಲಕ್ಕೆ ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಅವರೇ ಕಾರಣ ಎಂದು ಆರೋಪಿಸಿರುವ ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು, ಪಕ್ಷಕ್ಕಾಗಿ ದುಡಿದ ಕೆ. ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮ್ಮದ್ ವಿರುದ್ಧದ ಕ್ರಮವನ್ನು ಖಂಡಿಸಿದ್ದಾರೆ. 

 ದಾವಣಗೆರೆ (ಏ.19) ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಗೊಂದಲಗಳಿಗೆ ಸಲೀಂ ಅಹ್ಮದ್‌, ರಿಜ್ವಾನ್ ಅರ್ಷದ್‌ ಅವರೇ ಮುಖ್ಯ ಕಾರಣರಾಗಿದ್ದಾರೆ. ಪಕ್ಷಕ್ಕಾಗಿ ದುಡಿದ ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್‌, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹಮ್ಮದ್ ವಿರುದ್ಧದ ಕ್ರಮವನ್ನು ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ನೇತೃತ್ವದಲ್ಲಿ ವಿವಿಧ ಮಸೀದಿಗಳ ಅಧ್ಯಕ್ಷರು, ಮುಸ್ಲಿಂ ಮುಖಂಡರು, ಕ್ರೈಸ್ತ ಮುಖಂಡರು ಒತ್ತಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಅಬ್ದುಲ್ ಘನಿ ತಾಹೀರ್‌, ರಾಜ್ಯದಲ್ಲಿ 135ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಅಬ್ದುಲ್ ಜಬ್ಬಾರ್, ಜಮೀರ್ ಅಹ್ಮದ್, ನಸೀರ್ ಅಹ್ಮದ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. 8 ವರ್ಷದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಜಬ್ಬಾರ್ ರಾಜ್ಯಾದ್ಯಂತ ಸುತ್ತಾಡಿ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಕಡೆ ಸೆಳೆಯವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಬ್ಬಾರ್, ನಸೀರ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡೆಗೆ ರಾಜ್ಯವ್ಯಾಪಿ ಮುಸ್ಲಿಂ ಸಮುದಾಯ ದುಃಖದಲ್ಲಿದೆ. ಉಲ್ಮಾ (ಮುಸ್ಲಿಂ ಧರ್ಮಗುರು)ಗಳು ಕಾಂಗ್ರೆಸ್ಸಿನ ಕ್ರಮವನ್ನು ಖಂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಬಹುತೇಕ ಎಲ್ಲ ಮಸೀದಿಗಳ ಅಧ್ಯಕ್ಷರು, ಕ್ರೈಸ್ತ ಮುಖಂಡರು ಒಂದಾಗಿ ಕಾಂಗ್ರೆಸ್ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಎಐಸಿಸಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಈಗ ಇಲ್ಲಿ ಪಕ್ಷಪಾತಿ ಧೋರಣೆ ತೋರಿಸುತ್ತಿದ್ದಾರೆ. ಚಿಕ್ಕಮಗಳೂರಿನಿಂದ ಬೀದರ್‌ವರೆಗೂ ಜಬ್ಬಾರ್ ಹೆಸರನ್ನು ಅಲ್ಪಸಂಖ್ಯಾತರು ಹೇಳುತ್ತಾರೆ. ಆದರೆ, ನಮ್ಮ ಜಿಲ್ಲೆಯ ಕಾಂಗ್ರೆಸ್ಸಿನ ನಾಯಕರು ಎನಿಸಿಕೊಂಡವರು ನೆರೆ ಜಿಲ್ಲೆಗಳಿರಲಿ, ಪಕ್ಷದ ಕ್ಷೇತ್ರಕ್ಕೂ ಹೋಗುವುದಿಲ್ಲ ಎಂಬುದು ಸುರ್ಜೇವಾಲಾ ಅವರಿಗೆ ಅರಿವಿಲ್ಲವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಂಜೀಂ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ವೈ.ಎಂ.ಫಕೃದ್ದೀನ್ ಮಾತನಾಡಿ, ಈ ಹಿಂದೆ ಶಾಮನೂರು ಶಿವಶಂಕರಪ್ಪ ಸ್ಪರ್ಧೆಗೆ ಇದೇ ರೀತಿ ಆದಾಗ 40 ಸಾವಿರ ಮತಗಳಿಂದ ಶಾಮನೂರುಗೆ ಗೆಲ್ಲಿಸಿದ್ದೆವು. ‍‍ ಆಗ ಸಮಸ್ಯೆ ಪರಿಹರಿಸಿದ್ದು ಇದೇ ಮಲ್ಲಿಕಾರ್ಜುನ ಅವರೇ ಹೊರತು ಸಲೀಂ, ರಿಜ್ವಾನ್ ಅಲ್ಲ. ಹೀಗೆ ಹೊರಗಿನಿಂದ ಬಂದವರೇ ಇಲ್ಲಿ ಸಮಸ್ಯೆ ಮಾಡಿ ಹೋಗಿದ್ದಾರೆ. ಇಲ್ಲಿನ ಹಿರಿಯರು ಪಕ್ಷದ ಬೆನ್ನಿಗೆ ಚೂರಿ ಹಾಕಿದರು ಅಂತಿದ್ದಾರೆ. ಈ ಇಬ್ಬರು ಯಾವೊಬ್ಬ ಉಲ್ಮಾಗಳನ್ನು ಭೇಟಿ ಮಾಡಲಿಲ್ಲ ಎಂದು ತಿಳಿಸಿದರು.