ಮೋದಿ ದಾವಣಗೆರೆ ರೋಡ್ ಶೋ ವೇಳೆ ಭದ್ರತಾ ವೈಫಲ್ಯ, ಯುವಕನ ನಡೆಯಿಂದ ಆತಂಕಗೊಂಡ ಭದ್ರತಾ ಪಡೆ!
ದಾವಣಗೆರೆಯಲ್ಲಿ ರೋಡ್ ಶೋ ಮೂಲಕ ಪ್ರಧಾನಿ ಮೋದಿ ವಿಜಯ ಸಂಕಲ್ಪ ವೇದಿಕೆಗೆ ಆಗಮಿಸಿದ್ದರು. ಆದರೆ ಈ ರೋಡ್ ಶೋ ವೇಳೆ ಭದ್ರತಾ ವೈಫಲ್ಯ ಸಂಭವಿಸಿದೆ. ಯುವಕನೋರ್ವ ಬ್ಯಾರಿಕೇಡ್ ಹಾರಿ ಮೋದಿಯತ್ತ ಓಡಿದ್ದಾನೆ. ತಕ್ಷಣವೇ ಪೊಲೀಸರು ಯುವಕನ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ದಾವಣಗೆರೆ(ಮಾ.25): ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶ ಮುಗಿಸಿ ವಾಪಸ್ ದೆಹಲಿಗೆ ಮರಳಿದ್ದಾರೆ. ಆದರೆ ದಾವಣಗೆರೆ ಪೊಲೀಸರಿಗೆ ತಲೆನೋವು ಹೆಚ್ಚಾಗಿದೆ. ಇದೀಗ ಪ್ರಧಾನಿ ಮೋದಿ ಭದ್ರತಾ ಪಡೆಗೆ ಕೈಕಟ್ಟಿ ಉತ್ತರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಕಾರಣ ದಾವಣಗೆರೆಯಲ್ಲಿ ಮೋದಿ ರ್ಯಾಲಿಯಲ್ಲಿ ನಡೆದ ಭದ್ರತಾ ವೈಫಲ್ಯ. ಪ್ರಧಾನಿ ಮೋದಿ ತೆರೆದ ವಾಹನದ ಮೂಲಕ ವಿಜಯ ಸಂಕಲ್ಪ ಯಾತ್ರಾ ಸಮಾವೇಶದ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಯುವಕನೋರ್ವ ಬ್ಯಾರಿಕೇಡ್ ಹಾರಿ ಮೋದಿ ಬಳಿ ತೆರಳಲು ಯತ್ನಿಸಿದ್ದಾನೆ. ಆದರೆ ಏಕಾಏಕಿ ಯುವಕ ನುಗ್ಗಿದ ಕಾರಣ ಪೊಲೀಸರು ಹಾಗೂ ಭದ್ರತಾ ಪಡೆ ಒಂದು ಕ್ಷಣ ಆತಂಕಗೊಂಡಿತ್ತು. ತಕ್ಷಣವೇ ಪೊಲೀಸರು ಯುವಕನ ವಶಕ್ಕೆ ಪಡೆದು ಇದೀಗ ವಿಚಾರಣೆ ಆರಂಭಿಸಿದ್ದಾರೆ.
ದಾವಣಗೆರೆಯ ವಿಜಯ ಸಂಕಲ್ಪ ಸಮಾವೇಶ ವೇದಿಕೆಗೆ ಪ್ರಧಾನಿ ಮೋದಿ ತೆರೆದ ವಾಹನದ ಮೂಲಕ ಆಗಮಿಸಿದ್ದರು. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಜನರ ನಡುವಿನಿಂದಲೇ ಮೋದಿ ವೇದಿಕೆಗೆ ಆಗಮಿಸಿದ್ದರು. ವೇದಿಕೆಯಿಂದ ಕೆಲ ದೂರಿಂದ ಮೋದಿ ತೆರೆದ ವಾಹನದ ಮೂಲರ ರೋಡ್ ಶೋ ನಡೆಸಿದರು. ರಸ್ತೆಯ ಎಡ ಭಾಗದಲ್ಲಿ ಬೃಹತ್ ವೇದಿಕೆ ಹಾಕಲಾಗಿತ್ತು. ಬಲ ಬದಿಗೆ ಮೋದಿಗೆ ಸ್ವಾಗತ ನೀಡಲು ಕಾರ್ಯಕರ್ತರು, ಅಭಿಮಾನಿಗಳು ನಿಂತಿದ್ದರು. ಜನರು ಮೋದಿ ರೋಡ್ ಶೋಗೆ ಅಡ್ಡಿಪಡಿಸದಂತೆ ಬ್ಯಾರಿಕೇಡ್ ಹಾಕಲಾಗಿತ್ತು.
ಜನರ ಮಧ್ಯದಿಂದಲೇ ರೋಡ್ ಶೋ ಮೂಲಕ ವಿಜಯ ಸಂಕಲ್ಪ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ!
ಮೋದಿ ಅಭಿಮಾನಿಯೊಬ್ಬ ಬ್ಯಾರಿಕೇಡ್ ಹಾರಿ ನೇರವಾಗಿ ಮೋದಿ ರೋಡ್ ಶೋದತ್ತ ಧಾವಿಸಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಹಾಗೂ ಭದ್ರತಾ ಪಡೆ ತಕ್ಷಣವೇ ಕಾರ್ಯಪ್ರವೃತ್ತರಾಗಿದೆ. ಬಳಿಕ ಯುವಕನ ವಶಕ್ಕೆ ಪಡೆದ ಪೊಲೀಸರು ದಾವಣಗೆರೆ ಪೊಲೀಸ್ ಠಾಣೆಗೆ ರವಾನಿಸಿದ್ದರು. ಮೋದಿ ಕಾರ್ಯಕ್ರಮ ಮುಗಿಸಿದ ಬೆನ್ನಲ್ಲೇ ಪೊಲೀಸ್ ಹಿರಿಯ ಅಧಿಕಾರಿಗಳು ದಾವಣಗೆರೆ ಠಾಣೆಗೆ ಆಗಮಿಸಿ ಯುವಕನ ವಿಚಾರಣೆ ಆರಂಭಿಸಿದ್ದಾರೆ.ಇತ್ತ ಮೋದಿ ಭದ್ರತಾ ಪಡೆ ಈ ಕುರಿತು ವಿವರಣೆ ಕೇಳಿದೆ. ಇದೀಗ ದಾವಣೆಗೆರೆ ಪೊಲೀಸರು ಯುವಕನ ಸಂಪೂರ್ಣ ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನ ಕುರಿತು ಪ್ರತಿಕ್ರಿಯೆ ನೀಡಿರುವ ಎಡಿಜಿಪಿ ಅಲೋಕ್ ಕುಮಾರ್, ಯಾವುದೇ ಭದ್ರತಾ ವೈಫಲ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೋದಿಯತ್ತ ಯುವಕನೋರ್ವ ನುಗ್ಗುವ ವಿಫಲ ಯತ್ನ ಮಾಡಿದ್ದಾನೆ. ತಕ್ಷಣವೇ ನಾನು ಹಾಗೂ ಎಸ್‌ಪಿಜಿ ಯವಕನ ಹಿಡಿಯಲಾಗಿದೆ. ಪ್ರಧಾನಿ ಮೋದಿಗಿಂತ ಹಲವು ದೂರದಲ್ಲೇ ಯುವಕನ ವಶಕ್ಕೆ ಪಡೆಯಲಾಗಿದೆ. ಭದ್ರತಾ ವೈಫಲ್ಯಕ್ಕೆ ಯಾವುದೇ ಅವಕಾಶ ನೀಡಿಲ್ಲ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ದಾವಣೆಗೆರೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಡಬಲ್ ಎಂಜಿನ್ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ತಲುಪಿಸಲು ಮನವಿ ಮಾಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ದವೂ ಮೋದಿ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ತವರು ಕಲಬುರಗಿಯಲ್ಲಿ ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಗೆದ್ದುಕೊಂಡಿತು. ಇದು ವಿಜಯ ಸಂಕಲ್ಪ ಯಾತ್ರೆಗೆ ಶುಭಸಂಕೇತವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದು ಡಬಲ್ ಎಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರವುದು ಖಚಿತ ಎಂದು ಮೋದಿ ಹೇಳಿದ್ದಾರೆ.
ವಿಜಯ ಸಂಕಲ್ಪ ಅಲ್ಲ, ವಿಜಯ ಮಹೋತ್ಸವ ಸಮಾವೇಶ' ರಣಕಹಳೆ ಮೊಳಗಿಸಿದ ನಮೋ!