Asianet Suvarna News Asianet Suvarna News

ಆಡಳಿತ ಸುಧಾರಣೆಗೆ ಗ್ರಾಪಂಗಳಿಗೆ ರೇಟಿಂಗ್‌ ವ್ಯವಸ್ಥೆ: ಸಚಿವ ಪ್ರಿಯಾಂಕ್‌ ಖರ್ಗೆ

ಗ್ರಾ.ಪಂ. ಸದಸ್ಯರಿಗೆ ತರಬೇತಿ, ಕೆಡಿಪಿ ಸಭೆಗಳಲ್ಲಿ ಹಿರಿಯ ಅಧಿಕಾರಿಗಳು ಕಡ್ಡಾಯ ಭಾಗಿ, ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸೇರ್ಪಡೆ, ಪಿಡಿಒಗಳಿಗೆ ಬಯೋ ಮೆಟ್ರಿಕ್‌ ಹಾಜರಾತಿ ಹಾಗೂ ಗ್ರಾ.ಪಂ.ಗಳಿಗೆ ಗ್ರೇಡಿಂಗ್‌ ಕೊಡುವ ಪದ್ಧತಿ ಜಾರಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು. 
 

Rating system for villages for administrative reform Says Minister Priyank Kharge gvd
Author
First Published Feb 15, 2024, 8:22 PM IST

ವಿಧಾನ ಪರಿಷತ್ (ಫೆ.15): ಗ್ರಾಮ ಪಂಚಾಯಿತಿಗಳು ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಸರ್ಕಾರ ಹಲವು ಕ್ರಮ ಕೈಗೊಳ್ಳಲಾಗಿದೆ, ಪ್ರಮುಖವಾಗಿ ಗ್ರಾ.ಪಂ. ಸದಸ್ಯರಿಗೆ ತರಬೇತಿ, ಕೆಡಿಪಿ ಸಭೆಗಳಲ್ಲಿ ಹಿರಿಯ ಅಧಿಕಾರಿಗಳು ಕಡ್ಡಾಯ ಭಾಗಿ, ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸೇರ್ಪಡೆ, ಪಿಡಿಒಗಳಿಗೆ ಬಯೋ ಮೆಟ್ರಿಕ್‌ ಹಾಜರಾತಿ ಹಾಗೂ ಗ್ರಾ.ಪಂ.ಗಳಿಗೆ ಗ್ರೇಡಿಂಗ್‌ ಕೊಡುವ ಪದ್ಧತಿ ಜಾರಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು. 

ನಿಯಮ 330ರ ಮೇರೆಗೆ ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ, ಅನಿಲ್‌ಕುಮಾರ್‌, ಬಿಜೆಪಿಯ ಡಿ.ಎಸ್‌. ಅರುಣ್‌, ನವೀನ್‌, ಕೇಶವಪ್ರಸಾದ್‌, ಗೋಪಿನಾಥ್‌ ರೆಡ್ಡಿ ಜೆಡಿಎಸ್‌ನ ಮಂಜೇಗೌಡ ಮುಂತಾದವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ವಿಕೇಂದ್ರಿಕರಣದ ಮೂಲಕ ವಿವಿಧ ಇಲಾಖೆಗಳ ಅಧಿಕಾರಗಳನ್ನು ಪಂಚಾಯಿತಿಗಳಿಗೆ ನೀಡಲಾಗಿದೆ. ಗ್ರಾ.ಪಂ.ನಲ್ಲಿ ಕಡ್ಡಾಯವಾಗಿ ಕೆಡಿಪಿ ಸಭೆ ನಡೆಸಿ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಸೂಚಿಸಲಾಗಿದೆ. ಬಾಪೂಜಿ ಕೇಂದ್ರಗಳನ್ನು ಇನ್ನಷ್ಟು ಬಲಿಷ್ಠ ಮಾಡಲಾಗುವುದು. ಪಂಚಾಯಿತಿಗಳ ವಿದ್ಯುತ್‌ ಬಿಲ್‌ ದೊಡ್ಡ ಸಮಸ್ಯೆಯಾಗಿರುವುದರಿಂದ ಬೀದಿ ದೀಪಗಳನ್ನು ಸೋಲಾರ್‌ಗೆ ಪರಿವರ್ತಿಸಲಾಗುವುದು ಎಂದರು. 

6 ತಿಂಗಳಲ್ಲಿ 472 ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿದ್ದೇನೆ: ಸಚಿವ ಪ್ರಿಯಾಂಕ್‌ ಖರ್ಗೆ

ಪಂಚಾಯಿತಿಗಳಿಗೆ ಈಗ ತುರ್ತು ನಿಧಿ ಮೊತ್ತ ಐದು ಸಾವಿರ ರು. ಇದ್ದಿದ್ದು, ಇದನ್ನು ಇನ್ನಷ್ಟು ಹೆಚ್ಚಿಗೆ ಮಾಡಲು ಪರಿಶೀಲಿಸಲಾಗುವುದು. ಸ್ಥಗಿತಗೊಂಡಿರುವ ಶವ ಸಂಸ್ಕಾರ ನಿಧಿ’ ನೀಡಿಕೆ ಪುನಃ ಆರಂಭಿಸಲಾಗುವುದು. ಸಮನ್ವಯತೆ ಕೊರತೆ ನಿವಾರಣೆಗೆ ಪ್ರತಿ ತಿಂಗಳು 2ನೇ ತಾರೀಕು ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಬೇಕು ಎಂದು ಸೂಚಿಸಲಾಗಿದೆ. ಇ-ಸ್ವತ್ತು ವ್ಯವಸ್ಥೆಯಲ್ಲಿನ ತೊಂದರೆ ನಿವಾರಣೆಗೆ ಕಂದಾಯ ಸಚಿವರ ಜೊತೆ ಸಭೆ ನಡೆಸಿ ಪರಿಹರಿಸಲಾಗುವುದು ಎಂದು ಸಚಿವರು ವಿವರಿಸಿದರು.

ಕಲಬುರಗಿ ನೀರಿನ ಸಮಸ್ಯೆ ನೀಗಿಸಲು ಮಹಾರಾಷ್ಟ್ರ ಜೊತೆ ಚರ್ಚೆ: ಪ್ರಿಯಾಂಕ್‌ ಖರ್ಗೆ

ಶಿಕ್ಷಣದ ಕೊರತೆ ಇರುವ ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿಶೇಷ ತರಬೇತಿ ನೀಡಲಾಗುವುದು. ಗ್ರಾಮ ಪಂಚಾಯಿತಿಗಳ ಆಡಳಿತ, ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ ಮುಂತಾದ ಅಂಶ ಪರಿಗಣಿಸಿ ಗ್ರೇಡಿಂಗ್‌, ರೇಟಿಂಗ್‌ ಕೊಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಇ-ಹಾಜರಾತಿ ಕಡ್ಡಾಯ ಮಾಡಲಾಗಿದೆ.ತಮ್ಮ ವ್ಯಾಪ್ತಿಯಲ್ಲಿ ಇರುವ ಬಗ್ಗೆ ನಿಗಾ ವಹಿಸಲು ಜಿಯೋ ಫೆನ್ಸಿಂಗ್‌ ಜಾರಿ ಮಾಡಲಾಗುವುದು, ಕೌನ್ಸಿಲಿಂಗ್‌ ಮೂಲಕ ಪಿಡಿಒಗಳ ವರ್ಗಾವಣೆ ಮಾಡಲು ಉದ್ದೇಶಿಲಾಗಿದೆ. ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇರುವ ಕಂಪನಿಗಳು ತಮ್ಮ ಸಿಎಸ್‌ಆರ್‌ ನಿಧಿಯನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಶಾಲೆ, ಶೌಚಾಲಯ ನಿರ್ಮಾಣಕ್ಕೆ ಬಳಸುವಂತೆ ಸರ್ಕಾರ ಪತ್ರ ಬರೆಯಲು ಕ್ರಮ ವಹಿಸಲಿದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Follow Us:
Download App:
  • android
  • ios