ಭಾರತದಲ್ಲೇ ಅತಿ ದೊಡ್ಡ ಭ್ರಷ್ಟ ಸರಕಾರ ಕರ್ನಾಟಕ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಸರಕಾರವಾಗಿದ್ದು, ದೇಶದಲ್ಲಿ ಇಷ್ಟುಅಗೌರವವಾಗಿ ಯಾವುದೇ ಸರಕಾರ ನಡೆದುಕೊಂಡಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಕಿಡಿಕಾರಿದರು. 

ಕೋಲಾರ (ಫೆ.16): ಭಾರತದಲ್ಲೇ ಅತಿ ದೊಡ್ಡ ಭ್ರಷ್ಟ ಸರಕಾರ ಕರ್ನಾಟಕ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಸರಕಾರವಾಗಿದ್ದು, ದೇಶದಲ್ಲಿ ಇಷ್ಟುಅಗೌರವವಾಗಿ ಯಾವುದೇ ಸರಕಾರ ನಡೆದುಕೊಂಡಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಕಿಡಿಕಾರಿದರು. ನಗರದ ಕಾಬಾ ಪ್ಲಾಜಾದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಗೃಹಲಕ್ಷ್ಮಿ ಮತ್ತು ಭಾಗ್ಯಜ್ಯೋತಿ ಜಿಲ್ಲಾ ಮಟ್ಟದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶೇ.40 ಕಮೀಷನ್‌ ಪಡೆಯುವುದು ಎಲ್ಲಿಯೂ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಇದೆ. ಇಲಾಖೆಗಳಲ್ಲಿ ಸಿಬ್ಬಂದಿಯಿಂದ ಹಿಡಿದು ಮುಖ್ಯಮಂತ್ರಿ ಮಟ್ಟದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಬಗ್ಗೆ ಲಿಖಿತ ದೂರನ್ನು ಕಾಂಗ್ರೆಸ್‌ನವರಲ್ಲ, ಗುತ್ತಿಗೆದಾರರ ಸಂಘದವರು ನೀಡಿದ್ದಾರೆ. ಶೇ.40 ಕಮೀಷನ್‌ ನೀಡದಿದ್ದರೆ ಖಾಸಗಿ ಶಾಲೆಗೆ ಯಾವುದೇ ಅನುಕೂಲ ನೀಡುವುದಿಲ್ಲವೆಂದು, ಶಾಲೆಗಳ ಆಡಳಿತ ಮಂಡಳಿಯವರೂ ಆರೋಪಿಸಿದ್ದಾರೆ. ಗದಗ ಜಿಲ್ಲೆಯ ಮಠವೊಂದರ ಸ್ವಾಮೀಜಿ ಬಳಿ ಶೇ.30 ಕಮೀಷನ್‌ ಕೇಳಿದ್ದಾರೆ. ಮಠಾ​ಧೀಶರನ್ನೂ ಕಮೀಷನ್‌ ವಿಚಾರದಲ್ಲಿ ಬಿಡಲಿಲ್ಲ. ಆದರೆ, ಅವರಿಗೆ 10 ಶೇ. ರಿಯಾಯಿತಿ ನೀಡಿದ್ದಾರೆ ಎಂದು ಲೇವಡಿ ಮಾಡಿದರು.

ಕೋಲಾರದಿಂದ ಸ್ಪರ್ಧೆ, ಸಿದ್ದು ಕೈಗೊಂಡ ತಪ್ಪು ನಿರ್ಧಾರ: ಸಿ.ಎಂ.ಇಬ್ರಾಹಿಂ

ಹಣ ಕೊಟ್ಟರೆ ಸಿಎಂ ಸ್ಥಾನವೂ ಸಿಗುತ್ತದೆ ಎಂದು ರಾಜ್ಯ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್‌ ಆಪಾದನೆ ಮಾಡಿದ್ದಾರೆ. ಶಿವಮೊಗ್ಗದ ಸಂತೋಷ್‌ ಪಾಟೀಲ್‌, ತುಮಕೂರು ರಾಜೇಂದ್ರ ಎಂಬ ಗುತ್ತಿಗೆದಾರರು ಕಮೀಷನ್‌ ನೀಡಲು ಶಕ್ತಿ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡರು. ಬೆಂಗಳೂರಿನಲ್ಲಿ ಇರುವ ಗುತ್ತಿಗೆದಾರರೊಬ್ಬ ಗನ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರಿಗೆ ಇಂತಹ ಪರಿಸ್ಥಿತಿ ಇದ್ದರೆ ಇನ್ನು ರಾಜ್ಯದ ಸಾಮಾನ್ಯ ಜನರ ಗತಿಯೇನು ಎಂದು ಪ್ರಶ್ನಿಸಿ, 90 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಗುತ್ತಿಗೆದಾರರು 8 ಮಂತ್ರಿಗಳು, 17 ಶಾಸಕರ ಮೇಲೆ ಮಾಡಿ ದಾಖಲೆ ಇರುವುದಾಗಿ ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆಗಳೂ ಸಹ ಗಗನಕ್ಕೇರಿದ್ದು, ಜನಸಾಮಾನ್ಯರು ಯಾವ ರೀತಿ ಕುಟುಂಬ ನಿಭಾಯಿಸಬೇಕು ಎನ್ನುವುದು ಅರ್ಥವಾಗುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್‌ ಅ​ಕಾರಕ್ಕೆ ಬಂದರೆ, 2 ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿ ಮಾಡುವುದಾಗಿ ತಿಳಿಸಲಾಗುತ್ತಿದೆ. ಪ್ರತಿ ಮನೆ, ಕುಟುಂಬಕ್ಕೂ 200 ಯೂನಿಟ್‌ ವಿದ್ಯುತ್‌ ಉಚಿತ ಹಾಗೂ ಮನೆ ನಿರ್ವಹಣೆಗಾಗಿ ಪ್ರತಿ ಮಹಿಳೆಯ ಖಾತೆಗೆ ನೇರವಾಗಿ 2000 ರು.ಗಳನ್ನು ವರ್ಗಾವಣೆ ಮಾಡಲಾಗುವುದು. ಹೀಗಾಗಿ 2 ಗ್ಯಾರೆಂಟಿ ಕಾರ್ಯಕ್ರಮಗಳ ಕಾರ್ಡನ್ನು ನೀಡಲಾಗುವುದು. ಕಾರ್ಡ್‌ ಇರುವ ಮನೆಗಳಿಗೆ ಸೌಲಭ್ಯಗಳನ್ನು ತಲುಪಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಕಾಂಗ್ರೆಸ್‌ ಸರಕಾರ ಈ ಹಿಂದೆ ನೀಡಿದಕ್ಕಿಂತಲೂ ಹೆಚ್ಚಿನ ಯೋಜನೆಗಳ ಘೋಷಣೆಯನ್ನು ಸದ್ಯದಲ್ಲೇ ಘೋಷಣೆ ಮಾಡಲಾಗುವುದು. ದೇಶದಲ್ಲಿ ಕೋಮುಗಲಭೆ ತೊಲಗಿ ಎಲ್ಲರೂ ಸಮನಾಗಿ ಬಾಳಿ ಬದುಕಿ ಬಾಳಬೇಕಾದರೆ ಕಾಂಗ್ರೆಸ್‌ ಅ​ಧಿಕಾರಕ್ಕೆ ಬರಬೇಕಿದ್ದು, ನಾವೆಲ್ಲರೂ ಉತ್ತಮವಾಗಿ ಕೆಲಸ ಮಾಡಬೇಕು ಎಂದರು. ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಇತಿಹಾಸವಿದೆ. ಕಾರಣಾಂತರಗಳಿಂದ ಹೆಚ್ಚು ಕಡಿಮೆ ಆಗಿದೆ. ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳೋಣ. ಮೊದಲು ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸಿಕೊಂಡು, ಆ ನಂತರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಸಂಸದರನ್ನು ಗೆಲ್ಲಿಸಿಕೊಳ್ಳೋಣ ಎಂದರು.

ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಶಾಸಕರಾದ ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್‌, ಎಂಎಲ್ಸಿಗಳಾದ ನಜೀರ್‌ ಅಹಮದ್‌, ಎಂ.ಎಲ್‌.ಅನಿಲ್‌ಕುಮಾರ್‌, ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್‌, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್‌, ಜಿಲ್ಲಾ ವಕ್ತಾರ ಎಲ್‌.ಎ.ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು, ಮುಖಂಡರಾದ ಸವಿತಾ ಮಂಜುನಾಥ್‌, ರತ್ನಮ್ಮ, ಯಲ್ಲಪ್ಪ ಇದ್ದರು.

ಸಿದ್ದರಾಮಯ್ಯ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ

ಎಲ್ಲಾ ಹುದ್ದೆಗಳನ್ನೂ ಮಾರಾಟಕ್ಕೂ ಇಡಲಾಗಿದೆ. ಇಷ್ಟಾದರೂ ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ಧೈರ್ಯವೂ ಇಲ್ಲ ಎಂದು ವ್ಯಂಗ್ಯವಾಡಿದರು.
- ರಣದೀಪ್‌ ಸಿಂಗ್‌ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ