ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಲು ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಅದನ್ನು ಸಿದ್ದರಾಮಯ್ಯ ಕಡೆಯವರು ತಡೆಯುತ್ತಿದ್ದಾರೆ ಎಂದು ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.  

ಬೀದರ್‌ (ಮಾ.08): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಲು ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಅದನ್ನು ಸಿದ್ದರಾಮಯ್ಯ ಕಡೆಯವರು ತಡೆಯುತ್ತಿದ್ದಾರೆ ಎಂದು ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಧ್ಯದ ಗೊಂದಲದಿಂದಾಗಿ ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾದರೂ ಅಚ್ಚರಿಯಿಲ್ಲ. 

ಅಷ್ಟಕ್ಕೂ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಕೊನೆಯ ಮುಖ್ಯಮಂತ್ರಿ. ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದರು. ಅವರಲ್ಲಿ ಯಾರೂ ಮುಖ್ಯಮಂತ್ರಿ ಆಗೋದಿಲ್ಲ ಎಂದು ಗೋವಿಂದ ಕಾರಜೋಳ ಭವಿಷ್ಯ ನುಡಿದರು. ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ. ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗಿ ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನಿಂದ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸರ್ವೋದಯ ಸಿದ್ಧಾಂತಕ್ಕೆ ತಿಲಾಂಜಲಿ: ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ಸರ್ವೋದಯದ ಸಿದ್ಧಾಂತಕ್ಕೆ ತಿಲಾಂಜಲಿ ಇಡುವ ಮೂಲಕ ಸಮಾಜದಲ್ಲಿ ಅಸಮಾನತೆ ಮತ್ತು ದ್ವೇಷದ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಬಹಳ ಪ್ರಮುಖವಾದ ನೀರಾವರಿ ಯೋಜನೆಗಳಾದ ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆಗೆ ಒಂದು ರು.ಕೂಡ ಮೀಸಲಿರಿಸಿಲ್ಲ ಹಾಗೂ ನವಲಿ ಮತ್ತು ತುಂಗಾ ಭದ್ರಾ ನದಿಗೆ ಸಮಾನಾಂತರ ಜಲಾಶಯ ನಿರ್ಮಿಸಲು ಕೂಡ ಹಣ ಇಟ್ಟಿಲ್ಲ. 

ಕಾಂಗ್ರೆಸ್‌ ದಲಿತರನ್ನು ಸಿಎಂ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿ: ಸಂಸದ ಗೋವಿಂದ ಕಾರಜೋಳ

ಕೇವಲ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿ ನಡೆಯುತ್ತಾ ಇರುವ ಕಾಮಗಾರಿಗಳ ಪಟ್ಟಿಯನ್ನ ಇವತ್ತು ಆಯವ್ಯಯ ಪುಸ್ತಕದಲ್ಲಿ ಮುದ್ರಿಸಿದ್ದಾರೆ. ಜನರ ಕಲ್ಯಾಣ ಬಯಸದೆ ಜನರಿಗೆ ಮೋಸ ಮಾಡುವಂತಹ ನಿರಾಸಾದಾಯಕ ಬಜೆಟ್ ಆಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯವನ್ನು ಅಭಿವೃದ್ಧಿಯ ದೃಷ್ಟಿಯಲ್ಲಿ 10 ವರ್ಷದಷ್ಟು ಹಿಂದಕ್ಕೆ ತಳ್ಳಿದೆ. ಮುಂಬರುವ ದಿನಗಳಲ್ಲಿ ಅಲ್ಪ ಸಂಖ್ಯಾತರ ಓಲೈಕೆಗಾಗಿ ಸಿದ್ದರಾಮಯ್ಯನವರು ಅಲ್ಪ ಸಂಖ್ಯಾತರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.