Asianet Suvarna News Asianet Suvarna News

ಕಾಂಗ್ರೆಸ್‌, ಬಿಜೆಪಿ ನಾಯಕರ ನಡುವೆ ಅಕ್ಕಿ ಹಣ ಕಿತ್ತಾಟ: ಮತ್ತೆ ಘರ್ಷಣೆ

ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಅಕ್ಕಿ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ. 

Rice money tussle between Congress and BJP leaders Clash again gvd
Author
First Published Jun 30, 2023, 4:23 AM IST

ಬೆಂಗಳೂರು (ಜೂ.30): ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಅಕ್ಕಿ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ. ಅಕ್ಕಿ ಬದಲು ಹಣ ಕೊಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಎಚ್‌.ಕೆ.ಪಾಟೀಲ್‌ ಮತ್ತಿತರ ಹಿರಿಯ ಸಚಿವರು, ದುಡ್ಡು ಕೊಡಿ ಎಂದು ಬೊಬ್ಬೆ ಹೊಡೆದವರೇ ಬಿಜೆಪಿಯವರು. ಇದೀಗ ಆ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ಆರ್‌.ಅಶೋಕ್‌ ಮತ್ತು ಸಂಸದ ಪ್ರತಾಪ್‌ ಸಿಂಹ, ಅಕ್ಕಿ ಬದಲು ಹಣ ನೀಡಲು ಸಲಹೆ ನೀಡಿದಾಗ ಮುಖ್ಯಮಂತ್ರಿಗಳೇ ಆಕ್ಷೇಪ ಎತ್ತಿದ್ದರು. ಇದೀಗ ಹಣ ಕೊಡಲು ಮುಂದಾಗಿದ್ದಾರೆ. ಪಡಿತರದಾರರಿಗೆ ಅಕ್ಕಿ ಬದಲು ಹಣ ಕೊಡುವುದೇ ಆದರೆ ಐದು ಕೆ.ಜಿ.ಗಲ್ಲ 10 ಕೆ.ಜಿ.ಅಕ್ಕಿಗೆ ಹಣ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಮನಸ್ಸು ಕೆಡಿಸುತ್ತಿದ್ದೀರಿ: ಪ್ರತಿ ಕೆ.ಜಿ.ಅಕ್ಕಿಗೆ ಮಾರ್ಕೆಟ್‌ನಲ್ಲಿ .60 ಇದೆ. ಸರ್ಕಾರ ಮಾರುಕಟ್ಟೆದರ ನೋಡಿಕೊಂಡು ಹಣ ಕೊಡಬೇಕು ಎಂಬ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌, ಮಾರುಕಟ್ಟೆಯಲ್ಲಿ ಅಷ್ಟುದರ ಇದೆಯಾ? ಮಾಜಿ ಮುಖ್ಯಮಂತ್ರಿಗಳು, ಜವಾಬ್ದಾರಿ ಸ್ಥಾನದಲ್ಲಿದ್ದವರು. ಅವರಿಗೆ ಅಕ್ಕಿ ದರ ಅಷ್ಟಿದೆ ಎಂದು ಹೇಳಿದವರು ಯಾರು? ಹಾಗಿದ್ದರೆ ಕೇಂದ್ರ ಸರ್ಕಾರದ ಫುಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಖಾಸಗಿಯವರಿಗೆ ಯಾಕೆ .34ಗೆ ಅಕ್ಕಿ ಮಾರಾಟ ಮಾಡುತ್ತಿದೆ ಎಂದು ಸಚಿವ ಪ್ರಶ್ನಿಸಿದರು. ‘ಬಡ​ವ​ರಿಗೆ ಅಕ್ಕಿ ಕೊಡೋದಕ್ಕೆ ಹೋದ್ವಿ, ಅದಕ್ಕೂ ಕಲ್ಲು ಹಾಕಿದ್ರಿ. ಈಗ ಅಕ್ಕಿ ಬದ​ಲು ಹಣ ಕೊಡುತ್ತಿದ್ದೇವೆ. ಇದ​ರಲ್ಲೂ ರಾಜ​ಕೀಯ ಮಾಡಿ ಜನರ ಮನಸ್ಸು ಕೆಡಿಸುತ್ತಿದ್ದೀರಿ?’ ಎಂದು ಕಿಡಿಕಾರಿದರು.

ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು: ಸಂಸದ ಬಿ.ವೈ.ರಾ​ಘ​ವೇಂದ್ರ

ಕಾನೂನು ಸಚಿವರ ಹೇಳಿಕೆಗೆ ದನಿಗೂಡಿಸಿರುವ ಮಧ್ಯಮ ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ತಾತ್ಕಾಲಿಕವಾಗಿ ಹಣ ಕೊಡಲು ಸರ್ಕಾರ ನಿರ್ಧರಿಸಿದೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಸಿ.ಟಿ.ರವಿ ಅವರು ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದಿದ್ದರು. ಆದರೆ ಈಗ ಏಕಾಏಕಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪುಂಗಿ ಊದುತ್ತಿದ್ದಾರೆ. ನಾವು ಹಣ ಕೊಟ್ಟರೆ ಅಕ್ಕಿ ಕೊಡಿ ಎನ್ನುತ್ತಿದ್ದಾರೆ. ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕೆಂದೇ ನಾವು ಜನರ ಖಾತೆಗೆ ಹಣ ಹಾಕುತ್ತಿದ್ದೇವೆ. ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದರು.

ದುಡ್ಡು ತಿನ್ನೋಕಾಗುತ್ತಾ ಅಂದಿದ್ರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ತಾತ್ಕಾಲಿಕವಾಗಿ ಪಡಿತರದಾರರಿಗೆ ಹಣ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯಂಗ್ಯವಾಡಿರುವ ಮಾಜಿ ಸಚಿವ ಆರ್‌.ಅಶೋಕ್‌, ಕೊಟ್ಟಮಾತಿನಂತೆ ಅಕ್ಕಿ ನೀಡಲು ಸಾಧ್ಯವಾಗದಿದ್ದರೆ ಜನರಿಗೆ ಹಣ ನೀಡಿ ಎಂದು ಹಿಂದೆ ಬಿಜೆಪಿ ಸಲಹೆ ನೀಡಿತ್ತು. ಆಗ ದುಡ್ಡು ತಿನ್ನೋಕಾಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಶ್ನಿಸಿದ್ದರು. ಈಗ ಅದು ಹೇಗೆ ದುಡ್ಡು ಕೊಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ‘ನೀವು ಹೇಳಿದ್ದು 10 ಕೆ.ಜಿ. ಅಕ್ಕಿ ನೀಡುತ್ತೇವೆಂದು. ಇದೀಗ 5 ಕೆ.ಜಿ. ಅಕ್ಕಿಗೆ ಹಣ ನೀಡುತ್ತಿದ್ದೀರಿ. 10 ಕೆ.ಜಿ. ಅಕ್ಕಿಗೆ ಸಮನಾಗಿ ಹಣ ನೀಡಿ ನುಡಿದಂತೆ ನಡೆಯಿರಿ’ ಎಂದು ಸಂಸದ ಪ್ರತಾಪ್‌ ಸಿಂಹ ತಾಕೀತು ಮಾಡಿದರು.

ಮಾರ್ಕೆಟ್‌ನಲ್ಲಿ ಕೆ.ಜಿ ಅಕ್ಕಿಗೆ .60 ಇದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಅವರಿಗೆ ಅಕ್ಕಿ ದರ ಹೇಳಿದವರು ಯಾರು? ಹಾಗಿದ್ದರೆ ಎಫ್‌ಸಿಐನವರು ಏಕೆ .34ಕ್ಕೆ ಅಕ್ಕಿ ಮಾರುತ್ತಾರೆ?
- ಎಚ್‌.ಕೆ.ಪಾಟೀಲ್‌, ಸಚಿವ

ಆ ಪುಣ್ಯಾತ್ಮನ ಹೇಳಿಕೆಗಳಿಂದಲೇ ಬಿಜೆಪಿಗೆ ದೊಡ್ಡ ಡ್ಯಾಮೇಜ್‌: ಯತ್ನಾಳ್‌ ವಿರುದ್ಧ ಮುರುಗೇಶ್‌ ನಿರಾಣಿ ವಾಗ್ದಾಳಿ

ನೀವು ಹೇಳಿದ್ದು 10 ಕೆ.ಜಿ. ಅಕ್ಕಿ ನೀಡುತ್ತೇವೆಂದು. ಈಗ 5 ಕೆ.ಜಿ. ಅಕ್ಕಿಗೆ ಹಣ ನೀಡುತ್ತಿದ್ದೀರಿ. 10 ಕೆ.ಜಿ. ಅಕ್ಕಿಗೆ ಸಮನಾಗಿ ಹಣ ನೀಡಿ ನುಡಿದಂತೆ ನಡೆಯಿರಿ.
- ಪ್ರತಾಪ್‌ ಸಿಂಹ, ಬಿಜೆಪಿ ಸಂಸದ

Latest Videos
Follow Us:
Download App:
  • android
  • ios