2028ರ ಹೊತ್ತಿಗೆ ಮಹಿಳಾ ಮೀಸಲಾತಿ ಅಸ್ತಿತ್ವಕ್ಕೆ ಬರಬಹುದು. ಆದ ಕಾರಣ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ತಯಾರಾಗಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮನ್ನು ಯಾರೂ ತಡೆಯುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಹಿಳೆಯರನ್ನು ಉದ್ದೇಶಿಸಿ ಹೇಳಿದರು. 

ಕಲಬುರಗಿ (ಮಾ.09): 2028ರ ಹೊತ್ತಿಗೆ ಮಹಿಳಾ ಮೀಸಲಾತಿ ಅಸ್ತಿತ್ವಕ್ಕೆ ಬರಬಹುದು. ಆದ ಕಾರಣ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ತಯಾರಾಗಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮನ್ನು ಯಾರೂ ತಡೆಯುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಹಿಳೆಯರನ್ನು ಉದ್ದೇಶಿಸಿ ಹೇಳಿದರು. ಕಲಬುರಗಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಮಹಿಳೆಯರು ಅಧಿಕಾರದಲ್ಲಿ ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. 

Add Asianetnews Kannada as a Preferred SourcegooglePreferred

ಈಗ ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಹೆಂಡತಿಯನ್ನು ಸದಸ್ಯೆಯನ್ನಾಗಿಸಿ ಗಂಡ ಅಧಿಕಾರ ಚಲಾಯಿಸುತ್ತಾ ಇರುತ್ತಾನೆ. ಮುಂದಕ್ಕೆ ಇದೆಲ್ಲಾ ಕಡಿಮೆಯಾಗುತ್ತದೆ. ಮಹಿಳೆಯರೇ ಇದನ್ನೆಲ್ಲಾ ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಹೆಣ್ಣು ಮಕ್ಕಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಮುಂದಿನ ದಿನದಲ್ಲಿ‌ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಸಿಗುವುದು ಶತಸಿದ್ಧ. ಅಧಿಕಾರ ಚಲಾಯಿಸಲು ನೀವು ಸಿದ್ಧರಾಗಿ ಎಂದು ಕರೆ ನೀಡಿದರು.

ಸಿಎಂ ಆಗಲು 2 ವರ್ಷದಿಂದ ಡಿಕೆಶಿ ಕಾಯ್ತಿದ್ದಾರೆ: ಸಂಸದ ಗೋವಿಂದ ಕಾರಜೋಳ

ಸೋನಿಯಾ ಗಾಂಧಿ ನಾಯಕತ್ವದಲ್ಲಿ, ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಲು ಹೋಗಿತ್ತು. ಕಾರಣಾಂತರಗಳಿಂದ ಆ ಮಹತ್ವದ ಕಾರ್ಯ ಜಾರಿಗೆ ಬರಲಿಲ್ಲ. ಈಗ ಆ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಮುಂದಿನ ವಿಧಾನಸಭಾ, ಲೋಕಸಭಾ ಚುನಾವಣೆಗೆ ಮಹಿಳಾ ಮೀಸಲಾತಿ ಇರುತ್ತದೆ ಎಂದರು. ಮಹಿಳಾ ಮೀಸಲಾತಿ ಜಾರಿಯಾದರೆ ಇಲ್ಲಿ ಇರುವ ಯಾರ ಸ್ಥಾನ ಹೋಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅಜಯ್ ಸಿಂಗ್, ಅಲ್ಲಮಪ್ರಭು, ಬಿ.ಆರ್.ಪಾಟೀಲ್, ಪ್ರಿಯಾಂಕ್ ಖರ್ಗೆ ಯಾರದ್ದು ಬೇಕಾದರೂ ಆಗಬಹುದು. ಅದಕ್ಕೆ ಈಗಿನಿಂದಲೇ ಸಜ್ಜಾಗಿ ಎಂದರು.

ಹೆಣ್ಣಿಲ್ಲದೇ ಮನೆ ಉದ್ಧಾರವಾಗಲು ಸಾಧ್ಯವಿಲ್ಲ: ಮಣ್ಣಿಲ್ಲದೇ ಮಡಕೆ ಮಾಡಲು ಸಾಧ್ಯವಿಲ್ಲ. ಹೆಣ್ಣಿಲ್ಲದೇ ಮನೆ ಉದ್ಧಾರವಾಗಲು ಸಾಧ್ಯವಿಲ್ಲ. ಈ ಸಮಾಜ ಹಾಗೂ ನಾಗರಿಕತೆ ಕಟ್ಟಿದವರು ಮಹಿಳೆಯರು. ಇಡೀ ಸಂಸಾರದ ಜವಾಬ್ದಾರಿ ಮಹಿಳೆಯರ ಮೇಲೆ ಇರುತ್ತದೆ. ಕೆಆರ್‌ಎಸ್ ಅಣೆಕಟ್ಟು ನಿರ್ಮಾಣದ ವೇಳೆ ಕೆಂಪ ನಂಜಮ್ಮಣ್ಣಿಯವರು ಒಡವೆಗಳನ್ನು ಅಡವಿಟ್ಟು ಸಹಾಯ ಮಾಡಿದರು. ನೆಹರು ಬಾಕ್ರಾನಂಗಲ್ ಅಣೆಕಟ್ಟನ್ನು ಬುಡಕಟ್ಟು ಮಹಿಳೆಯಿಂದ ಉದ್ಘಾಟನೆ ಮಾಡಿಸಿದರು. ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡುವ ಪ್ರಾಶಸ್ತ್ಯವನ್ನು ಇದು ಹೇಳುತ್ತದೆ ಎಂದರು.

ಎಲ್ಲಾ ರಂಗಗಳಲ್ಲೂ ಮಹಿಳೆಯರು ಹೆಸರು ಮಾಡುತ್ತಿದ್ದಾರೆ: ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು ಹೆಣ್ಣು ಮಗಳು. ಸರ್ಕಾರಿ ಶಾಲೆಯಲ್ಲಿ ಓದಿ ಇಡೀ ರಾಜ್ಯದ ಗಮನ ಸೆಳೆದಳು. ಬೆಂಗಳೂರು ಭಾಗದ ಹುಡುಗಿಯರು ಬರಲಿಲ್ಲ ಎಂಬುದನ್ನು ಗಮನಿಸಬೇಕು. ಮಹಿಳೆಯರು ಈಗ ಎಲ್ಲಾ ರಂಗಗಳಲ್ಲೂ ಬೆಳೆಯುತ್ತಿದ್ದಾರೆ. ಮುಂದಕ್ಕೆ ಈ ದೇಶವನ್ನು ಆಳುವ ಶಕ್ತಿ ಮಹಿಳೆಯರಿಗಿದೆ. ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಪ್ರಧಾನಿಯಾಗಿದ್ದರು. ಪಕ್ಷದ ಅಧ್ಯಕ್ಷರಾಗಿದ್ದರು. ಮುಂದಕ್ಕೂ ದೇಶದ ಚುಕ್ಕಾಣಿ ಹಿಡಿಯುವವರು ಇದ್ದಾರೆ. ಶೇ.‌33ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಎಂದರು.

ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ಆಗಿಲ್ಲ: ಡಿ.ಕೆ. ಶಿವಕುಮಾರ್

ಮಹಿಳೆಯರಿಗೆ ಮಾತ್ರ ಅವಕಾಶ ನೀಡಿ: ಮಹಿಳಾ ದಿನಾಚರಣೆಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸಿಕೊಡಬೇಕು. ಪುರುಷರು ವೇದಿಕೆಯ ಕೆಳಗೆ ಕುಳಿತುಕೊಳ್ಳಬೇಕು. ಅವರ ಶಕ್ತಿಯನ್ನು ಈ ಮೂಲಕವೂ ನಾವೆಲ್ಲ ನೋಡಬಹುದು. ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಇದ್ದರೂ ಈ ಭಾಗದ ಮಹಿಳೆಯರ ಆಶೀರ್ವಾದ ಪಡೆಯಬೇಕು ಎಂದು ಬಂದಿದ್ದೇನೆ. ಮಹಿಳಾ ಪರವಾದ ಕಾರ್ಯಕ್ರಮಗಳನ್ನು ಮಹಿಳೆಯರಿಂದಲೇ ನೆರವೇರಿಸಬೇಕು. ಪುರುಷ ಅಧಿಕಾರಿಗಳು ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಲ್ಲಿ ಇರಬಾರದು ಎಂದು ಡಿಸಿಎಂ ಸೂಚನೆ ನೀಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯ ತನಕ ಮಹಿಳೆಯರಿಗೆ ಹೆಚ್ಚು ಒತ್ತನ್ನು ನೀಡುತ್ತಾ ಬಂದಿದೆ. ಹೆಣ್ಣು ಬೆಳೆದರೆ ಸಮಾಜ ಮತ್ತು ಕುಟುಂಬ ಎರಡೂ ಬೆಳೆಯುತ್ತದೆ ಎಂದು ನಂಬಿದ್ದೇವೆ. 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳು ಮಹಿಳೆಯರಿಗೆ ಅನುಕೂಲವಾಗುವಂತಹವು. ನಿಮಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.