ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಅಧಿವೇಶನಕ್ಕೆ ಹಾಜರಾದ ಮಾಜಿ ಸಿಎಂ ಸಿದ್ದರಾಮಯ್ಯ, ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತು ಗಮನ ಸೆಳೆದರು. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಶಾಸಕರು ಮತ್ತು ಸಚಿವರು ಆತ್ಮೀಯವಾಗಿ ಮಾತನಾಡಿಸಿದರು.
ಬೆಂಗಳೂರು (ಆ.15): ವಿಧಾನಮಂಡಲದ ಅಧಿವೇಶನಕ್ಕೆ ಮೊದಲ ದಿನ ಗೈರು ಹಾಜರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ದಿನವಾದ ಶುಕ್ರವಾರ ಕಲಾಪಕ್ಕೆ ಹಾಜರಾದರು.
ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಮೊದಲ ಬಾರಿ ಆಧಿವೇಶನಕ್ಕೆ ಆಗಮನ
ವಿಧಾನಸಭೆಗೆ ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಸಿದ್ದರಾಮಯ್ಯ ಸದನಕ್ಕೆ ಆಗಮಿಸಿದರು. ನೂತನ ಸಭಾಧ್ಯಕ್ಷರ ಬಗ್ಗೆ ಸಚಿವ ಯು.ಟಿ.ಖಾದರ್ ಮಾತನಾಡುವಾಗ ಸಿದ್ದರಾಮಯ್ಯ ಸದನಕ್ಕೆ ಬಂದರು. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಶಾಸಕರಾಗಿ ಮೊದಲ ಬಾರಿಗೆ ಅಧಿವೇಶನದಲ್ಲಿ ಭಾಗಿಯಾಗಿದ್ದು, ಆಡಳಿತ ಪಕ್ಷದ ಸದಸ್ಯರ ಕೊನೆಯ ಸಾಲಿನಲ್ಲಿ ಕುಳಿತು ಕೊಂಡಿದ್ದರು. ಈ ವೇಳೆ, ಕಾಂಗ್ರೆಸ್‌ನ ಕೆಲ ಶಾಸಕರು ಹಾಗೂ ಸಚಿವರು ಸಿದ್ದರಾಮಯ್ಯ ಬಳಿಗೆ ಬಂದು ಅವರನ್ನು ಮಾತನಾಡಿಸಿದರು.
ಸಿದ್ದರಾಮಯ್ಯರ ಬಳಿ ಕುಳಿತ ವಿಜಯೇಂದ್ರ
ಬಳಿಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿದ್ದರಾಮಯ್ಯ ಅವರ ಬಳಿ ತೆರಳಿ ಪಕ್ಕದ ಆಸನದಲ್ಲಿ ಕುಳಿತು ಆತ್ಮೀಯವಾಗಿ ಮಾತನಾಡಿಸಿದರು. ಬಳಿಕ, ಸಚಿವರಾದ ಪುಟ್ಟರಂಗ ಶೆಟ್ಟಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಇನ್ನಿತರ ಕೆಲ ಸಚಿವರು ಹಾಗೂ ಶಾಸಕರು ಸಿದ್ದರಾಮಯ್ಯ ಅವರ ಬಳಿ ತೆರಳಿ ಕುಶಲೋಪರಿ ವಿಚಾರಿಸಿದರು.


