Mysuru: ನಾನೂ ರೌಡಿ ನನಗೆ ಬಿಜೆಪಿಯಲ್ಲಿ ಸ್ಥಾನ ಕೊಡಿ- ಕೋರ್ಟ್ ಬಳಿ ರೌಡಿಶೀಟರ್ ಪ್ರತಿಭಟನೆ

ಮೈಸೂರು ಜಿಲ್ಲಾ ನ್ಯಾಯಾಲಯದ ಮುಂದೆ ರೌಡಿಯೊಬ್ಬನ ವಿಚಿತ್ರ ಪ್ರತಿಭಟನೆ
ತನ್ನನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ರೌಡಿ ಪಾನಿಪುರಿ ಮಂಜನಿಂದ ಆಗ್ರಹ
ಪ್ರತಿಭಟನಾ ನಿರತ ರೌಡಿಯನ್ನು ವಶಕ್ಕೆ ಪಡೆದ ಪೊಲೀಸರು
 

Rowdy sheeters protest near Mysore court demanding BJP inclusion

ಮೈಸೂರು (ಡಿ.3): ರಾಜ್ಯ ರಾಜಕಾರಣದಲ್ಲಿ ರೌಡಿಶೀಟರ್‍‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳಿಂದ ಭಾರಿ ವಾದ ವಿವಾದ ನಡೆಯುತ್ತಿದೆ. ಆದರೆ, ಮೈಸೂರಿನಲ್ಲಿ ರೌಡಿಶೀಟರ್ ಒಬ್ಬ ಜಿಲ್ಲಾ ನ್ಯಾಯಾಲಯದ ಮುಂದೆ ಬಿಜೆಪಿ ಪಕ್ಷದಲ್ಲಿ ಸ್ಥಾನ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಅಚ್ಚರಿಯ ಘಟನೆ ನಡೆದಿದೆ.

ಬಿಜೆಪಿ ಪಕ್ಷಕ್ಕೆ ಮಂಡ್ಯ ಜಿಲ್ಲೆಯ ನಾಗಮಂಗಲದ ಫೈಟರ್‍‌ ರವಿ ಬಿಜೆಪಿ ಸೇರ್ಪಡೆಯ ಬೆನ್ನಲ್ಲೇ ಭಾರಿ ವಿವಾದ ಸೃಷ್ಟಿಯಾಗಿದೆ. ಜೊತೆಗೆ, ರಾಜಧಾನಿಯ ಚಾಮರಾಜಪೇಟೆಯಲ್ಲಿ ರೌಡಿಶೀಟರ್ ಸೈಲೆಂಟ್‌ ರವಿ ಅಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸಂಸದರಾದ ತೇಜಸ್ವಿಸೂರ್ಯ ಹಾಗೂ ಪಿ.ಸಿ. ಮೋಹನ್‌ ಅವರು ಭಾಗಿಯಾಗಿದ್ದರು. ಅಂದಿನಿಂದ ಆರಂಭವಾದ ರೌಡಿಶೀಟರ್‍‌ಗಳ ಪಕ್ಷ ಸೇರ್ಪಡೆ ವಿಚಾರ ಈವರೆಗೂ ಮುಕ್ತಾಯಗೊಳ್ಳುತ್ತಿಲ್ಲ. ಆದರೆ, ಈಗ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರೌಡಿಶೀಟರ್‍‌ ಒಬ್ಬ ತನಗೂ ಬಿಜೆಪಿ ಪಕ್ಷ ಸೇರ್ಪಡೆ ಮಾಡಿಕೊಂಡು ಸ್ಥಾನಮಾನ ನೀಡುವಂತೆ ಆಗ್ರಹಿಸಿ ವಿಲಕ್ಷಣ ಪ್ರತಿಭಟನೆ ಮಾಡಿದ್ದಾನೆ.

ರೌಡಿಶೀಟರ್‌ಗೆ ಸಿಕ್ತು ಆನೇಕಲ್ ಪುರಸಭೆ ಸದಸ್ಯ ಪಟ್ಟ...

ರೌಡಿಶೀಟರ್ ವಿವರವೇನು? : ಮೈಸೂರಿನ ನ್ಯಾಯಾಲಯದ ಮುಂದೆ ಗಾಂಧಿ ಪ್ರತಿಮೆ ಬಳಿ ಏಕಾಂಗಿ ಪ್ರತಿಭಟನೆ ಮಾಡುತ್ತಿರುವ ರೌಡಿಶೀಟರ್‍‌ ಮಂಜು ಅಲಿಯಾಸ್ 'ಪಾನಿಪುರಿ ಮಂಜು' ಆಗಿದ್ದಾನೆ. ನಾನೂ ರೌಡಿ, ನಿಮ್ಮ ಪಕ್ಷದಲ್ಲಿ ನನಗೂ ಸ್ಥಾನ ಕೊಡುವಿರಾ? ಎಂದು ಬಿಜೆಪಿ ವಿರುದ್ಧ ಪ್ರೊಟೆಸ್ಟ್ ಮಾಡಿದ್ದಾನೆ. ಕೂಡಲೇ ಕೆಆರ್.ಠಾಣೆ ಪೊಲೀಸ್‌ ಅಧಿಕಾರಿಗಳು ರೌಡಿಶೀಟರ್ ಪಾನಿಪುರಿ ಮಂಜನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ರೌಡಿಶೀಟರ್ ಮಂಜು ಮೈಸೂರಿನ ಗಣೇಶ್ ನಗರ ನಿವಾಸಿಯಾಗಿದ್ದಾನೆ. 2013ರಲ್ಲಿ 307ಕೇಸ್‌ನಲ್ಲಿ ಜೈಲು ವಾಸ ಅನುಭವಿಸಿದ್ದಾನೆ. ಹೀಗಾಗಿ, ಅವನ ವಿರುದ್ಧ ಉದಯಗಿರಿ ಪೊಲೀಸರು 2013ರಲ್ಲಿ ರೌಡಿ ಶೀಟರ್ ತೆರೆದಿದ್ದರು. ಹೆಚ್ಚಿನ‌ ವಿಚಾರಣೆಗಾಗಿ ಉದಯಗಿರಿ ಪೊಲೀಸರಿಗೆ ರೌಡಿಶೀಟರ್‍‌ನನ್ನು ಹಸ್ತಾಂತರ ಮಾಡಲಾಗಿದೆ. ಆದರೆ, ಈವರೆಗೆ ಯಾವುದಾದರೂ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾನೆಯೇ ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ.

ನಾನು ರೌಡಿಶೀಟರ್ ಪಟ್ಟಿಯಲ್ಲಿಲ್ಲ: ಮಂಡ್ಯದ ಸಂಸದೆ ಸುಮಲತಾ ಅಂಬರೀಶ್‌ ಆಪ್ತ ಇಂಡುವಾಳು ಸಚ್ಚಿದಾನಂದ ಅವರು ಬಿಜೆಪಿ ಸೇರ್ಪಡೆಯ ವೇಳೆಯಲ್ಲಿ ನಾಗಮಂಗಲದಿಂದ ಆಗಮಿಸಿದ್ದ ಫೈಟರ್‍‌ ರವಿ ಕೂಡ ಬಿಜೆಪಿ ಬಾವುಟ ಸ್ವೀಕರಿಸಿ ಪಕ್ಷ ಸೇರ್ಪಡೆ ಆಗಿದ್ದನು. ಆದರೆ, ಈ ಬಗ್ಗೆ ವಿವಾದ ಸೃಷ್ಟಿ ಆಗುತ್ತಿದ್ದಂತೆ ನಾಗಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಯಾವುದೇ ಕೊಲೆ, ದರೋಡೆ, ಸುಲಿಗೆ ಮಾಡಿಲ್ಲ. ನಾನು ಕ್ರಿಕೆಟ್‌ ಬೆಟ್ಟಿಂಗ್‌ ಆಡಿದ ಪ್ರಕರಣಕ್ಕೆ ಕೇಸ್‌ ದಾಖಲಾಗಿತ್ತು. ನನ್ನ ಹೆಸರು ಯಾವುದೇ ರೌಡಿಶೀಟರ್‍‌ ಪಟ್ಟಿಯಲ್ಲಿ ಇಲ್ಲ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ರೌಡಿ ಸುನೀಲನ ಬಿಜೆಪಿಗೆ ಸೇರಿಸಿಕೊಳ್ಳಲ್ಲ: ನಳಿನ್‌ಕುಮಾರ್‌ ಕಟೀಲ್‌

ರೌಡಿಶೀಟರ್ ಸೇರ್ಪಡೆ ಇಲ್ಲ: ರಾಜ್ಯದಲ್ಲಿ ರೌಡಿಶೀಟರ್‍‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಈಗಾಗಲೇ ರೌಡಿಶೀಟರ್‍‌ಗಳ ಸೇರ್ಪಡೆ ವಿಚಾರದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಲೀನ್‌ ಕುಮಾರ್‍‌ ಅವರು ಸ್ಪಷ್ಟನೆ ನೀಡಿದ್ದು, ಫೈಟರ್‍‌ ರವಿ ಬಗ್ಗೆ ಅವರೇ ಮಾತನಾಡಲಿದ್ದಾರೆ. ಯಾವುದೇ ವಿವಾದ ಇಲ್ಲದಿದ್ದರೂ ಕಾಂಗ್ರೆಸ್‌ ನಾಯಕರು ವಿವಾದ ಮಾಡುತ್ತಿದ್ದಾರೆ. ಅವರಿಗೆ ನಮ್ಮ ವಿರುದ್ಧ ಮಾತನಾಡಲು ಯಾವುದೇ ಅಜೆಂಡಾ ಸಿಗುತ್ತಿಲ್ಲ. ಹಾಗಾಗಿ ಧಮ್‌ ಇಲ್ಲದ ಆರೋಪ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಹೋದ ಕಡೆಯೆಲ್ಲ ಕಾಂಗ್ರೆಸ್ ಸೋಲುತ್ತಿದೆ. ಚಾಮರಾಜನಗರಕ್ಕೆ ರಾಹುಲ್ ಬಂದು ಹೋದಮೇಲೆ ಅಲ್ಲಿನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಇನ್ನು ಬಿಜೆಪಿ ಜನಸಂಕಲ್ಪ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು, ಲಕ್ಷ ಲಕ್ಷ ಜನ ಭಾಗವಹಿಸುತ್ತಿದ್ದಾರೆ. ಇಲ್ಲಿನ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜನರು ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು.

Latest Videos
Follow Us:
Download App:
  • android
  • ios