ಹುಬ್ಬಳ್ಳಿ- ಧಾರವಾಡದ ಅವಳಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಹೊಸ ಆಹಾರದ ಜತೆಗೆ ದರ ಪಟ್ಟಿಯಲ್ಲೂ ಬದಲಾವಣೆಯಾಗಿದ್ದು, ಇನ್ಮುಂದೆ ಬರೀ ಐದು ರುಪಾಯಿಯಲ್ಲಿ ಉಪಾಹಾರ ಹಾಗೂ ಊಟ ಮಾಡಬಹುದು. 

ಧಾರವಾಡ (ಸೆ.13): ಹುಬ್ಬಳ್ಳಿ- ಧಾರವಾಡದ ಅವಳಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಹೊಸ ಆಹಾರದ ಜತೆಗೆ ದರ ಪಟ್ಟಿಯಲ್ಲೂ ಬದಲಾವಣೆಯಾಗಿದ್ದು, ಇನ್ಮುಂದೆ ಬರೀ ಐದು ರುಪಾಯಿಯಲ್ಲಿ ಉಪಾಹಾರ ಹಾಗೂ ಊಟ ಮಾಡಬಹುದು. ಬೆಳಗ್ಗೆ ನಗರದ ಮಿನಿವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‌ನಲ್ಲಿ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ ನೀಡಿದ ಸಚಿವ ಸಂತೋಷ ಲಾಡ್‌, ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರುಪಾಯಿಗೆ ಊಟ, ಉಪಾಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿ. 

ಜಿಲ್ಲೆಯ ಅವಳಿ ನಗರದಲ್ಲಿ ಒಂಭತ್ತು ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಂದರಲ್ಲಿ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಚಿವರು ಜೋಳದ ರೊಟ್ಟಿ ಊಟ ಸವಿದರು. ಡಿಸಿ ದಿವ್ಯ ಪ್ರಭು ಇಡ್ಲಿ, ಅವಲಕ್ಕಿ ಮತ್ತು ಶ್ಯಾವಿಗೆ ಸಿಹಿ ಸವಿದರು. ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ ಇದ್ದರು.

ನಾನೇನು ನಿಮ್ಮ ಶತ್ರುವೇ?: ನಾನೇನು ನಿಮ್ಮ ಶತ್ರುವೆ? ದಯಮಾಡಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿ... ಸಭೆಗೆ ಬರುವಾಗ ಹೋಂ ವರ್ಕ್‌ ಮಾಡಿಕೊಂಡು ಬನ್ನಿ..! ಇಲ್ಲಿಯ ಜಿಲ್ಲಾ ಪಂಚಾಯ್ತಿಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅಧಿಕಾರಿಗಳಿಗೆ ತೆಗೆದುಕೊಂಡ ಕ್ಲಾಸ್‌ ಇದು. ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆದ್ಯತೆ ಮೇಲೆ ಕೆಡಿಪಿ ಸಭೆಯಲ್ಲಿ ಚರ್ಚೆ ಆಗಬೇಕು. ಆದರೆ, ಅಧಿಕಾರಿಗಳು ಸಭೆಗೆ ಅಪೂರ್ಣ ಮಾಹಿತಿ ತಂದರೆ, ಸಭೆಯ ಉದ್ದೇಶ ಈಡೇರುವುದಿಲ್ಲ. ಅಧಿಕಾರಿಗಳು ಸಭೆಗೂ ಮುಂಚೆ ಹೋಂ ವರ್ಕ್ ಮಾಡಿಕೊಂಡು ಜವಾಬ್ದಾರಿಯಿಂದ ಬರಬೇಕು ಎಂದರು.

ಲಂಗೋಟಿ ಕಟ್ಕೊಂಡು ಅಂಡರ್‌ವೇರ್‌ಗಾಗಿ ಓಡೋ ಪಾತ್ರ 'ಲಂಗೋಟಿಮ್ಯಾನ್‌': ಸೆ.20ರಂದು ರಿಲೀಸ್

ಸರ್ಕಾರದ ಪ್ರಮುಖ ಇಲಾಖೆಗಳಾದ ಕೃಷಿ, ಮಾರುಕಟ್ಟೆ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ, ನೀರಾವರಿ ಇಲಾಖೆಗಳ ಅಧಿಕಾರಿಗಳು ವಾಸ್ತವಿಕ ವರದಿ ನೀಡುವುದರಿಂದ ಅಗತ್ಯ ಕ್ರಮಕೈಗೊಳ್ಳಲು ಸಹಾಯವಾಗುತ್ತದೆ ಎಂದ ಅವರು, ಲೋಕೋಪಯೋಗಿ, ನೀರಾವರಿ ಮತ್ತು ಇತರ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಹಾಜರಾತಿ ಖಾತರಿಗೆ ಪೇಸ್ ರೀಡಿಂಗ್ ಆನ್‌ಲೈನ್ ಅಟೆಂಡೆನ್ಸ್ ಮಾಡಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಯಿಂದ ಜಲಜೀವನ ಮಿಷನ್ ಯೋಜನೆ ತೃಪ್ತಿಕರವಾಗಿಲ್ಲ. ನಿಗದಿತ ಅವಧಿಯಲ್ಲಿ ಯೋಜನೆ ಮುಗಿಸದಿದ್ದರೆ ಮತ್ತು ಪ್ರತಿ ಹಂತದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.