ರೋಡ್‌ ಶೋ ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್‌, ಗೋವಿಂದರಾಜ ನಗರ, ರಾಜಾಜಿನಗರ ಹಾಗೂ ವಿಜಯನಗರ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪ್ರಧಾನ ಮಂತ್ರಿಗಳ ರೋಡ್‌ ಶೋಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಲು ಆ ಕ್ಷೇತ್ರಗಳ ಹುರಿಯಾಳುಗಳು ಅಣಿಯಾಗಿದ್ದಾರೆ. ಅಲ್ಲದೆ ಈ ಏಳು ಕ್ಷೇತ್ರಗಳ ಪೈಕಿ ಮೂವರು ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದ ಹಾಲಿ ಮೂವರು ‘ವಲಸೆ’ ಸಚಿವರು ಪ್ರತಿನಿಧಿಸುತ್ತಿದ್ದಾರೆ.

ಬೆಂಗಳೂರು(ಏ.29): ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಕೇಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶನಿವಾರ ನಡೆಸಲಿರುವ ರೋಡ್‌ ಶೋಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಬಲ ಪ್ರದರ್ಶನ ನಡೆಸಲು ಬೆಂಗಳೂರು ಬಿಜೆಪಿ ಘಟಕದ ನಾಯಕರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ನಗರದ ಮಾಗಡಿ ರಸ್ತೆಯ ನೈಸ್‌ ರೋಡ್‌ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ (5.3 ಕಿಮೀ) ಪ್ರಧಾನ ಮಂತ್ರಿಗಳು ಶನಿವಾರ ಸಂಜೆ ರೋಡ್‌ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಈ ವೇಳೆ ರಸ್ತೆಯ ಎರಡು ಬದಿಯಲ್ಲಿ ಅಸಂಖ್ಯಾತ ಜನರನ್ನು ಒಗ್ಗೂಡಿಸಿ ಪ್ರಧಾನಿಯ ರೋಡ್‌ ಶೋ ಯಶಸ್ವಿಗೊಳಿಸಲು ಬಿಜೆಪಿ ನಿರ್ಧರಿಸಿದೆ.

ಏ.30ಕ್ಕೆ ಕೋಲಾರ, ಚನ್ನಪಟ್ಟಣ, ಮೈಸೂರಲ್ಲಿ ಪ್ರಧಾನಿ ಮೋದಿ ಸಮಾವೇಶ: ಬೃಹತ್‌ ರೋಡ್‌ ಶೋ

ಈ ರೋಡ್‌ ಶೋ ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್‌, ಗೋವಿಂದರಾಜ ನಗರ, ರಾಜಾಜಿನಗರ ಹಾಗೂ ವಿಜಯನಗರ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪ್ರಧಾನ ಮಂತ್ರಿಗಳ ರೋಡ್‌ ಶೋಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಲು ಆ ಕ್ಷೇತ್ರಗಳ ಹುರಿಯಾಳುಗಳು ಅಣಿಯಾಗಿದ್ದಾರೆ. ಅಲ್ಲದೆ ಈ ಏಳು ಕ್ಷೇತ್ರಗಳ ಪೈಕಿ ಮೂವರು ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದ ಹಾಲಿ ಮೂವರು ‘ವಲಸೆ’ ಸಚಿವರು ಪ್ರತಿನಿಧಿಸುತ್ತಿದ್ದಾರೆ.

ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಸವಾಲು ಸ್ವೀಕರಿಸಿರುವ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಹಾಗೂ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು, ಶುಕ್ರವಾರ ರೋಡ್‌ ಶೋ ಪೂರ್ವಸಿದ್ಧತೆ ಪರಿಶೀಲಿಸಿದರು. ನಮ್ಮ ಕ್ಷೇತ್ರದಲ್ಲಿ ಮೋದಿ ಪ್ರಚಾರ ನಡೆಸಿದರೆ ಸಾಕು ನಮಗೆ ಬೇರೆಯವರ ಪ್ರಚಾರ ಬೇಡವೇ ಬೇಡ ಎಂದು ಸಚಿವರು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಸೋಮಶೇಖರ್‌ ಅವರು, ನನ್ನ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್‌ ಶೋ ಸಂಚರಿಸಲಿದೆ. ಇನ್ನು ಪ್ರಧಾನಮಂತ್ರಿಗಳನ್ನು ಹತ್ತಿರದಿಂದ ನೋಡಬೇಕು ಎಂದು ಕ್ಷೇತ್ರದ ಜನ ಕಾಯುತ್ತಿದ್ದಾರೆ. ಮೋದಿಯವರಿಗೆ ನಾವು ಹೂವು ಹಾಕಬೇಕು ನಾವು ಬರುತ್ತೇವೆ ಎಂದು ಸ್ವಯಂಪ್ರೇರಿತರಾಗಿ ಜನರೇ ಕೇಳುತ್ತಿದ್ದಾರೆ ಎಂದರು.

ಈ ಹಿಂದೆ ಕೂಡಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿಗಳು ಬಂದಿದ್ದರು. ಆದರೆ ಬಹಳ ಜನರಿಗೆ ನೋಡಲು ಸಾಧ್ಯವಾಗಲಿಲ್ಲ. ಆದರೆ ಈ ರೋಡ್‌ ಶೋ ನಲ್ಲಿ ಪ್ರಧಾನ ಮಂತ್ರಿಗಳನ್ನು ಹತ್ತಿರದಿಂದ ನೋಡಬಹುದು ಎಂದು ಜನರು ಕಾತುರದಿಂದ ಕಾಯುತ್ತಿದ್ದಾರೆ. ಪ್ರಧಾನಿಗಳ ಸ್ವಾಗತಕ್ಕೆ ನಮ್ಮ ಕ್ಷೇತ್ರದ ಜನ ಬಹಳ ಉತ್ಸುಕರಾಗಿದ್ದಾರೆ. ಅದರಲ್ಲೂ ಮೊದಲ ಬಾರಿಗೆ ಮತ ಚಲಾಯಿಸುವ ಯುವ ಸಮೂಹವೇ ಹೆಚ್ಚಿನ ಅಭಿಲಾಷೆ ಹೊಂದಿದ್ದಾರೆ ಎಂದು ಸಚಿವರು ತಿಳಿಸಿದರು.

ಬುಲೆಟ್‌ ಪ್ರೋಫ್‌ ವಾಹನ

ಪ್ರಧಾನಿಗಳ ರೋಡ್‌ ಶೋಗೆ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸ್ಪೆಷಲ್‌ ಬುಲೆಟ್‌ ಪ್ರೋಫ್‌ ವಾಹನವನ್ನು ಬಿಜೆಪಿ ಪಕ್ಷ ಸಿದ್ದಪಡಿಸಿದೆ. ರೋಡ್‌ ಶೋಗಾಗಿ ಟಾಟಾ 709 ವಾಹನವನ್ನು ದೆಹಲಿಯಲ್ಲೇ ಸಿದ್ದಪಡಿಸಲಾಗಿದೆ. ಬೆಂಗಳೂರಿಗೆ ಏರ್‌ ಲಿಫ್ಟ್‌ ಮೂಲಕ ಆ ವಾಹನವನ್ನು ತರಿಸಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

3 ಸಾವಿರ ಪೊಲೀಸರ ಭದ್ರತೆ

ಮೋದಿ ಅವರ ರೋಡ್‌ ಶೋ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಸುಮಾರು 3 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ರೋಡ್‌ ಶೋ ಬಂದೋಬಸ್ತ್‌ನಲ್ಲಿ ಇಬ್ಬರು ಹೆಚ್ಚುವರಿ ಆಯುಕ್ತರು, 6 ಡಿಸಿಪಿ, 18 ಎಸಿಪಿ, 120 ಇನ್ಸ್‌ಪೆಕ್ಟರ್‌, 250 ಸಬ್‌ ಇನ್ಸ್‌ಪೆಕ್ಟರ್‌, 2600 ಪೊಲೀಸರು ಹಾಗೂ ರಾಜ್ಯ ಮತ್ತು ಕೇಂದ್ರ ಭದ್ರತಾ ಪಡೆಗಳ ತುಕಡಿಗಳ ಪಾಲ್ಗೊಳ್ಳಲಿವೆ. ರಸ್ತೆಯ ಉದ್ದಗಲಕ್ಕೂ ಪ್ರತಿ 5 ಮೀಟರ್‌ಗೊಬ್ಬರಂತೆ ಖಾಕಿಧಾರಿ ಇರಲಿದ್ದಾರೆ.

ರೋಡ್‌ ಶೋ ರಸ್ತೆ ಅಂಗಡಿಗಳು ಬಂದ್‌

ಇನ್ನು ಪ್ರಧಾನ ಮಂತ್ರಿಗಳ ರೋಡ್‌ ಶೋ ಹಿನ್ನಲೆಯಲ್ಲಿ ಸುಮನಹಳ್ಳಿ-ನೈಸ್‌ ರಸ್ತೆ ಜಂಕ್ಷನ್‌ವರೆಗೆ ಮಾಗಡಿ ರಸ್ತೆಯಲ್ಲಿ ವ್ಯಾಪಾರ ವಹಿವಾಟಿಗೆ ಶನಿವಾರ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಮಧ್ಯಾಹ್ನ 2 ಗಂಟೆ ಬಳಿಕ ಹೋಟೆಲ್‌, ಬಾರ್‌ಗಳು ಹಾಗೂ ಅಂಗಡಿಗಳ ಬಾಗಿಲು ಬಂದ್‌ ಮಾಡುವಂತೆ ವ್ಯಾಪಾರಿಗಳಿಗೆ ಪೊಲೀಸರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ರಸ್ತೆ ಸಂಚಾರ ಬದಲಾವಣೆ

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಹಿನ್ನಲೆಯಲ್ಲಿ ಶನಿವಾರ ಮಧ್ಯಾಹ್ನ 2 ರಿಂದ ರಾತ್ರಿ 7.30 ರವರೆಗೆ ನಗರದ ಕೆಲವು ಕಡೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವನಿಕರು ಸಹಚರಿಸುವಂತೆ ಸಂಚಾರ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.

ಮೋದಿ ದಾವಣಗೆರೆ ರೋಡ್ ಶೋ ವೇಳೆ ಭದ್ರತಾ ವೈಫಲ್ಯ, ಯುವಕನ ನಡೆಯಿಂದ ಆತಂಕಗೊಂಡ ಭದ್ರತಾ ಪಡೆ!

ರಸ್ತೆಗಳಿಗೆ ಪರ್ಯಾಯ ಮಾರ್ಗ ಬಳಸಿ:

ಹಳೇ ವಿಮಾನ ನಿಲ್ದಾಣ ರಸ್ತೆ, ಕಬ್ಬನ್‌ ರಸ್ತೆ, ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆ, ನೃಪತುಂಗ ರಸ್ತೆ, ಕೃಂಬಿಗಲ್‌ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್‌್ಸ ಲೇಔಟ್‌ ರಸ್ತೆ, ಡಿಕನ್‌ಸನ್‌ ರಸ್ತೆ, ಲಾಲ್‌ ಬಾಗ್‌ ವೆಸ್ಟ್‌ ಗೇಟ್‌ ರಸ್ತೆ, ಕೆ.ಆರ್‌.ಸರ್ಕಲ್‌, ಆರ್‌.ವಿ.ಕಾಲೇಜು, ಲಾಲ್‌ ಬಾಗ್‌ ಮುಖ್ಯರಸ್ತೆ, ಬಸವನಗುಡಿ 50 ಅಡಿ ಕೆನರಾ ರಸ್ತೆ.

ಸಂಚಾರ ನಿರ್ಬಂಧದ ರಸ್ತೆಗಳು

*ಮಾಗಡಿಯಿಂದ ಬೆಂಗಳೂರಿಗೆ ಬರುವ ವಾಹನಗಳು ತಾವರೆಕೆರೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಹೆಮ್ಮಿಗೆಪುರ-ಕೊಮ್ಮಘಟ್ಟಮೂಲಕ ಮೈಸೂರು ರಸ್ತೆಗೆ ತೆರಳಬೇಕು.
*ಮಾಗಡಿಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತಾವರೆಕೆರೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸೊಂಡೆಕೊಪ್ಪ-ನೆಲಮಂಗಲ ಮೂಲಕ ಸಂಚರಿಸಬೇಕು.
*ತುಮಕೂರಿನಿಂದ ಬಂದು ನೈಸ್‌ ರಸ್ತೆಯಲ್ಲಿ ಸಂಚರಿಸುವ ಸರಕು ವಾಹನಗಳು ನೆಲಮಂಗಲ ಸೊಂಡೆಕೊಪ್ಪ ಬೈಪಾಸ್‌ನಲ್ಲಿ ಬಲ ತಿರುವು ಪಡೆದು ಸೊಂಡೇಕೊಪ್ಪ-ತಾವರೆಕೆರೆ- ಹೆಮ್ಮಿಗೆಪುರ-ಕೊಮ್ಮಘಟ್ಟಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬೇಕು.
*ನಗರದ ಒಳ ಭಾಗದಿಂದ ಮಾಗಡಿ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಎಂಸಿ ಸರ್ಕಲ್‌ನಲ್ಲಿ ಎಡ ತಿರುವು ಪಡೆದು ಮೈಸೂರು ರಸ್ತೆ ಕೆಂಗೇರಿ- ಕೊಮ್ಮಘಟ್ಟ- ಹೆಮ್ಮಿಗೆಪುರ-ತಾವರೆಕೆರೆ ಮೂಲಕ ತೆರಳಬೇಕು.
*ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್ನಲ್ಲಿ ಮೈಸೂರು ರಸ್ತೆಗೆ ಚಲಿಸಿ ಕೆಂಗೇರಿ-ಆರ್‌ ಆರ್‌ ಕಾಲೇಜು ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಚರಿಸಬಹುದು.
*ಸಿಎಂಟಿಐ ಜಂಕ್ಷನ್‌ನಿಂದ ನಾಯಂಡಹಳ್ಳಿ ಮೈಸೂರು ಕಡೆಗೆ ಹೋಗುವ ವಾಹನಗಳು ಗೊರಗುಂಟೆಪಾಳ್ಯ-ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ-ಎಂಸಿ ಸರ್ಕಲ್‌- ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು.
*ಹಳೇ ರಿಂಗ್‌ ರಸ್ತೆಯಲ್ಲಿ ಕೆಂಗೇರಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ಉಲ್ಲಾಳ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಉಲ್ಲಾಳ ವಿಲೇಜ್‌-ರಾಮಸಂದ್ರ ಬ್ರಿಡ್ಜ್‌-ಹೆಮ್ಮಿಗೆಪುರ-ತಾವರೆಕೆರೆ ಮೂಲಕ ತುಮಕೂರು ರಸ್ತೆಗೆ ಸಂಚರಿಸಬಹುದು.