ಜೈಪುರ(ಜು.14): ರಾಜಸ್ಥಾನದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಬೆನ್ನಲ್ಲೇ ಸಚಿನ್ ಪೈಲಟ್‌ರನ್ನು ಡಿಸಿಎಂ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಕಾಂಗ್ರೆಸ್‌ನ ಈ ನಡೆ ಭಾರೀ ಕುತೂಹಲ ಕೆರಳಿಸಿದ್ದು, ಪೈಲಟ್‌ಗೆ ಶಾಕ್ ಕೊಟ್ಟಿದೆ. ಇನ್ನು ಕಾಂಗ್ರೆಸ್‌ನ ಈ ನಿರ್ಧಾರದ ಬೆನ್ನಲ್ಲೇ ಪೈಲಟ್‌ ಟ್ವೀಟ್‌ ಒಂದನ್ನು ಮಾಡಿದ್ದು, ಇದು ಭಾರೀ ಸದ್ದು ಮಾಡಿದೆ.

ಪೈಲಟ್‌ಗೆ ಡಬಲ್ ಶಾಕ್: ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದಲೂ ಔಟ್!

ಹೌದು ರಾಜಸ್ಥಾನದ ಕೈ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ಹಾಗೂ ಬಿಜೆಪಿ ಸೇರ್ಪಡೆಯಾಗುತ್ತಾರೆನ್ನಾಗಿದ್ದ ಡಿಸಿಎಂ ಸಚಿನ್ ಪೈಲಟ್ ತಮ್ಮ ಸ್ಥಾಣ ಕಳೆದುಕೊಂಡಿದ್ದಾರೆ. ಜೈಪುರದಲ್ಲಿ ನಡೆದ ಎರಡನೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗದ ಹಿನ್ನೆಲೆ ಸಚಿನ್ ಪೈಲೈಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೇ ಪೈಲಟ್ ಬೆಂಬಲಿಸಿದ್ದ ಸಚಿವರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನೂ ಅವರ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಸದ್ಯ ಪೈಲೈಟ್ ಟೀಂ ನ 17 ಮಂದಿ ಸದಸ್ಯರಿಗೆ ಆತಂಕ ಶುರುವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿನ್ ಪೈಲಟ್, ಸತ್ಯವನ್ನು ಗೊಂದಲದಲ್ಲಿಡಬಹುದೇ ಹೊರತು ಸೋಲಿಸಲಾಗದು ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.. ಈ ಮೂಲಕ ಪಕ್ಷದಲ್ಲಿ ನಡೆದ ಬೆಳವಣಿಗೆಗಳಿಗೆ ನಾನು ಕಾರಣ ಎಂದು ಬಿಂಬಿಸಲಾಗುತ್ತಿದ್ದು, ಅತೀ ಶೀಘ್ರದಲ್ಲೇ ಸತ್ಯ ಏನೆಂಬುದು ದೇಶದ ಜನತೆಗೆ ಗೊತ್ತಾಗಲಿದೆ ಎಂದು ಸಚಿನ್ ಸುಳಿವು ನೀಡಿದ್ದಾರೆ. ಅಲ್ಲದೇ ಸತ್ಯವನ್ನು ಮರೆಮಾಚುತ್ತಿರುವ ಕಾಂಗ್ರೆಸ್‌ಗೆ ಅದನ್ನು ಸೋಲಿಸುವ ಶಕ್ತಿ ಇಲ್ಲ ಎಂದಿರುವ ಪೈಲಟ್, ಅಂತಿಮವಾಗಿ ಸತ್ಯಕ್ಕೆ ಜಯ ಲಭಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ನಾಳೆ, ಬುಧವಾರ ಬೆಳ್ಗೆ ಹತ್ತು ಗಂಟೆಗೆ ಸಚಿನ್ ಪೈಲಟ್ ಸುದ್ದಿಗೋಷ್ಟಿ ಆಯೋಜಿಸಿದ್ದು, ಈ ವೇಳೆ ಏನು ಮಾತನಾಡುತ್ತಾರೆ ಎಂಬುವುದು ಭಾರೀ ಆಸಕ್ತಿ ಮೂಡಿಸಿದೆ.