ಏ.30ಕ್ಕೆ ಕೋಲಾರ, ಚನ್ನಪಟ್ಟಣ, ಮೈಸೂರಲ್ಲಿ ಪ್ರಧಾನಿ ಮೋದಿ ಸಮಾವೇಶ: ಬೃಹತ್ ರೋಡ್ ಶೋ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ, ಏ.30ರಂದು ಕೋಲಾರ, ಚನ್ನಪಟ್ಟಣ ಹಾಗೂ ಮೈಸೂರಿನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಚನ್ನಪಟ್ಟಣ/ಕಲಬುರಗಿ (ಏ.23): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ, ಏ.30ರಂದು ಕೋಲಾರ, ಚನ್ನಪಟ್ಟಣ ಹಾಗೂ ಮೈಸೂರಿನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ, ಮೇ 2ರಂದು ಕಲಬುರಗಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಜೊತೆಗೆ, ಮೇ 6ರಂದು ಚಿತ್ತಾಪುರದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಚನ್ನಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಏ.30ರಂದು ಒಂದೇ ದಿನ ರಾಜ್ಯದಲ್ಲಿ ಮೂರು ಕಡೆ ಮೋದಿಯವರ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ ಕೋಲಾರದಲ್ಲಿ ಸಮಾವೇಶ ನಡೆಯಲಿದೆ. ಬಳಿಕ, ಮಧ್ಯಾಹ್ನ 2 ಗಂಟೆಗೆ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ಸುಮಾರು 10 ವಿಧಾನಸಭಾ ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 2ರಿಂದ 3 ಲಕ್ಷ ಮಂದಿ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಬಳಿಕ, ಮೈಸೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ ಎಂದು ತಿಳಿಸಿದರು.
ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ: ಸಚಿವ ಅಶೋಕ್
ಕಲಬುರಗಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮೇ 2ರಂದು ಮೋದಿಯವರು ಕಲಬುರಗಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಜೊತೆಗೆ, ಮೇ 6ರಂದು ಚಿತ್ತಾಪುರದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಮತ್ತೀಕರೆ ಬಳಿ ಸ್ಥಳ ಗುರುತು: ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಈಗಾಗಲೇ ಚನ್ನಪಟ್ಟಣದ ಮತ್ತೀಕೆರೆ ಬಳಿ ಸ್ಥಳವನ್ನು ಗೊತ್ತುಪಡಿಸಲಾಗಿದೆ. ವಿಧಾನಪರಿಷತ್ ಸದಸ್ಯ ಯೋಗೇಶ್ವರ್ ಹಾಗೂ ಇತರೆ ಮುಖಂಡರು ಜಾಗವನ್ನು ನೋಡಿ ಗೊತ್ತುಪಡಿಸಿ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ನೀಡಲಾಗಿದೆ. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುವ ಸಾಧ್ಯತೆ ಇರುವುದರಿಂದ ಮತ್ತೀಕೆರೆ ಬಳಿ ಗುರುತಿಸಿರುವ ಜಾಗ ಸುಮಾರು 30ರಿಂದ 40 ಎಕರೆ ವಿಸ್ತೀರ್ಣವಿದ್ದು, ಎರಡು ಜಿಲ್ಲೆಗಳ ಜನರನ್ನು ಒಗ್ಗೂಡಿಸಲು ಸೂಕ್ತ ಎಂದು ಹೇಳಲಾಗಿದೆ.
ಸಿಎಂ ಸ್ಥಾನ ಬಿಟ್ಟ ಮೇಲೆ ಬಿಎಸ್‌ವೈ ವರ್ಚಸ್ಸು ಹೆಚ್ಚಿದೆ: ಬಿ.ವೈ.ವಿಜಯೇಂದ್ರ
ಎಸ್‌ಪಿಜಿ ಒಪ್ಪಿಗೆ ಬಾಕಿ: ಜಾಗ ಮತ್ತು ಸಮಾವೇಶಕ್ಕೆ ಹಾಕಬೇಕಿರುವ ಶಾಮಿಯಾನ ಮತ್ತಿತರ ವಿವರಗಳ ಕುರಿತು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಇನ್ನೊಂದು ಎರಡು ಮೂರು ದಿನಗಳಲ್ಲಿ ಎಸ್‌ಪಿಜಿ ಅಧಿಕಾರಿಗಳ ತಂಡ ಮತ್ತೀಕೆರೆಯಲ್ಲಿ ಪ್ರಧಾನಿ ಸಮಾವೇಶಕ್ಕೆ ಗೊತ್ತುಪಡಿಸಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಎಸ್‌ಪಿಸಿ ತಂಡ ಒಪ್ಪಿಗೆ ಸೂಚಿಸಿದ ನಂತರ ಸಮಾವೇಶಕ್ಕೆ ತಯಾರಿಗಳು ಶುರುವಾಗಲಿದೆ ಎಂಬ ಮಾಹಿತಿ ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.