Asianet Suvarna News Asianet Suvarna News

ಪೈಲಟ್‌ ಸೇರಿ 19 ಕಾಂಗ್ರೆಸ್ ಶಾಸಕರಿಗೆ ಈಗ ಹೊಸ ಭೀತಿ!

ರಾಜಸ್ಥಾನ ರಾಜಕೀಯದಲ್ಲಿ ಶಾಕಿಂಗ್ ಬೆಳವಣಿಗೆ} ಪೈಲಟ್‌ಗೆ ಹೊಸ ಆತಂಕ| ಅನರ್ಹತೆ ಭೀತಿಯಲ್ಲಿ ಪೈಲಟ್‌, 18 ಕಾಂಗ್ರೆಸ್‌ ಶಾಸಕರು| ಸ್ಪೀಕರ್‌ರಿಂದ ಅನರ್ಹತೆ ನೋಟಿಸ್‌ ಜಾರಿ

Sachin Pilot and 18 Congress MLAs face disqualification from state assembly
Author
Bangalore, First Published Jul 16, 2020, 8:02 AM IST

ನವದೆಹಲಿ(ಜು.16): ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಸಚಿನ್‌ ಪೈಲಟ್‌ ಹಾಗೂ ಅವರ 18 ಬೆಂಬಲಿಗ ಶಾಸಕರಿಗೆ ರಾಜಸ್ಥಾನ ವಿಧಾನಸಭೆ ಸ್ಪೀಕರ್‌ ಅನರ್ಹತೆ ನೋಟಿಸ್‌ ಜಾರಿ ಮಾಡಿದ್ದಾರೆ. ನೋಟಿಸ್‌ಗೆ ಶುಕ್ರವಾರದೊಳಗೆ ಉತ್ತರಿಸಬೇಕು ಎಂದು ಸೂಚಿಸಿದ್ದಾರೆ.

ಸೋಮವಾರ ಹಾಗೂ ಮಂಗಳವಾರ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ಇತ್ತು. ಈ ಸಂಬಂಧ ಸಚೇತಕಾಜ್ಞೆ (ವಿಪ್‌) ಹೊರಡಿಸಲಾಗಿತ್ತು. ಆದರೆ ವಿಪ್‌ ಉಲ್ಲಂಘಿಸಿದ ಈ 19 ಶಾಸಕರು ಸಭೆಗೆ ಗೈರು ಹಾಜರಾಗಿದ್ದರು. ಇದನ್ನು ಪರಿಗಣಿಸಿದ ಕಾಂಗ್ರೆಸ್‌ ಮುಖ್ಯ ಸಚೇತಕ ಮಹೇಶ್‌ ಜೋಶಿ ಅವರು ಸಭಾಧ್ಯಕ್ಷ ಸಿ.ಪಿ. ಜೋಶಿ ಅವರಿಗೆ ಅನರ್ಹತೆ ದೂರು ಸಲ್ಲಿಸಿದ್ದರು. ಈ ಪ್ರಕಾರ ಸಿ.ಪಿ. ಜೋಶಿ ಅವರು 19 ಶಾಸಕರಿಂದ ಉತ್ತರ ಕೋರಿ ನೋಟಿಸ್‌ ಜಾರಿ ಮಾಡಿದ್ದಾರೆ.

ಮತ್ತೆ ಹೊಸ ಹಾದಿ ಹಿಡಿದ ಪೈಲಟ್, ಗಾಂಧಿ ಕುಟುಂಬಸ್ಥರನ್ನು ಸಂಪರ್ಕಿಸಲು ಯತ್ನ!

‘ಈ ಶಾಸಕರು ಉದ್ದೇಶಪೂರ್ವಕವಾಗಿ ಸಭೆಗೆ ಗೈರು ಹಾಜರಾಗಿದ್ದಾರೆ. ಸರ್ಕಾರ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಸರ್ಕಾರ ಬೀಳಿಸುವ ಯತ್ನ ನಡೆದಿವೆ’ ಎಂದು ಅನರ್ಹತೆ ದೂರಿನಲ್ಲಿ ಮಹೇಶ್‌ ಜೋಶಿ ತಿಳಿಸಿದ್ದಾರೆ.

ಜಿಲ್ಲಾ, ಬ್ಲಾಕ್‌ ಸಮಿತಿ ವಿಸರ್ಜನೆ:

ಪಕ್ಷದ ರಾಜ್ಯ ಘಟಕದಲ್ಲಿ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ ಬುಧವಾರ ರಾಜಸ್ಥಾನದ ಎಲ್ಲಾ ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದ ತನ್ನೆಲ್ಲಾ ಸಮಿತಿಗಳನ್ನು ವಿಸರ್ಜಿಸಿದೆ. ಸಚಿನ್‌ ಪೈಲಟ್‌ ಅವರ ಬೆಂಬಲಿಗರೆಲ್ಲರನ್ನು ಹುದ್ದೆಯಿಂದ ಹೊರಗಿಡುವ ನಿಟ್ಟಿನಲ್ಲಿ ಈ ನಿರ್ಧಾರ ತಾಳಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಬಂಡೆದ್ದಿರುವ ಶಾಸಕರಿಗೂ ಈಗಲೂ ಪಕ್ಷದ ಬಾಗಿಲು ತೆರೆದಿದೆ. ಸಚಿನ್‌ ಸೇರಿದಂತೆ ಎಲ್ಲಾ ನಾಯಕರು ಮತ್ತೆ ಪಕ್ಷದ ವೇದಿಕೆಗೆ ಬಂದು ತಮ್ಮ ಅಹವಾಲು ದಾಖಲಿಸಬಹುದು ಎಂದು ಹೇಳುವ ಮೂಲಕ ಬಂಡಾಯ ತಣ್ಣಗಾಗಿಸುವ ಮತ್ತೊಂದು ದಾಳವನ್ನು ಪಕ್ಷದ ನಾಯಕರು ಉರುಳಿಸಿದ್ದಾರೆ.

ಸಚಿನ್‌ ಕುದುರೆ ವ್ಯಾಪಾರ:

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಡಿಸಿಎಂ ಮತ್ತು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆ ಕಳೆದುಕೊಂಡ ಸಚಿನ್‌ ಪೈಲಟ್‌, ಬಿಜೆಪಿ ಜೊತೆ ಕಾಂಗ್ರೆಸ್‌ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದರು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತಮ್ಮ ಈ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದ್ದಾರೆ.

ಇದೇ ವೇಳೆ ‘ಸ್ಪುರದ್ರೂಪಿಯಾಗಿರುವುದು, ಉತ್ತಮ ಇಂಗ್ಲೀಷ್‌ ಮಾತನಾಡುವುದು, ಹೇಳಿಕೆ ನೀಡುವುದೇ ಎಲ್ಲವೂ ಅಲ್ಲ. ದೇಶಕ್ಕಾಗಿ ನಿಮ್ಮ ಹೃದಯದಲ್ಲೇನಿದೆ, ನಿಮ್ಮ ಸಿದ್ಧಾಂತಗಳೇನು ಮತ್ತು ಪಕ್ಷಕ್ಕಾಗಿ ಬದ್ಧತೆ ಎಂಬ ವಿಷಯಗಳ ಕೂಡಾ ಮುಖ್ಯವಾಗುತ್ತದೆ’ ಎನ್ನುವ ಮೂಲಕ ಸಚಿನ್‌ ಕುರಿತು ಗೆಹ್ಲೋಟ್‌ ವ್ಯಂಗ್ಯವಾಡಿದ್ದಾರೆ.

19 ಶಾಸಕರು ಅನರ್ಹರಾದರೆ?

- ರಾಜಸ್ಥಾನ ವಿಧಾನಸಭೆ ಬಲ 200

- ಕಾಂಗ್ರೆಸ್‌ ಪಕ್ಷದ ಹಾಲಿ ಬಲ 107

- ಬಿಜೆಪಿ+ಮಿತ್ರರ ಹಾಲಿ ಬಲ 75

- ಪಕ್ಷೇತರರು+ಇತರರ ಬಲ 18

- 19 ಕಾಂಗ್ರೆಸ್‌ ಶಾಸಕರು ಅನರ್ಹರಾದರೆ ಕಾಂಗ್ರೆಸ್‌ ಬಲ 88

ಸತ್ಯಕ್ಕೆ ಎಂದೂ ಸೋಲಿಲ್ಲ: ಸಚಿನ್ ಪೈಲಟ್‌ ಟ್ವೀಟ್‌ ಮರ್ಮವೇನು?

- ಆಗ ಸದನದ ಬಲ 181

- ಗೆಹ್ಲೋಟ್‌ಗೆ ಆಗ ಬಹುಮತಕ್ಕೆ ಬೇಕು 91

- ತಮಗೆ ಕೆಲವು ಪಕ್ಷೇತರರು+ಇತರರ ಬೆಂಬಲ ಇದೆ ಎಂದು ಗೆಹ್ಲೋಟ್‌ ವಿಶ್ವಾಸ

- ಅವರಿಗೆ ಕನಿಷ್ಠ 3 ಪಕ್ಷೇತರರ/ಇತರರ ಬೆಂಬಲ ಸಿಕ್ಕರೆ ಸೇಫ್‌

- ಆದರೆ 13 ಪಕ್ಷೇತರರು/ಸಣ್ಣಪುಟ್ಟಪಕ್ಷದ ಶಾಸಕರ ಬೆಂಬಲ ಇದೆ ಎಂದು ಪೈಲಟ್‌ ಹೇಳಿಕೆ

- ಇದು ನಿಜವಾದರೆ ಗೆಹ್ಲೋಟ್‌ ಸರ್ಕಾರಕ್ಕೆ ಗಂಡಾಂತರ

- ಹೀಗಾಗಿ ಪಕ್ಷೇತರರು/ಇತರರ ಬೆಂಬಲದ ಮೇಲೆ ಗೆಹ್ಲೋಟ್‌ ಸರ್ಕಾರದ ಹಣೆಬರಹ ನಿರ್ಧಾರ

Follow Us:
Download App:
  • android
  • ios