ಆರ್‌ಎಸ್‌ಎಸ್ ಮಾತು ಕೇಳದ ನರೇಂದ್ರ ಮೊದಿ ಪಿಎಂ ಸ್ಥಾನದಿಂದ ವಜಾ ಆಗ್ತಾರೆ: ಸಚಿವ ಸಂತೋಷ್ ಲಾಡ್
ಕೇಂದ್ರದಲ್ಲಿ ಪ್ರಧಾನಿ ಬದಲಾಗುತ್ತಾರೆ, ಆರ್‌ಎಸ್‌ಎಸ್‌ನವರು ಮೋದಿಯನ್ನ ಪ್ರಧಾನಿ ಸ್ಥಾನದಿಂದ ಇಳಿಸುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಬಿರುಕು ಇದೆ ಎಂದು ಅವರು ಹೇಳಿದ್ದಾರೆ.
ಬೀದರ್ (ಅ.09): ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್‌ಎಸ್ಎಸ್) ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಡುವೆ ಬಿರುಕು ಮೂಡಿದ್ದು, ಶೀಘ್ರದಲ್ಲಿಯೇ ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೀದರ್‌ನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಮಂತ್ರಿ ಬದಲಾಗುತ್ತಾರೆ. ಆರ್‌ಎಸ್‌ಎಸ್‌ನವರು ಮೋದಿಯನ್ನ ಪ್ರಧಾನಿ ಸ್ಥಾನದಿಂದ ಇಳಿಸುತ್ತಾರೆ. ಆರ್‌ಎಸ್‌ಎಸ್ & ಬಿಜೆಪಿ ಮಧ್ಯೆ ಬಿರುಕು ಇದೆ. ಪ್ರಧಾನಿ ಮೋದಿ ಆರ್‌ಎಸ್‌ಎಸ್‌ನವರ ಮಾತು ಕೇಳುತ್ತಿಲ್ಲ ಎಂದು ಅಸಮಾಧಾನ ಇದೆ. ಕೇಂದ್ರದಲ್ಲೂ 30-40 ಸೀಟು ಮಾತ್ರ ವ್ಯತ್ಯಾಸ ಇವೆ. ಕೇಂದ್ರ ಸರ್ಕಾರ ಬೀಳುತ್ತದೆ ಎಂಬ ಸಂದೇಹ ನನಗಿದೆ. ಮೋದಿ ಬೀಳಿಸಲಿಕ್ಕೆ ಆರ್‌ಎಸ್‌ಎಸ್‌ನವರಿಗೆ ಪವರ್ ಇಲ್ವಾ? ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ 5 ವರ್ಷ ಅಧಿಕಾರ ನಡೆಸುತ್ತದೆ. ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ: ಸಂತ್ರಸ್ತೆ ಹೇಳಿಕೆ!
ಮಧ್ಯಮಗಳಿಂದ ಮುಡಾ ಹಗರಣ ವಿಚಾರದ ಬಗ್ಗೆ ಕೇಳಿದಾಗ ಸಚಿವ ಸಂತೋಷ್ ಲಾಡ್ ಮಾಧ್ಯಮದವರ ಮೇಲೆ ಗರಂ ಆದರು. ಹಗಲೆಲ್ಲಾ ಮುಡಾ ಬಗ್ಗೆ ಮಾತನಾಡೋಕೆ ಮುಡಾದಲ್ಲಿ ಏನಿದೆ..? ಮಾತು ಎತ್ತಿದರೆ ಬರೀ ಮುಡಾ, ಮುಡಾ ಅಂತಾರೆ. ಮುಡಾ ಹಗರಣದಲ್ಲಿ ಏನಾದ್ರೂ ದಾಖಲಾತಿ ಇದೆಯೇ ಎಂದು ಸಚಿವ ಲಾಡ್ ಪ್ರಶ್ನೆ ಮಾಡಿದರು. ಯಾರೋ ಒಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟರು. ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರು ಪ್ರಾಷಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ ಎನ್ನುವುದು ಜಗಜ್ಜಾಹಿರಾಗಿದೆ ಎಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟು ಹಂಚಿಕೆಯನ್ನು ಹಗರಣ, ಹಗರಣ ಎನ್ನುವುದಕ್ಕೆ ನಿಮ್ಮ ಬಳಿ ಏನಾದರೂ ದಾಖಲೆ ಇದೆಯಾ.? ಅದಕ್ಕೆ ಏನಾದ್ರೂ ದಾಖಲಾತಿ ಇದೆಯಾ, ಇದ್ದರೆ ಪ್ರೊಡ್ಯೂಸ್ ಮಾಡಿ. ದೇಶದಲ್ಲಿ ಬೇರೆ ಹಗರಣಗಳೇ ನಡೆದಿಲ್ಲವಾ? ರಫೇಲ್ ಡೀಲ್, ಎಲೆಕ್ಟ್ರಾಲ್ ಬಾಂಡ್, ಗುಜರಾತ್ ರೇಪ್ ಕೇಸ್ ಸೇರಿ ಹಲವು ಪ್ರಕರಣಗಳಾಗಿವೆ. ಅವುಗಳ ಬಗ್ಗೆ ಮಾತನಾಡುವುದೇ ಬೇಡ್ವಾ? ಎಲ್ಲ ವಿಚಾರಗಳನ್ನು ಮಾಧ್ಯಮದವರು ಪ್ರಶ್ನೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ 5 ರೂಪಾಯಿಗೆ ಊಟ: ಇದು ರಾಷ್ಟ್ರಕ್ಕೆ ಮಾದರಿ ಎಂದ ಸಚಿವ ಲಾಡ್
ಜಾತಿ ಜನಗಣತಿ ಜಾರಿಗೆ ಸ್ವಪಕ್ಷದ ಶಾಸಕರು, ಸಚಿವರು ವಿರೋಧ ವಿಚಾರದ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವ ಅಂದ್ಮೇಲೆ ಪರ ವಿರೋಧ ಇರಲೇಬೇಕು. ನಮ್ಮ ಪಕ್ಷದಲ್ಲೂ ಪರ-ವಿರೋಧ ಇರಬೇಕು, ವಿಪಕ್ಷದಲ್ಲೂ ಪರ-ವಿರೋಧ ಇರಬೇಕು. ಕೊನೆಗೆ ಸರ್ಕಾರದ ನಿಲುವು ನಮ್ಮ ನಿಲುವಾಗಿರುತ್ತದೆ. ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಹೇಳಿದರು.