2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೇ ಮೊದಲ ಗುರಿ. ಇದು ಇಂದು ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಮಹಾ ಮೈತ್ರಿ ಸಭೆಯಲ್ಲಿ ನಿರ್ಧರಿಸಿದ ಅಜೆಂಡಾ. ಈ ಮೈತ್ರಿ ಸಭೆ ಅಂತ್ಯಗೊಂಡಿದೆ. ಸಭೆಯಲ್ಲಿ ಚರ್ಚಿಸಿದ ಮಹತ್ವದ ವಿಷಗಳು ಇಲ್ಲಿವೆ.

ಪಾಟ್ನಾ(ಜೂ.23) ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸೋಲಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿತ್ತು. ಎನ್‌ಡಿಎ ವಿರೋಧಿ ಕೂಟದ ಪಕ್ಷಗಳಾದ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಆದರೆ ಬಿಜೆಪಿ ಬಿರುಗಾಳಿಗೆ ಧೂಳೀಪಟವಾಗಿತ್ತು. ಹೀಗಾಗಿ ಈ ಬಾರಿ ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿ ಸೋಲಿಸಲು ನಿರ್ಧರಿಸಿದೆ. ಇದಕ್ಕಾಗಿ ವಿಪಕ್ಷಗಳು ಬಿಹಾರದ ಪಾಟ್ನಾದಲ್ಲಿ ಬೃಹತ್ ಮೈತ್ರಿ ಸಭೆ ನಡೆಸಿದೆ. ಬೆಳಗ್ಗೆ 11.30ಕ್ಕೆ ಆರಂಭಗೊಂಡ ವಿಪಕ್ಷಗಳ ಸಭೆ ಇದೀಗ ಅಂತ್ಯಗೊಂಡಿದೆ. ಈ ಸಭೆಯ ಒನ್ ಲೈನ್ ಅಜೆಂಡಾ , 2024ರಲ್ಲಿ ಬಿಜೆಪಿ ಸೋಲಿಸುವುದು. 

ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಎನ್‌ಸಿಪಿ, ಟಿಎಂಸಿ, ಶಿವಸೇನೆ, ಆರ್‌ಜೆಡಿ, ಜೆಡಿಯು ಸೇರಿದಂತೆ 20 ವಿಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿತ್ತು. 2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಪ್ರಮುಖವಾಗಿ 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಅಧಿಕಾರಕ್ಕೇರುವುದೇ ಮೊದಲ ಗುರಿ ಎಂಬ ಅಜೆಂಡಾ ಫಿಕ್ಸ್ ಮಾಡಲಾಗಿದೆ.

ನನ್ನ ಮಾತು ಕೇಳಿದ್ರೆ ಮದ್ವೆಯಾಗುತಿತ್ತು, ಕಾಲ ಇನ್ನೂ ಮಿಂಚಿಲ್ಲ; ಲಾಲು ಮಾತಿಗೆ ನಾಚಿ ನೀರಾದ ರಾಹುಲ್!

ಈ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ಹಲವು ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿದೆ. ಹಲವು ರಾಜ್ಯಗಳಲ್ಲಿ ವಿಪಕ್ಷಗಳೇ ಎದುರು ಬದುರಾಗಿದೆ. ಹೀಗಾಗಿ ವೈಮನಸ್ಸು, ಭಿನ್ನಾಭಿಪ್ರಾಯ ಬದಿಗಿಟ್ಟು, ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆ ಎದುರಿಸಬೇಕು ಎಂದು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರ ಜೊತೆಗೆ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಿದರೆ 2024ರ ಚುನಾವಣೆಯಲ್ಲಿ ಗೆಲುವು ಕಷ್ಟವಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವವಹಿಸಿ ಆರಂಭಿಸಿದ ಈ ಮೈತ್ರಿ ಇದೀಗ ಮೊದಲ ಸಭೆಯೊಂದಿಗೆ ಅದ್ಧೂರಿ ಆರಂಭ ಪಡೆದಿದೆ. ಬಿಹಾರದಲ್ಲಿ ಆಯೋಜಿಸಿದ ವಿಪಕ್ಷಗಳ ಮೈತ್ರಿಯ ಮಹತ್ವದ ಸಭೆ ಅಂತ್ಯಗೊಂಡಿದೆ. ಜುಲೈ ತಿಂಗಳಲ್ಲಿ ಶಿಮ್ಲಾದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ಇಂದಿನ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ.

ವಿಪಕ್ಷ ಸಭೆ ಬೆನ್ನಲ್ಲೇ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟ ಆಮ್ ಆದ್ಮಿ!

ಸಭೆ ಬಳಿಕ ಹಲವು ನಾಯಕರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇವತ್ತಿನ ಸಭೆ ಬಹಳ ಪರಿಣಾಮಕಾರಿಯಾಗಿದ್ದು, ಉತ್ತಮವಾದ ಚರ್ಚೆ ಆಗಿದೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ 2024 ರ ಲೋಕಸಭಾ ಚುನಾವಣೆ ಎದುರಿಸಬೇಕು ಎಂದು ನಿರ್ಧಾರ ಮಾಡಲಾಗಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ನಮ್ಮ ಅಜೆಂಡಾ ಸೆಟ್ ಮಾಡಲಿದ್ದೇವೆ. ಜುಲೈ ನಲ್ಲಿ ಮತ್ತೊಂದು ಸಭೆ ಆಯೋಜನೆ ಮಾಡಲಾಗಿದ್ದು, ಶಿಮ್ಲದಲ್ಲಿ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಒಗ್ಗಟ್ಟಿನಿಂದ 2024ರ ಚುನಾವಣೆ ಎದುರಿಸಲಿದ್ದೇವೆ. ಬಿಹಾರದಿಂದ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಬಿಜೆಪಿ ಇತಿಹಾಸವನ್ನ ಅಳಿಸಲು ಹೊರಟಿದೆ, ಆದ್ರೆ ನಾವು ಇತಿಹಾಸವನ್ನ ಉಳಿಸಲು ತೀರ್ಮಾನಿಸಿದ್ದೇವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.