Asianet Suvarna News Asianet Suvarna News

ಆರ್‌ಎಸ್‌ಎಸ್‌ನ ಹಿತೈಷಿಗಳು ಮತ ನೀಡುವ ವಿಶ್ವಾಸ: ಲಕ್ಷ್ಮಣ ಸವದಿ

ಕಾಂಗ್ರೆಸ್‌ ಪಕ್ಷ ಇನ್ನಷ್ಟು ಸಂಘಟಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭರವಸೆ

RSS Well Wishers Confident to Vote Says Laxman Savadi grg
Author
First Published Apr 19, 2023, 10:30 PM IST

ಅಥಣಿ(ಏ.19):  ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿಯೂ ಕೂಡ ನನ್ನ ಹಿತೈಷಿಗಳಿದ್ದಾರೆ. ಅವರು ಕೂಡ ನನಗೆ ಮತಗಳನ್ನು ನೀಡಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ ಎಂದು ಮಾಜಿ ಡಿಸಿಎಂ, ಅಥಣಿ ಮತಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು.

ತಮ್ಮ ಬೆಂಬಲಿಗರು ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರೊಂದಿಗೆ ಮಂಗಳವಾರ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಅನೇಕ ಮುಖಂಡರು ಮತ್ತು ನನ್ನ ಅಭಿಮಾನಿ ಕಾರ್ಯಕರ್ತರು ನನ್ನ ಜೊತೆಗೆ ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದಾರೆ. ಅದರ ಜೊತೆಗೆ ಮೂಲ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರ ಮುಂದಾಳತ್ವದಲ್ಲಿಯೇ ಈ ಚುನಾವಣೆಯನ್ನು ನಾವು ಎದುರಿಸುತ್ತಿದ್ದೇವೆ. ವಿರೋಧ ಪಕ್ಷವನ್ನು, ಯಾವ ರಾಜಕೀಯ ಮುಖಂಡರನ್ನು ನಾವು ಟೀಕಿಸಲು ಹೋಗುವುದಿಲ್ಲ. ನಮ್ಮ ನಮ್ಮ ಗುರಿ ಏನಿದ್ದರೂ ಕಾಂಗ್ರೆಸ್‌ ಪಕ್ಷವನ್ನು ಇನ್ನಷ್ಟುಸಂಘಟಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

'ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್‌ಗೆ 150ಕ್ಕೂ ಹೆಚ್ಚು ಸ್ಥಾನ'

ಅಥಣಿ ಮತಕ್ಷೇತ್ರದ ನಮ್ಮ ಬೆಂಬಲಿಗರಲ್ಲಿ ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಉತ್ಸಾಹ ಹೆಚ್ಚಾಗಿದ್ದು, 20 ವರ್ಷಗಳ ನಂತರ ಕಾಂಗ್ರೆಸ್‌ ಪಕ್ಷ ಇಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಬಹಳ ದೊಡ್ಡ ಅಂತರದಿಂದ ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. ಪಕ್ಷದ ವರಿಷ್ಠರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರು ನನ್ನ ಗೆಲುವಿನ ಪರವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ನನ್ನ ರಾಜಕೀಯ ಜೀವನದಲ್ಲಿ 6 ಬಾರಿ ನಾಮಪತ್ರ ಸಲ್ಲಿಸಿದ್ದೇನೆ. ಇಂದು ನಾನು ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಪ್ರಥಮ ಬಾರಿಗೆ ನಾಮಪತ್ರ ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನಸಾಗರ ಹರಿದು ಬಂದಿರುವುದು ನನಗೆ ಖುಷಿ ತಂದಿದೆ. ಕಾರ್ಯಕರ್ತರ ಉತ್ಸಾಹ ಮತ್ತು ಹುಮ್ಮಸ್ಸು ನೋಡಿದರೆ ಕಾಂಗ್ರೆಸ್‌ ಪಕ್ಷವನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ನನಗೆ ಮತ್ತೆ ಜನಸೇವೆ ಮಾಡಲು ಅವಕಾಶ ಒದಗಿಸಿ ಕೊಡುತ್ತಾರೆ ಎಂಬ ಆತ್ಮವಿಶ್ವಾಸ ಮೂಡಿದೆ.

ಅಥಣಿ ಮತದಾರರಲ್ಲಿ ಕೂಡ ಸ್ವಾಭಿಮಾನದ ಕಿಚ್ಚು ಹೆಚ್ಚಾಗಿದ್ದು, ಖಂಡಿತವಾಗಿಯೂ ಬದಲಾವಣೆ ಬಯಸಿದ್ದಾರೆ. ನನ್ನನ್ನ ಅತ್ಯಂತ ದೊಡ್ಡ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಅಥಣಿ ಮತಕ್ಷೇತ್ರದಲ್ಲಿ ಅಷ್ಟೇ ಅಲ್ಲ , ಜಿಲ್ಲೆಯ ಮತ್ತು ರಾಜ್ಯದಲ್ಲಿಯೂ ಕೂಡ ಕಾಂಗ್ರೆಸ್‌ ಪಕ್ಷದ ಪರವಾಗಿ ಜೋರಾಗಿದೆ. ಪಕ್ಷದ ನಾಯಕರು ನನಗೂ ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೋಗಿ ಪ್ರಚಾರ ನಡೆಸುವ ಮೂಲಕ 10-15 ಸ್ಥಾನಗಳನ್ನು ಗೆಲ್ಲಿಸುವಂತೆ ತಿಳಿಸಿದ್ದಾರೆ ಅಂತ ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. 

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿರುವ ಲಕ್ಷ್ಮಣ ಸವದಿ ಆಯ್ಕೆ ಖಚಿತ. ಏಕೆಂದರೆ ಕಳೆದ 20 ವರ್ಷಗಳಿಂದ ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ವಿರೋಧ ಪಕ್ಷದಲ್ಲಿತ್ತು. ಸವದಿ ಕಾಂಗ್ರೆಸ್‌ ಪಕ್ಷಕ್ಕೆ ಬರುವುದರಿಂದ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಮತ್ತಷ್ಟುಬಲ ಬಂದಂತಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಅನೇಕ ಜನ ಟಿಕೆಟ್‌ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದರು. ಟಿಕೆಟ್‌ ಕೈತಪ್ಪಿದ್ದಕ್ಕೆ ಸ್ವಲ್ಪ ಬೇಸರ ಎಲ್ಲರಿಗೂ ಇರುವುದು ಸಹಜ. ಆದರೆ, ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧವಾಗಿರಬೇಕಾಗುತ್ತದೆ. ನಮ್ಮ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್‌ ನೀಡಿದರೂ ಅವರನ್ನು ಗೆಲ್ಲಿಸುವ ಕರ್ತವ್ಯ ನಮ್ಮದು. ಈಗ ಸವದಿ ಅವರಿಗೆ ಟಿಕೆಟ್‌ ನೀಡಿರುವುದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೇವೆ ಅಂತ ಅಥಣಿ ಕಾಂಗ್ರೆಸ್‌ ಮುಖಂಡ ಸದಾಶಿವ ಬುಟಾಳಿ ಹೇಳಿದ್ದಾರೆ.

ಬೃಹತ್‌ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ ಮಾಜಿ ಡಿಸಿಎಂ ಸವದಿ

ಅಥಣಿ ಮತಕ್ಷೇತ್ರದ ವಿವಿಧ ಹಳ್ಳಿಗಳಿಂದ ಮತ್ತು ಅಥಣಿ ಪಟ್ಟಣದ ವಿವಿಧ ವಾರ್ಡ್‌ಗಳಿಂದ ಆಗಮಿಸಿದ ಅಭಿಮಾನಿ ಜನಸಾಗರದ ಮಧ್ಯೆ ತೆರೆದ ವಾಹನದಲ್ಲಿ ಬಿಳಿ ಬಣ್ಣದ ಉಡುಪುಗಳನ್ನು ತೊಟ್ಟು, ತಲೆಗೆ ಗಾಂಧಿ ಟೋಪಿ ಧರಿಸಿ, ಜನರತ್ತ ಕೈ ಮುಗಿಯುತ್ತ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ತಮ್ಮ ನಿವಾಸದಿಂದ ಬೃಹತ್‌ ಮೆರವಣಿಗೆ ಆರಂಭಿಸಿದರು. ಯುವಕರು ಬೈಕ್‌ ರಾರ‍ಯಲಿ ಮೂಲಕ ಸಾಥ್‌ ನೀಡಿದರು.

ಮೆರವಣಿಗೆಯಲ್ಲಿ ಕುದುರೆ ಕುಣಿತ, ಡೊಳ್ಳು ಕುಣಿತ ಕಲಾತಂಡಗಳ ಕಲಾವಿದರು ಭಾಗವಹಿಸಿದ್ದರು. ಲಕ್ಷ್ಮಣ ಸವದಿ ಅವರ ಮನೆಯಿಂದ ಆರಂಭವಾದ ಬೃಹತ್‌ ಮೆರವಣಿಗೆ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಮೂಲಕ ಹಾಯ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಸಮಾರೋಪಗೊಂಡಿತು. ದಾರಿಯುದ್ದಕ್ಕೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಲಕ್ಷ್ಮಣ ಸವದಿ ಪರ ಜಯ ಘೋಷಗಳನ್ನು ಕೂಗುತ್ತ ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಾಗರೋಪಾದಿಯಲ್ಲಿ ಹರಿದುಬಂದ ಜನಸಾಗರವನ್ನು ಕಂಡು ಕಾಂಗ್ರೆಸ್‌ ಅಭ್ಯರ್ಥಿ ಸವದಿ ಹಾಗೂ ಕಾಂಗ್ರೆಸ್‌ ಮುಖಂಡರು ಗೆಲುವಿನ ನಗೆ ಬೀರಿದರು.

ನಾಮಪತ್ರ ಸಲ್ಲಿಸಿದ ನಂತರ ನಂತರ ತಮ್ಮ ನಿವಾಸದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಣ ಸವದಿ ನನ್ನ ರಾಜಕೀಯ ಜೀವನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಗಮಿಸಿದ ಎಲ್ಲ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ತಲೆಬಾಗಿ ಕೈಮುಗಿದು ಅಭಿನಂದಿಸುತ್ತೇನೆ. ನಿಮ್ಮಲ್ಲಿರುವ ಉತ್ಸಾಹ,ಹುಮ್ಮಸ್ಸು ಚುನಾವಣೆ ಎದುರಿಸುವವರಿಗೆ ಹೀಗೆ ಇರಬೇಕು. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿಯಿಂದ ಬಹಳಷ್ಟುಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸ ನನಗೂ ಕೂಡ ಮೂಡಿದೆ. ಅಥಣಿ ಮತಕ್ಷೇತ್ರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನ ಹೆಚ್ಚಿಗೆ ಗೆಲ್ಲಿಸುವ ನಿಟ್ಟಿನಲ್ಲಿ ಪ್ರಚಾರಕ್ಕೆ ನಾನು ತೆರಳುತ್ತೇನೆ. ನಂತರ ನಾನು ಫೋನ್‌ ಮಾಡಿ ಎಲ್ಲ ಹಳ್ಳಿಗಳಿಗೆ ಬರುತ್ತೇನೆ. ಅಲ್ಲಿಯವರೆಗೆ ನೀವೆಲ್ಲರೂ ನೀವೇ ಲಕ್ಷ್ಮಣ ಸವದಿ ಎಂದು ತಿಳಿದು ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಾನು ಕೂಡ ನಾಮಪತ್ರ ಹಿಂಪಡೆಯುವ ದಿನ ಮುಗಿದ ಬಳಿಕ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುವ ಪ್ರವಾಸ ಪಟ್ಟಿಸಿದ್ಧಪಡಿಸಿದ ನಂತರ ತಮ್ಮ ಭೇಟಿಗೆ ಬರುತ್ತೇನೆ. ನೀವೆಲ್ಲರೂ ಅಲ್ಲಿಯವರೆಗೆ ಮತದಾರರ ಮನವೊಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮತಗಳು ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬೇಸಿಗೆಯ ಈ ಸುಡುಬಿಸಿಲಿನಲ್ಲಿ ನಾಮಪತ್ರ ಸಲ್ಲಿಸಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ತಮ್ಮೆಲ್ಲರಿಗೂ ಮತ್ತೊಮ್ಮೆ ಅನಂತ ಅನಂತ ಧನ್ಯವಾದಗಳು ತಿಳಿಸುತ್ತೇನೆ. ತಾವೆಲ್ಲರೂ ಶಾಂತಿಯುತವಾಗಿ, ಸುರಕ್ಷಿತವಾಗಿ ತಮ್ಮ ಗ್ರಾಮಗಳತ್ತ ತೆರಳಬೇಕು ಎಂದು ಮನವಿ ಮಾಡಿದರು.

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಭೂಟಾಳಿ, ಧರೇಪ್ಪ ಠಕ್ಕಣ್ಣವರ, ಸುನಿಲ ಸಂಕ, ಸಿದ್ದಾರ್ಥ ಶಿಂಗೆ, ಶಿವಾನಂದ ಗುಡ್ಡಾಪುರ, ಶ್ರೀಕಾಂತ ಪೂಜಾರಿ, ಅಸ್ಲಂ ನಾಲಬಂದ, ಅನಿಲ ಸುಣದೋಳಿ ಸೇರಿದಂತೆ ಅನೇಕ ಕಾಂಗ್ರೆಸ್‌ ಮುಖಂಡರ ಜೊತೆಗೆ ತಹಸೀಲ್ದಾರ್‌ ಕಾರ್ಯಾಲಯ, ಮಿನಿ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿ ಲಕ್ಷ್ಮಣ ಸವದಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಬೆಳಗಾವಿಯ 18 ಕ್ಷೇತ್ರಗಳಲ್ಲಿ 6 ರಿಂದ 8 ಸ್ಥಾನ ಜೆಡಿಎಸ್‌ಗೆ: ಕುಮಾರಸ್ವಾಮಿ

ಬೆಳಗ್ಗೆ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಸುಕ್ಷೇತ್ರ ಗಚ್ಚಿನಮಠದಲ್ಲಿ ಮಹಾತಪಸ್ವಿ ಮುರುNೕಂದ್ರ ಶಿವಯೋಗಿಗಳ ಮತ್ತು ಮೌನಯೋಗಿ ಮರುಳ ಶಂಕರ ದೇವರು ಅವರ ಗದ್ದುಗೆಗೆ, ಅಥಣಿಯ ಆರಾಧ್ಯ ದೈವ ಸಿದ್ದೇಶ್ವರ ದೇವಸ್ಥಾನದಲ್ಲಿ ಮತ್ತು ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ನಂತರ ಅವರ ಮನೆಯ ಹತ್ತಿರ ಕಾಂಗ್ರೆಸ್‌ ಪಕ್ಷದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಕಾಯುತ್ತಿದ್ದರು. ತೆರೆದ ವಾಹನದಲ್ಲಿ ತಮ್ಮ ಬೆಂಬಲಿಗರನ್ನು ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಕರೆದುಕೊಂಡು ಕಾರ್ಯಕರ್ತರ ಕೈಕುಲುಕಿ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಅಭಿಮಾನಿ ಕಾರ್ಯಕರ್ತರಿಗೆ ಕೈಮುಗಿದು ಮೆರವಣಿಗೆ ಆರಂಭಿಸಿದರು. ಮೆರವಣಿಗೆಯಲ್ಲಿ ಕಾರ್ಯಕರ್ತರ ಗೆಲುವಿನ ಉತ್ಸಾಹದಿಂದ ಜಯ ಘೋಷಣೆ ಕೂಗುತ್ತಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios