ಅಮರನಾಥಕ್ಕೆ ತೆರಳಿದ್ದ ರಾಜ್ಯ ಯಾತ್ರಿಕರು ಸೇಫ್: ಯಾತ್ರೆಗೆ ತೆರಳಿದ್ದು 80 ಅಲ್ಲ, 300 ಕನ್ನಡಿಗರು
ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದು 80 ಅಲ್ಲ, 300ಕ್ಕೂ ಹೆಚ್ಚು ಯಾತ್ರಿಕರು. ಅವರೆಲ್ಲರೂ ಸುರಕ್ಷಿತವಾಗಿದ್ದು, ಭಾನುವಾರ ತಾವು ಉಳಿದಿದ್ದ ಬೇಸ್‌ಕ್ಯಾಂಪ್‌ನಿಂದ ಪ್ರಯಾಣ ಮುಂದುವರಿಸಿದ್ದಾರೆ.
ಬೆಂಗಳೂರು (ಜು.10): ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದು 80 ಅಲ್ಲ, 300ಕ್ಕೂ ಹೆಚ್ಚು ಯಾತ್ರಿಕರು. ಅವರೆಲ್ಲರೂ ಸುರಕ್ಷಿತವಾಗಿದ್ದು, ಭಾನುವಾರ ತಾವು ಉಳಿದಿದ್ದ ಬೇಸ್‌ಕ್ಯಾಂಪ್‌ನಿಂದ ಪ್ರಯಾಣ ಮುಂದುವರಿಸಿದ್ದಾರೆ. ಭಾನುವಾರ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಗದಗಿನ 23 ಯಾತ್ರಾರ್ಥಿಗಳು ಸಾಮಾನ್ಯ ಹೆಲಿಕಾಪ್ಟರ್‌ನಲ್ಲೇ ಬೇಸ್‌ಕ್ಯಾಂಪ್‌ನಿಂದ ನೀಲ್‌ಗ್ರಥ್ ಕ್ಯಾಂಪ್‌ಗೆ ಬಂದು, ಅಲ್ಲಿಂದ ಶ್ರೀನಗರದಲ್ಲಿ ಹಿಂದೆ ಉಳಿದುಕೊಂಡಿದ್ದ ಹೋಟೆಲ್‌ಗೆ ಆಗಮಿಸಿದ್ದಾರೆ. ಬುಧವಾರದ ವೇಳೆಗೆ ಗದಗಿಗೆ ಬರುವುದಾಗಿ ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಿಂದ ತೆರಳಿರುವ ಐವರು ಯಾತ್ರಿಕರು ಪಂಚತರಣಿ ತಲುಪಿದ್ದು, ಸೋಮವಾರ ಅಲ್ಲಿಂದ ಅಮರನಾಥ ದೇವಾಲಯಕ್ಕೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದಾರೆ. ಬೆಂಗಳೂರು ಹಾಗೂ ಮಾಗಡಿಯಿಂದ ತೆರಳಿರುವ 52 ಯಾತ್ರಿಕರು ಲಡಾಕ್ ಹಾಗೂ ಬೇಸ್‌ಕ್ಯಾಂಪ್‌ನಲ್ಲಿ ಸುರಕ್ಷಿತವಾಗಿದ್ದು, ಸೋಮವಾರ ಶ್ರೀನಗರಕ್ಕೆ ತೆರಳಿ ಮಂಗಳವಾರ ಬೆಂಗಳೂರಿಗೆ ಆಗಮಿಸುವುದಾಗಿ ಹೇಳಿದ್ದಾರೆ. ದ.ಕ. ಹಾಗೂ ಉಡುಪಿ ಜಿಲ್ಲೆಯ 20 ಯಾತ್ರಾರ್ಥಿಗಳು ಭಾನುವಾರ ಪಹಾಲ್ಗಮ್ ಬೇಸ್‌ಕ್ಯಾಂಪ್ ತಲುಪಿದ್ದು, ಸೋಮವಾರ ಅಮರನಾಥ ಯಾತ್ರೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಧಾರವಾಡ ಜಿಲ್ಲೆಯ ಕರಡಿಗುಡ್ಡದಿಂದ ಹಾಗೂ ಕಲಬುರಗಿಯಿಂದ ತೆರಳಿರುವ ತಲಾ ಐವರು ಯಾತ್ರಿಕರು ಕೂಡ ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ. ಈ ಮಧ್ಯೆ, ಗದಗಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಎಚ್.ಕೆ.ಪಾಟೀಲ, ರಾಜ್ಯದಿಂದ ಅಮರನಾಥ ಯಾತ್ರೆಗೆ 300ಕ್ಕೂ ಹೆಚ್ಚು ಯಾತ್ರಿಕರು ತೆರಳಿದ್ದು, ಅವರೆಲ್ಲಾ ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ. ಅವರನ್ನು ಸುರಕ್ಷಿತವಾಗಿ ಕರೆ ತರಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.
ಅಮರನಾಥ ಭೂಕುಸಿತ: 80 ಕನ್ನಡಿಗರು ಅತಂತ್ರ, ರಕ್ಷಣೆಗೆ ರಾಜ್ಯ ಸರ್ಕಾರದಿಂದ ತಂಡ ರವಾನೆ
ಕಂದಾಯ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಗೂ ಸುನೀಲ್ ಕುಮಾರ ನೇತೃತ್ವದ ರಾಜ್ಯದ ಅಧಿಕಾರಿಗಳ ತಂಡ ಯಾತ್ರಾರ್ಥಿಗಳು ಹಾಗೂ ಸ್ಥಳೀಯ ಸರಕಾರದೊಂದಿಗೆ ಸಮನ್ವಯ ಸಾಧಿಸಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ. ಅಮರನಾಥ ಯಾತ್ರೆಗೆ ತೆರಳುವ ಮಾರ್ಗದಲ್ಲಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಮಾರ್ಗಮಧ್ಯೆ ಸಿಲುಕಿಕೊಂಡು ಯಾತ್ರಿಕರು ಸಂಕಷ್ಟದಲ್ಲಿದ್ದರು. ಭಾನುವಾರ ಅಲ್ಲಿ ಕಡಿಮೆಯಾಗಿದ್ದು, ಪರಿಸ್ಥಿತಿ ಸುಧಾರಿಸಿದೆ ಎಂದು ಅವರು ತಿಳಿಸಿದ್ದಾರೆ.