ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೆಲ ಕಾಂಗ್ರೆಸ್‌ ಮುಖಂಡರು ಕೋಲಾರಕ್ಕೆ ಕರೆ ತಂದು ಬಲಿಪಶು ಮಾಡಲು ಮುಂದಾಗಿದ್ದಾರೆ. 

ಕೋಲಾರ (ಫೆ.13): ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೆಲ ಕಾಂಗ್ರೆಸ್‌ ಮುಖಂಡರು ಕೋಲಾರಕ್ಕೆ ಕರೆ ತಂದು ಬಲಿಪಶು ಮಾಡಲು ಮುಂದಾಗಿದ್ದಾರೆ. ಕೊನೆಯ ಚುನಾವಣೆಯಲ್ಲಿ ಅವರನ್ನು ಸೋಲಿಸಿ, ಹಾಳು ಮಾಡದೆ ಬೇರೆ ಕ್ಷೇತ್ರದ ಕಡೆಗೆ ಕಳುಹಿಸುವುದು ಸೂಕ್ತವೆಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಸಲಹೆ ನೀಡಿದರು.

ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ಜೆಡಿಎಸ್‌ ಪಕ್ಷದಿಂದ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಕೋಲಾರ ಕ್ಷೇತ್ರದಲ್ಲಿ ದೇವೇಗೌಡರು ಹಾಗೂ ಕುಮಾರಣ್ಣನ ಪಡೆಯಿದ್ದು, ಕೋಲಾರ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ರನ್ನು ಗೆಲ್ಲಿಸಿಕೊಳ್ಳಲು ಸಿದ್ದವಾಗಿದ್ದಾರೆ. ಹೀಗಾಗಿ ಕೆಲ ಕಾಂಗ್ರೆಸ್‌ ಮುಖಂಡರು ಅವರನ್ನು ದಿಕ್ಕುತಪ್ಪಿಸಿ ಇಲ್ಲಿಗೆ ಕರೆತರುವ ಬದಲು, ಸುರಕ್ಷಿತ ಕ್ಷೇತ್ರಕ್ಕೆ ಕಳುಹಿಸಿದರೆ ಕೊನೆಯ ಚುನಾವಣೆಯಲ್ಲಾದರೂ ಗೆಲ್ಲುತ್ತಾರೆ. ಇಲ್ಲವಾದರೆ ಇಲ್ಲಿ ಸೋಲನುಭವಿಸಿ ಅವಮಾನಕ್ಕೀಡಾಗುವುದು ಖಚಿತ ಎಂದರು.

ಸಿಂದಗಿಯ ಧನಲಕ್ಷ್ಮೀ ಜ್ಯುವೆಲರಿ ಬಳಿ ಗುಂಡಿನ ದಾಳಿ: ಮೂವರು ಸ್ಥಳದಿಂದ ಪರಾರಿ

ಕ್ಷೇತ್ರದ ಅಭಿವೃದ್ಧಿಗೆ ಸಿಎಂಆರ್‌ ಗೆಲ್ಲಿಸಿ: ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಬೇಕಾದರೆ, ಈಗಾಗಲೇ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಸಿಎಂಆರ್‌ ಶ್ರೀನಾಥ್‌ರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಟ್ಟರೆ, ಸ್ವಾಭಿಮಾನಿ ಕೋಲಾರವನ್ನು ನಿರ್ಮಿಸಲಿದ್ದಾರೆ. ಇನ್ನುಳಿದ 60 ದಿನಗಳಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಮೈಮರೆಯದೆ ಕೆಲಸ ಮಾಡಿ ಚುನಾವಣೆ ಎದುರಿಸಬೇಕಾಗಿದೆ ಎಂದರು. ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ, ಕಳೆದ ಚುನಾವಣೆಯಲ್ಲಿ ಕೆ.ಶ್ರೀನಿವಾಸಗೌಡರನ್ನು 45 ಸಾವಿರ ಮತಗಳ ಅಂತರದಲ್ಲಿ ತನು-ಮನ-ಧನ ಅರ್ಪಿಸಿ ಗೆಲ್ಲಿಸಿದ್ದೇವು. ಆದರೆ ಅದೇ ವ್ಯಕ್ತಿ ಇಂದು ಜೆಡಿಎಸ್‌ನಿಂದ ದೂರವಾಗಿ ಹೊರಗಿನ ವ್ಯಕ್ತಿಗೆ ಮಣೆ ಹಾಕಲು ಹೊರಟಿದ್ದು, ಇಂತಹ ವ್ಯಕ್ತಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗಿದೆ ಎಂದರು.

ಸ್ವಾಭಿಮಾನ ಕೋಲಾರಕ್ಕಾಗಿ ಬೆಂಬಲಿಸಿ: ಕೋಲಾರ ಜೆಡಿಎಸ್‌ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿ.ಬೈರೇಗೌಡರ ಆದರ್ಶಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ ಅಧಿಕಾರ ಇಲ್ಲದೇ ಹೋದರೂ ನನ್ನ ಜನಪರ ಕೆಲಸಗಳಿಂದ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಲಂಚಮುಕ್ತ ಆಡಳಿತ, ಸ್ವಾಭಿಮಾನ ಕೋಲಾರಕ್ಕೆ ನನ್ನನ್ನು ಬೆಂಬಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. 

ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ವೇಮಗಲ್‌ನಿಂದ ತಿಪ್ಪೇನಹಳ್ಳಿವರೆಗೆ ನಿಖಿಲ್‌ಕುಮಾರಸ್ವಾಮಿ ಹಾಗೂ ಮುಖಂಡರನ್ನು ಬೈಕ್‌ರಾರ‍ಯಲಿ ಮೂಲಕ ಕರೆತರಲಾಯಿತು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ನೆರವೇರಿಸಲಾಯಿತು. ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ, ಮಾಜಿ ಎಂಎಲ್‌ಸಿ ತೂಪಲ್ಲಿ ಚೌಡರೆಡ್ಡಿ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಜಮೀರ್‌ ಅಹಮದ್‌, ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಮಾಲೂರು ಜೆಡಿಎಸ್‌ ಅಭ್ಯರ್ಥಿ ಜಿ.ಇ.ರಾಮೇಗೌಡ, ಕೆಜಿಎಫ್‌ ಅಭ್ಯರ್ಥಿ ರಮೇಶ್‌ ಬಾಬು, ಮುಖಂಡರಾದ ಬಣಕನಹಳ್ಳಿ ನಟರಾಜ್‌, ವಕ್ಕಲೇರಿ ರಾಮು ಮತ್ತಿತರರು ಇದ್ದರು.

ಧರ್ಮ ಕಾರ್ಯ​ಗಳು ನಿರಂತರ ನಡೆ​ಯ​ಬೇ​ಕು: ಬಿ.ಎಸ್‌.ಯಡಿಯೂರಪ್ಪ

ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ: ಕೋಲಾರ ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ಜೆಡಿಎಸ್‌ ನಡೆದ ಜೆಡಿಎಸ್‌ ಸಮಾವೇಶಕ್ಕೆ ಆಗಮಿಸಿದ್ದ 6 ಸಾವಿರ ಮಂದಿ ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ನುಕುನುಗ್ಗಲು ಇಲ್ಲದ್ದಂತೆ 20 ಊಟದ ಕೌಂಟರ್‌ಗಳನ್ನು ಮಾಡಲಾಗಿತ್ತು. ಸಮಾವೇಶಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ ಊಟ ಬಡಿಸಿದರು.